ಕನ್ನಡಪ್ರಭ ವಾರ್ತೆ ಹೊಸಪೇಟೆ
ಬೆಂಗಳೂರಿನ ವಿಕಾಸಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಹಾಗೂ ಉನ್ನತ ಮಟ್ಟದ ಆರೋಗ್ಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಹೊಸಪೇಟೆಯ ಸಾರ್ವಜನಿಕ 100 ಹಾಸಿಗೆ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಗಳ ಕುರಿತು ವಿಶೇಷ ಸಭೆ ನಡೆಯಿತು.
ನಗರದ ಉಪವಿಭಾಗ ಮಟ್ಟದ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಯನ್ನು ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸುವುದನ್ನು ರದ್ದುಪಡಿಸಬೇಕು. ಜಿಲ್ಲಾ ಆಸ್ಪತ್ರೆಯನ್ನು 300 ಹಾಸಿಗೆಯ ಬದಲಾಗಿ 200 ಹಾಸಿಗೆ ಆಸ್ಪತ್ರೆಯನ್ನಾಗಿಸಿ, ಅವಶ್ಯಕತೆ ಇರುವ ವೈದ್ಯಕೀಯ ಉಪಕರಣಗಳು, ಮಾನವ ಸಂಪನ್ಮೂಲ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿ ತ್ವರಿತವಾಗಿ ಆಸ್ಪತ್ರೆಯನ್ನು ಪ್ರಾರಂಭಿಸಬೇಕು ಎಂದು ಆರೋಗ್ಯ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.ಕೆಕೆಆರ್‌ಡಿಬಿ ಒದಗಿಸಿರುವ ₹15 ಕೋಟಿ ಅನುದಾನವನ್ನು ಅವಶ್ಯಕತೆ ಇರುವ ಕಟ್ಟಡ ಕಾಮಗಾರಿಗಳಿಗೆ ಬಳಸಿಕೊಂಡು, ಉಳಿದ ಹಣದಲ್ಲಿ ಜಿಲ್ಲಾ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ಬಳಸಿಕೊಳ್ಳುವುದು ಮತ್ತು ಆಸ್ಪತ್ರೆಗೆ ಬೇಕಾಗುವ ವೈದ್ಯಕೀಯ ಉಪಕರಣಗಳಿಗೆ ಹೆಚ್ಚುವರಿ ಅನುದಾನವನ್ನು ಕೆಕೆಆರ್‌ಡಿಬಿ, ಡಿಎಂಎಫ್ ಅಥವಾ ಇಲಾಖೆಯ ಯಾವುದಾದರೂ ಒಂದು ಅನುದಾನವನ್ನು ಬಳಸಿಕೊಂಡು ಮಾನವ ಸಂಪನ್ಮೂಲವನ್ನು 200 ಹಾಸಿಗೆಯ ಆಸ್ಪತ್ರೆಗೆ ಒಳಪಟ್ಟು ಸರ್ಕಾರದಿಂದ ಮಂಜೂರಾತಿಯನ್ನು ಪಡೆದು ಜಿಲ್ಲಾ ಆಸ್ಪತ್ರೆಯನ್ನು ಶೀಘ್ರವಾಗಿ ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಹೊಸಪೇಟೆಯಲ್ಲಿ ಹೃದಯ ರೋಗ ವಿಭಾಗವನ್ನು ಸರ್ಕಾರದಿಂದ ಅನುಮತಿ ಪಡೆದು ತ್ವರಿತವಾಗಿ ಪ್ರಾರಂಭಿಸಬೇಕು. ಈಗಾಗಲೇ ಈ ಕುರಿತು ಶಾಸಕ ಎಚ್.ಆರ್. ಗವಿಯಪ್ಪನವರು ಕೂಡ ಸುದೀರ್ಘ ಪತ್ರ ವ್ಯವಹಾರ ನಡೆಸಿದ್ದಾರೆ. ಹಾಗಾಗಿ ಈ ಬಗ್ಗೆ ತ್ವರಿತ ಕ್ರಮವಹಿಸಬೇಕು ಎಂದು ಸಚಿವರು ಸೂಚಿಸಿದರು. ಸಭೆಯಲ್ಲಿದ್ದ ಶಾಸಕ ಎಚ್.ಆರ್. ಗವಿಯಪ್ಪನವರು ಜಿಲ್ಲಾಸ್ಪತ್ರೆಯನ್ನು ತ್ವರಿತವಾಗಿ ಆರಂಭಿಸಿದರೆ ಜಿಲ್ಲೆ ಬಡ, ಮಧ್ಯಮ ವರ್ಗದ ರೋಗಿಗಳಿಗೆ ಅನುಕೂಲ ಆಗಲಿದೆ. ಹೃದಯ ರೋಗ ವಿಭಾಗ ತೆರೆದರೆ, ಜಿಲ್ಲೆಯ ಬಡ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.