ಕೊಪ್ಪಳ: ಸಾಲ ಮಾಡಿ ನಿವೇಶನ ಖರೀದಿ ಮಾಡಿದ್ದರೆ ಇಂದು ಹತ್ತು ಲಕ್ಷ ಬೆಲೆ ಬಾಳುವ ನಿವೇಶನ ಇರುತ್ತಿತ್ತು. ಆದರೆ ಸರ್ಕಾರದಿಂದ ಸೂರು ಸಿಗುತ್ತದೆ ಎಂಬ ಆಸೆಯಿಂದ ಸಾಲ ಮಾಡಿ ವಂತಿಗೆ ಪಾವತಿಸಿದರೂ ಇದುವರೆಗೂ ಸೂರು ಸಿಕ್ಕಿಲ್ಲ.
ಹೀಗೆ ಒಬ್ಬಿಬ್ಬರಲ್ಲ, ನೂರಾರು ಜನರು ವಂತಿಗೆ ಪಾವತಿಸಿದ್ದಾರೆ. ಆದರೂ ಒಬ್ಬರಿಗೂ ಸೂರು ಸಿಕ್ಕಿಲ್ಲ. ವಂತಿಗೆ ನೀಡಿದವರಿಗೆ ಈಗ ನಿವೇಶನದ ಹಕ್ಕುಪತ್ರ ನೀಡಿದ್ದಾರೆ. ಅದುವೇ ತುಸು ನೆಮ್ಮದಿ ಎನ್ನುವಂತಾಗಿದೆ.
ಹಿರೇಸಿಂದೋಗಿ ರಸ್ತೆಯಲ್ಲಿ 2 ಸಾವಿರ ನಿವೇಶನಗಳಲ್ಲಿ ಈಗಾಗಲೇ 1400 ಹಂಚಿಕೆ ಮಾಡಿದ್ದಾರೆ. ಸೂರು ನೀಡುವ ಯೋಜನೆ ಕೈಬಿಟ್ಟು ಕೇವಲ ನಿವೇಶನ ನೀಡಿದ್ದಾರೆ. ಆದರೆ, ಸರ್ಕಾರ ಈ ಮೊದಲು ಫಲಾನುಭವಿಗಳ ಸಹಭಾಗಿತ್ವದಲ್ಲಿ ಆಶ್ರಯ ಮನೆ ನಿರ್ಮಾಣ ಮಾಡುವ ಯೋಜನೆ ರೂಪಿಸಿತ್ತು. ಅದರಲ್ಲಿ ಎರಡು ಲಕ್ಷ ರುಪಾಯಿ ವೆಚ್ಚದಲ್ಲಿ ಮನೆ ನಿರ್ಮಾಣ ಮಾಡುವ ಯೋಜನೆ ರೂಪಿಸಿ, ಫಲಾನುಭವಿಗಳು ₹30 ಸಾವಿರ ಪಾವತಿ ಮಾಡಬೇಕು. ಬ್ಯಾಂಕ್ ಸಾಲದಿಂದ ಲಕ್ಷ ಪಡೆದು ಉಳಿದ ಹಣ ಸರ್ಕಾರ ನೀಡಿ, ಮನೆಯನ್ನು ಪೂರ್ಣಗೊಳಿಸಿ ಕೊಡಬೇಕು ಎನ್ನುವ ಯೋಜನೆ ಇದಾಗಿತ್ತು. ಸರ್ಕಾರದಿಂದ ಮತ್ತು ಫಲಾನುಭವಿಗಳಿಂದ ಬಂದಿರುವ ಹಣ ಬಳಕೆ ಮಾಡಿ ಕೆಲವೇ ಕೆಲವು ಮನೆ ನಿರ್ಮಾಣ ಮಾಡಲಾಗಿದೆ. ಅದು ಸಹ ಪೂರ್ಣಗೊಂಡಿಲ್ಲ.ಪಾಳುಬಿದ್ದ ಮನೆಗಳು: ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಮತ್ತು ಆಡಳಿತ ವ್ಯವಸ್ಥೆಯ ಬೇಜವಾಬ್ದಾರಿಯಿಂದ ಮಹತ್ವಾಕಾಂಕ್ಷಿ ಯೋಜನೆಯೊಂದು ಹಳ್ಳ ಹಿಡಿದಿದೆ. ಇದ್ಯಾವುದನ್ನು ಇದುವರೆಗೂ ಸರಿಪಡಿಸುವ ಯತ್ನ ನಡೆಯುತ್ತಲೇ ಇಲ್ಲ.
ಮೂಲಸೌಕರ್ಯವಿಲ್ಲ:ಮಹತ್ವಾಕಾಂಕ್ಷಿ ಯೋಜನೆಯಾಗಿದ್ದರೂ ಎರಡು ಸಾವಿರ ಆಶ್ರಯ ಮನೆಯ ಯೋಜನೆ ಇದಾಗಿದ್ದರೂ ಯಾವುದೇ ಮೂಲಭೂತ ಸೌಕರ್ಯ ನೀಡಿಲ್ಲ. ಹೀಗಾಗಿ, ಪಾಳು ಬಿದ್ದಂತೆ ಆಗಿದ್ದು, ಯಾರು ಸಹ ಇದುವರೆಗೂ ಅಲ್ಲಿ ವಾಸಿಸುವ ಯೋಚನೆ ಮಾಡುತ್ತಿಲ್ಲ.