ಹುಬ್ಬಳ್ಳಿ: ಸಮಾಜದಲ್ಲಿ ಸಾಕಷ್ಟು ವಿರೋಧಗಳನ್ನು ಎದುರಿಸಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯವನ್ನು ಪತ್ರಕರ್ತರು ಮಾಡುತ್ತಾರೆ. ಪತ್ರಕರ್ತರಿಗೆ ಸಾಕಷ್ಟು ಸೌಲಭ್ಯಗಳಿಲ್ಲ. ಶೀಘ್ರದಲ್ಲಿಯೇ ಅವರಿಗೆ ಹು-ಧಾ ಮಹಾನಗರ ಪಾಲಿಕೆ ವತಿಯಿಂದ ಆರೋಗ್ಯ ವಿಮೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗುವುದು. ಮಹಾನಗರ ಪಾಲಿಕೆ ಪತ್ರಕರ್ತರಿಗೆ ಸೌಲಭ್ಯ ಒದಗಿಸಲು ಸದಾ ಬದ್ಧವಿದೆ ಎಂದು ಮೇಯರ್ ಜ್ಯೋತಿ ಪಾಟೀಲ ಹೇಳಿದರು.
ಮಹಿಳಾ ದಿನಾಚರಣೆ ಕಾರ್ಯಕ್ರಮ ಹೊಸತನ ಒಳಗೊಂಡಿರಬೇಕು. ಎಲ್ಲರೂ ಅಚ್ಚುಕಟ್ಟಾಗಿ ರಂಗೋಲಿ ಹಾಕಿದ್ದಾರೆ. ತಮ್ಮ ಮನೆ ಯಜಮಾನರ ಮೇಲಿನ ಪ್ರೀತಿ ಬಿಂಬುಸವ ರೀತಿ ರಂಗೋಲಿಗಳು ಮೂಡಿಬಂದಿವೆ. ಮಹಿಳೆಯರು ಸಾಕಷ್ಟು ಕೆಲಸಗಳನ್ನು ಮಾಡಿ, ಮಕ್ಕಳನ್ನು ಸಂಬಾಳಿಸಿ ಮನೆಯನ್ನು ನಿಭಾಯಿಸುತ್ತಾಳೆ. ಪತ್ರಕರ್ತರು ಸದಾ ಕಾರ್ಯನಿರತವಾಗಿರುವವರು. ಅವರನ್ನು ನಗುಮೊಗದಿಂದ ಮನೆಗೆ ಸ್ವಾಗತಿಸುವವರು ಮಹಿಳೆಯರು ಎಂದರು.
ಮಜೇಥಿಯಾ ಫೌಂಡೇಶನ್ ಅಧ್ಯಕ್ಷೆ ನಂದಿನಿ ಕಶ್ಯಪ ಮಾತನಾಡಿ, ಮಹಿಳೆ ನಾಲ್ಕು ಗೋಡೆಗೆ ಮಾತ್ರ ಸೀಮಿತವಾಗಿರದೆ ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ಇನ್ನಿತರ ಎಲ್ಲ ಕ್ಷೇತ್ರಗಳಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ, ಗೌರವಿಸಲು ಹಾಗೂ ಇತರರಿಗೆ ಮಾದರಿಯಾಗಲು ಮಹಿಳಾ ದಿನಾಚರಣೆ ಸಹಕಾರಿಯಾಗಿದೆ ಎಂದರು.ಮಹಿಳೆಯರಲ್ಲಿ ಅಡಗಿರುವ ಪ್ರತಿಭೆ ಇಂದಿನ ರಂಗೋಲಿ ಹಾಗೂ ಅಡುಗೆ ಸ್ಪರ್ಧೆಯಲ್ಲಿ ಕಂಡುಬಂದಿದೆ. ಮಹಿಳಾ ದಿನವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಬಾರದು. ಪ್ರತಿದಿನವನ್ನು ಮಹಿಳಾ ದಿನವನ್ನಾಗಿ ಆಚರಿಸುವ ಮೂಲಕ ಮಹಿಳೆಯರನ್ನು ಗೌರವಯುತವಾಗಿ ಕಾಣಬೇಕು ಎಂದು ಹೇಳಿದರು.
ಸ್ಪರ್ಧೆ ವಿಜೇತರು
ಅಡುಗೆ ಸ್ಪರ್ಧೆಯಲ್ಲಿ ಶುಭಾ ಹೆಗಡೆ (ಪ್ರಥಮ), ಸುನಂದಾ ಮೆಣಸಿನಕಾಯಿ (ದ್ವಿತೀಯ), ಲಲಿತಾ ಹೂಗಾರ (ತೃತೀಯ), ರೂಪಾ ಕಣವಿ, ಸಾವಿತ್ರಿ ಶಿವಪೂರ, ವೇದಾ ಕಮತರ, ಮಂಜುಳಾ ಹುಲಕೊಪ್ಪ, ಕವಿತಾ ಬಡಿಗೇರ ಸಮಾಧಾನಕರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.