ತುಂಗಭದ್ರಾ ನೀರು ಸೇವನೆಯಿಂದ ಆರೋಗ್ಯ ಹದಗೆಡಲಿದೆ

KannadaprabhaNewsNetwork |  
Published : Feb 09, 2026, 02:30 AM IST
ಪೋಟೊ8.9: ಕೊಪ್ಪಳ ನಗರದಲ್ಲಿ ನಡೆದ ಸತ್ಯಾಗ್ರಹದಲ್ಲಿ ಜನ ಸಂಗ್ರಾಮ ಪರಿಷತ್ ಸಂಸ್ಥಾಪಕರಾದ ರಾಘವೇಂದ್ರ ಕುಷ್ಟಗಿ ಭಾಗವಹಿಸಿ ಬೆಂಬಲಿಸಿ ಮಾತನಾಡಿದರು. | Kannada Prabha

ಸಾರಾಂಶ

ವಿಜಯನಗರ,ರಾಯಚೂರು ಮತ್ತು ಕೊಪ್ಪಳ,ಬಳ್ಳಾರಿ ಜಿಲ್ಲೆಗಳಲ್ಲಿನ ನೀರಿನ ಸ್ಥಿತಿ,ಆರೋಗ್ಯದ ಮೇಲೆ ಅದರ ಪರಿಣಾಮ ಬೀರುತ್ತದೆ

ಕೊಪ್ಪಳ: ತುಂಗಭದ್ರಾ ನದಿ ಕರ್ನಾಟಕದ ಪ್ರಮುಖ ಜೀವನಾಡಿಗಳಲ್ಲಿ ಒಂದಾಗಿದ್ದು, ಕುಡಿವ ನೀರು, ಕೃಷಿ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಆಧಾರವಾಗಿದೆ, ಆದರೆ ಇತ್ತೀಚಿನ ವರ್ಷಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ಕೈಗಾರಿಕಾ ತ್ಯಾಜ್ಯ ಮತ್ತು ನಗರ ಚರಂಡಿಯ ಮಾಲಿನ್ಯದಿಂದ ನದಿಯ ನೀರಿನ ಗುಣಮಟ್ಟ ಗಂಭೀರವಾಗಿ ಕುಸಿದಿದ್ದು, ನದಿಯ ನೀರು ಬಳಸಲು ಸುರಕ್ಷಿತವಲ್ಲ ಎಂದು ಜನ ಸಂಗ್ರಾಮ ಪರಿಷತ್ ಸಂಸ್ಥಾಪಕ ರಾಘವೇಂದ್ರ ಕುಷ್ಟಗಿ ಹೇಳಿದರು.

ನಗರದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ನಡೆಸಿದ 101ನೇ ದಿನದ ಬಲ್ಡೋಟ ಹಟಾವೋ ಹಾಗೂ ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಅಲ್ಟ್ರಾಟೆಕ್ ಸಿಮೆಂಟ್, ಭದ್ರಶ್ರೀ ಸ್ಟೀಲ್, ತನುಷ್, ವನ್ಯಾ ಸ್ಟೀಲ್ ಮುಂತಾದ ಮಾಲಿನ್ಯಕಾರಕ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಮಾತನಾಡಿದರು.

ವಿಜಯನಗರ,ರಾಯಚೂರು ಮತ್ತು ಕೊಪ್ಪಳ,ಬಳ್ಳಾರಿ ಜಿಲ್ಲೆಗಳಲ್ಲಿನ ನೀರಿನ ಸ್ಥಿತಿ,ಆರೋಗ್ಯದ ಮೇಲೆ ಅದರ ಪರಿಣಾಮ ಬೀರುತ್ತದೆ. ತುಂಗಭದ್ರಾ ನದಿ ನೀರನ್ನು ಯಾವುದೇ ಸಂಸ್ಕರಣೆಯಿಲ್ಲದೆ ನೇರವಾಗಿ ಕುಡಿಯಬಾರದು. ಪ್ರಸ್ತುತ ವೈಜ್ಞಾನಿಕ ಅಂಕಿ ಅಂಶಗಳ ಪ್ರಕಾರ ಈ ನೀರು ಮಾನವ ಬಳಕೆಗೆ ಸುರಕ್ಷಿತವಲ್ಲ.

