ಗಜೇಂದ್ರಗಡ: ಸನಾತನ ಧರ್ಮದ ಆಚಾರ, ವಿಚಾರಗಳ ಉಳಿವು ಮತ್ತು ಬೆಳವಣಿಗೆ ಉದ್ದೇಶವಾಗಿಸಿಕೊಂಡು ಪಟ್ಟಣದಲ್ಲಿ ಫೆ. ೧೪ರಂದು ಅದ್ಧೂರಿಯಾಗಿ ಹಿಂದೂ ಸಮ್ಮೇಳನ ನಡೆಸಲಾಗುತ್ತಿದೆ ಎಂದು ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ರವೀಂದ್ರಸಾ ಶಿಂಗ್ರಿ ತಿಳಿಸಿದರು.
ಫೆ. ೧೪ರಂದು ಮಧ್ಯಾಹ್ನ ೨.೩೦ಕ್ಕೆ ಬಜರಂಗದಳ ಸರ್ಕಲ್‌ನಿಂದ ಸಾಂಪ್ರದಾಯಿಕ ಮಂಗಳ ಶೋಭಾಯಾತ್ರೆ ಆರಂಭವಾಗಲಿದೆ. ವಾದ್ಯಮೇಳಗಳೊಂದಿಗೆ ಸಂಜೆ ೫.೩೦ಕ್ಕೆ ರೋಣ ರಸ್ತೆಯಲ್ಲಿನ ತೋಂಟದಾರ್ಯ ಆಂಗ್ಲ ಮಾಧ್ಯಮ(ಸಿಬಿಎಸ್‌ಇ) ಶಾಲಾ ಆವರಣ ತಲುಪಲಿದೆ. ಸಂಜೆ ಅಲ್ಲಿಯೇ ೫.೩೦ಕ್ಕೆ ಸಮ್ಮೇಳನದ ಸಾರ್ವಜನಿಕ ಸಮಾರಂಭ ನಡೆಯಲಿದೆ ಎಂದರು.
ಸಮ್ಮೇಳನಕ್ಕೆ ರೋಣ ಬೂದೀಶ್ವರ ಮಠ, ಡಾ. ವಿಶ್ವನಾಥ ಸ್ವಾಮೀಜಿ ಹಿರೇಮಠ ಸಾನ್ನಿಧ್ಯ ವಹಿಸುವರು. ಆರ್‌ಎಸ್‌ಎಸ್ ಕರ್ನಾಟಕ ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ರವೀಂದ್ರ ವಕ್ತಾರರಾಗಿ ಭಾಗವಹಿಸಲಿದ್ದಾರೆ ಎಂದರು.ಉಮೇಶ ಮಲ್ಲಾಪೂರ ಮಾತನಾಡಿ, ಭಾರತ ಉಳಿಯಬೇಕಾದರೆ ಹಿಂದೂ ಸಂಸ್ಕೃತಿ ಉಳಿಯಬೇಕು. ಅದನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಈ ಸಮ್ಮೇಳನ ಆಯೋಜಿಸಲಾಗಿದೆ ಎಂದರು.ಪ್ರಚಾರ ಸಮಿತಿ ಸದಸ್ಯ ಸಂಜೀವ ಜೋಷಿ ಮಾತನಾಡಿ, ಹಿಂದೂಗಳು ನಾವೆಲ್ಲರೂ ಒಂದು ಎಂಬ ಭಾವನೆಯೊಂದಿಗೆ ಜಾತಿ, ಮತ, ಪಂಥ ಭೇದವಿಲ್ಲದೆ ನಡೆಯುವ ಶ್ರೇಷ್ಠ ಸಮಾವೇಶವೇ ಹಿಂದೂ ಸಮ್ಮೇಳನವಾಗಿದೆ. ಫೆ. ೧೩ರಂದು ಬೈಕ್ ರ್ಯಾಲಿ, ಫೆ. ೧೪ರಂದು ಸಮ್ಮೇಳನದ ಅಂಗವಾಗಿ ಮಜಲು, ಚಂಡೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ವಾದ್ಯಗಳು, ಆಯಾ ಸಮಾಜದ ವೇಷಭೂಷಣ, ಸಾಧು- ಸಂತರ ಹಾಗೂ ಮಹಾಪುರುಷರ ಭಾವಚಿತ್ರ ಪ್ರದರ್ಶನ ನಡೆಯಲಿದೆ ಎಂದ ಅವರು, ಸಮ್ಮೇಳನದಲ್ಲಿ ದೇಶದ ಆಂತರಿಕ ಸುರಕ್ಷತೆ, ಸಂಘಟನಾ ಕಾರ್ಯ, ಪಂಚ ಪರಿವರ್ತನೆ, ಗ್ರಾಮ ಸುರಕ್ಷೆ, ಸಾಮರಸ್ಯ, ವ್ಯಸನಮುಕ್ತಿ, ಸ್ವಾವಲಂಬನೆ ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಯಲಿದ್ದು, ಎಲ್ಲ ಸಮಾಜದವರು, ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ, ಸಿಬ್ಬಂದಿ, ವಿದ್ಯಾರ್ಥಿಗಳು, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸುವಂತೆ ವಿನಂತಿಸಿದರು. ಈ ವೇಳೆ ನಿವೃತ್ತ ಶಿಕ್ಷಕ ಎಸ್.ಎಸ್. ಶಿವಳ್ಳಿ, ರವಿ ಕಲಾಲ, ರಾಜೇಂದ್ರ ಘೋರ್ಪಡೆ, ಚಂದ್ರಕಾಂತ ಮಹೇಂದ್ರಕರ, ಉಮೇಶ ನಾವಡೆ, ಸಂತೋಷ ವಸ್ತ್ರದ ಸೇರಿ ಇತರರು ಇದ್ದರು.