ಕನ್ನಡಪ್ರಭ ವಾರ್ತೆ ನಾಗಮಂಗಲ
ಸೀಳು ತುಟಿ ಮತ್ತು ಸೀಳು ಅಂಗುಳ ಶಾಪವಲ್ಲ. ಆಕಸ್ಮಿಕವಾಗಿ ಬಂದಿರುವ ಕಾಯಿಲೆಯನ್ನು ಸೂಕ್ತ ಚಿಕಿತ್ಸೆ ನೀಡಿ ಪರಿಹರಿಸಬಹುದು. ಗ್ರಾಮೀಣ ಭಾಗದಲ್ಲಿ ಸೀಳು ತುಟಿ, ಸುಟ್ಟ ಗಾಯಗಳಂತಹ ಅನೇಕ ವಿರೂಪಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಬಡಜನರ ಪೋಷಕರು ಹಾಗೂ ಮಕ್ಕಳ ಮುಖದಲ್ಲಿ ನಗು ಮತ್ತು ಸೌಂದರ್ಯ ತರಿಸುವುದು ಹೆಮ್ಮೆಯ ವಿಷಯ. ಆದಿಚುಂಚನಗಿರಿ ಆಸ್ಪತ್ರೆ ರೋಟೋಪ್ಲಾಸ್ಟ್ ಜೊತೆಗೂಡಿ ಅನೇಕ ಜನೋಪಯೋಗಿ ಮತ್ತು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಸಾರ್ಥಕತೆಯತ್ತ ಸಾಗುತ್ತಿದೆ ಎಂದರು.
ಖಾಸಗಿ ಸುದ್ದಿ ವಾಹಿನಿ ಸಿಇಒ ಎಸ್.ರವಿಕುಮಾರ್ ಮಾತನಾಡಿ, ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಶ್ರೀಗಳು ಸಮಾಜದಲ್ಲಿ ಗ್ರಾಮೀಣ ಭಾಗದ ಬಡಜನರ ಸೇವೆ ಮಾಡುತ್ತಿರುವುದು ಯಾವುದೇ ಸರ್ಕಾರ ಮಾಡಲಾಗದಂತಹ ಸೇವೆಗೆ ಸಮ. ಇದು ಹೃದಯಕ್ಕೆ ಮುಟ್ಟುವ ಕಾಯಕ. ಬಡವರ ಜೀವನವನ್ನು ಮೇಲೆತ್ತುವ ಕಾರ್ಯ ಎಂದು ಶಿಬಿರದ ಮಹತ್ವಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಬೆಂಗಳೂರು ಬ್ರೈನ್ ಹಾಸ್ಪಿಟಲ್‌ನ ನ್ಯೂರೋಸರ್ಜನ್ ಡಾ.ಎನ್.ಕೆ.ವೆಂಕಟರಮಣ ಮಾತನಾಡಿ, ಶ್ರೀಮಠದ ಗುರಿ ಮತ್ತು ದೃಷ್ಟಿಕೋನ ಉದಾತ್ತವಾದದ್ದು. ಒಂದು ಸರ್ಕಾರ ಮಾಡಲಾಗದಂತಹ ಅನ್ನ, ಅಕ್ಷರ ಮತ್ತು ಆರೋಗ್ಯ ಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಶ್ರೀ ಮಠವು ಅನನ್ಯ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
10 ದಿನಗಳ ಕಾಲ ನಡೆದ ಶಿಬಿರದಲ್ಲಿ ಸೀಳು ತುಟಿ, ಅಂಗುಳ, ಸುಟ್ಟಗಾಯದ ಗುರುತುಗಳು, ವಿವಿಧ ಗಾಯಗಳು ಹಾಗೂ ಜನ್ಮ ವೈಕಲ್ಯಗಳಿಗೆ ಪುನರ್ ನಿರ್ಮಾಣಾತ್ಮಕ ಪ್ಲಾಸ್ಟಿಕ್ ಸರ್ಜರಿ ಮತ್ತು ವಿವಿಧ ಶಸ್ತ್ರ ಚಿಕಿತ್ಸೆಗಳನ್ನು 42 ಮಕ್ಕಳು ಸಂಪೂರ್ಣ ಉಚಿತವಾಗಿ ಪಡೆದುಕೊಂಡರು.ಯುಎಸ್‌ಎ ರೋಟೋಪ್ಲಾಸ್ಟ್ ಇಂಟರ್‌ನ್ಯಾಷನಲ್‌ನ ಮಿಷನ್ ಡೈರೆಕ್ಟರ್ ಥಾಮಸ್ ಕೆನ್ನೆತ್ ಫಾಕ್ಸ್, ವೈದ್ಯಕೀಯ ನಿರ್ದೇಶಕ ಡಾ.ಗ್ಯಾರಿ ಡೇವಿಡ್, ರೋಟೋಪ್ಲಾಸ್ಟ್ ಇಂಟರ್ ನ್ಯಾಷನಲ್‌ನ ಡಿಸ್ಟ್ರಿಕ್ಟ್ ಗವರ್ನರ್ ಪ್ರೊ.ಎಲಿಜಬೆತ್ ಚೆರಿಯನ್, ಶ್ರೀಮಠದ ಸತ್ಕೀರ್ತಿನಾಥಸ್ವಾಮೀಜಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಸ್.ಎನ್.ಶ್ರೀಧರ, ರಿಜಿಸ್ಟ್ರಾರ್ ಡಾ. ಸಿ.ಕೆ.ಸುಬ್ಬರಾಯ, ಆದಿಚುಂಚನಗಿರಿ ಆಸ್ಪತ್ರೆ ಪ್ರಾಂಶುಪಾಲ ಡಾ. ಎಂ.ಜಿ. ಶಿವರಾಮು ಸೇರಿದಂತೆ ಹಲವರು ಇದ್ದರು.