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಗಳ ಪ್ರಕಾರ, ಹೊಸಪೇಟೆ ಮತ್ತು ಹರಿಹರ ಭಾಗಗಳಲ್ಲಿ ನದಿಯ ನೀರು ಕ್ಲಾಸ್ ಡಿ ವರ್ಗಕ್ಕೆ ಸೇರಿದೆ. ಡಿ ಎಂದರೆ ವನ್ಯಜೀವಿಗಳು ಮತ್ತು ಮೀನುಗಳ ವಾಸಕ್ಕೆ ಮಾತ್ರ ಯೋಗ್ಯ ಕುಡಿಯಲು, ಸ್ನಾನಕ್ಕೆ ಅಥವಾ ಬೇಸಾಯಕ್ಕೆ ಸುರಕ್ಷಿತವಲ್ಲ ತೀವ್ರ ಸಂಸ್ಕರಣೆಯ ನಂತರವೇ ಬಳಕೆಗೆ ತರುವುದು ಸಾಧ್ಯ. ಹಸಿರು ಬಣ್ಣದ ನೀರು ಪಾಚಿಗಟ್ಟಿದೆ ಎಂದ ಅವರು, ನೀರಿನಲ್ಲಿ ಆಮ್ಲಜನಕ ಕಡಿಮೆಯಾಗುತ್ತಿದ್ದು, ಮೀನು ಸಾವು ಹೆಚ್ಚಾಗಿದೆ. ಈ ನೀರು ಕುಡಿದರೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದರು.

ಹರಿಹರ ಮತ್ತು ಕೊಪ್ಪಳ, ಹೊಸಪೇಟೆ ಕೈಗಾರಿಕಾ ತ್ಯಾಜ್ಯ, ಸಂಸ್ಕರಣೆಯಾಗದ ನಗರ ಚರಂಡಿ ಮ್ಯಾಂಗನೀಸ್ ಗಣಿ ತ್ಯಾಜ್ಯದಲ್ಲಿರುವ ಲೋಹಗಳು ಹೂಳು ತುಂಬಲು ಕಾರಣವಾಗಿದೆ.ಈ ಹೋರಾಟ ಜೀವ ಉಳಿಸಿಕೊಳ್ಳಲು, ಆರೋಗ್ಯ ಕಾಪಾಡಿಕೊಳ್ಳುವ ಕಾರಣಕ್ಕೆ ನಡೆದಿದೆ. ಕಳೆದ ಬಂದ್ ಹೋರಾಟದಲ್ಲಿ ಇದ್ದೆ. ಮುಂದಿನ ಬಂದ್ ಹೋರಾಟದಲ್ಲಿ ಇರುತ್ತೇನೆ. ಗೆಲ್ಲುವವರೆಗೆ ಬೆಂಬಲಿಸುತ್ತೇವೆ ಎಂದರು.

ಈ ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಾಹಿತಿ ಎ.ಎಂ. ಮದರಿ, ಡಿ.ಎಚ್.ಪೂಜಾರ, ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ರಂಗಕರ್ಮಿ ಶರಣು ಶೆಟ್ಟರ್, ಪ್ರಕಾಶಕ ಡಿ.ಎಂ. ಬಡಿಗೇರ, ಮಹಾಂತೇಶ ಕೊತಬಾಳ, ನಿವೃತ್ತ ಪ್ರಾಚಾರ್ಯ ಬಿ.ಜಿ. ಕರಿಗಾರ, ರಾಜಶೇಖರ ಏಳುಬಾವಿ, ಮಹಾದೇವಪ್ಪ ಮಾವಿನಮಾಡು, ಗವಿಸಿದ್ದಪ್ಪ ಮಾ.ಪಾ, ಪಂಪಣ್ಣ ಚಿಂತಪಲ್ಲಿ, ನಟರಾಜ ಸವಡಿ, ಬಸವರಾಜಪ್ಪ ಶೆಟ್ಟರ್, ನಿವೃತ್ತ ಪ್ರಾಚಾರ್ಯ ಸಿ.ವಿ. ಜಡಿಯವರ, ಎಂ.ಕೆ. ಸಾಹೇಬ್ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿವೇಗ ಎಂದರೆ ನಿರ್ಲಕ್ಷ್ಯದ ಚಾಲನೆ ಅಲ್ಲ: ಹೈಕೋರ್ಟ್‌
‘ಜಾಹೀರಾತಲ್ಲಿ ಗಾಂಧೀಜಿ ಬಳಕೆ ಗಾಂಧೀಜಿಯರ ಮೌಲ್ಯಗಳ ಹತ್ಯೆ’