ಉಪ ಲೋಯಕಾಯುಕ್ತರಿಂದ 73 ಪ್ರಕರಣಗಳ ವಿಚಾರಣೆ

KannadaprabhaNewsNetwork |  
Published : Jan 11, 2025, 12:47 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ  | Kannada Prabha

ಸಾರಾಂಶ

ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಡಿಸಿ ಟಿ.ವೆಂಕಟೇಶ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಜ.22 ರಿಂದ 24 ರವರೆಗೆ ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ದಾಖಲಾದ 73 ಪ್ರಕರಣಗಳ ಕುರಿತು ಜ.23 ರಂದು ಜಿಪಂ ಸಭಾಂಗಣದಲ್ಲಿ ಉಪಲೋಕಾಯುಕ್ತರು ವಿಚಾರಣೆ ನಡೆಸಲಿದ್ದು, ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ದಾಖಲೆ ಹಾಗೂ ಮಾಹಿತಿಯೊಂದಿಗೆ ಹಾಜರಾಗುವಂತೆ ಸೂಚಿಸಿದರು.

ಜ.23 ರಂದು ಬೆಳಗ್ಗೆ 11ರಿಂದ 1.30 ವರೆಗೆ ಮತ್ತು ಮಧ್ಯಾಹ್ನ 2.30 ರಿಂದ 5 ಗಂಟೆ ವರೆಗೆ ನಗರದ ಜಿಪಂ ಸಭಾಂಗಣದಲ್ಲಿ, ಚಿತ್ರದುರ್ಗ ಜಿಲ್ಲೆಗೆ ಸಂಬಂಧಪಟ್ಟಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ತನಿಖೆ ಹಾಗೂ ವಿಚಾರಣೆಗೆ ಬಾಕಿ ಇರುವ 73 ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಉಪಲೋಕಾಯುಕ್ತರ ವಿಚಾರಣೆ ನಡೆಸುವರು. ಸಂಬಂದಪಟ್ಟ ಇಲಾಖೆ ಮುಖ್ಯಸ್ಥರು ದೂರುದಾರಿಗೆ ಈ ಕುರಿತು ಮಾಹಿತಿ ನೀಡಿ, ವಿಚಾರಣೆಗೆ ಹಾಜರಾಗುವಂತೆ ತಿಳಿಸಬೇಕು. ಕೆಲವೊಂದು ದೂರುಗಳು ವೈಯಕ್ತಿಕ ಹೆಸರಿನೊಂದಿಗೆ ದಾಖಲಾಗಿವೆ. ಆದರೆ ಅಂತಹ ಅಧಿಕಾರಿಗಳು ಸದ್ಯ ಬೇರೆಡೆ ವರ್ಗಾವಣೆಯಾಗಿದ್ದರೆ, ಅವರ ಸ್ಥಾನದಲ್ಲಿರುವ ಅಧಿಕಾರಿಗಳು ಪ್ರಕರಣದ ಮಾಹಿತಿ ಹಾಗೂ ಸ್ಥಿತಿಗತಿಯನ್ನು ವಿಚಾರಣೆ ವೇಳೆ ಉಪಲೋಕಾಯುಕ್ತರಿಗೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ಜ.22ರಂದು ನಗರದ ಚಳ್ಳಕೆರೆ ರಸ್ತೆಯಲ್ಲಿನ ಎಸ್.ಜಿ.ಕಲ್ಯಾಣ ಮಂಟಪದಲ್ಲಿ ಉಪಲೋಕಾಯುಕ್ತರು ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 1.30ವರೆಗೆ ಹಾಗೂ ಮಧ್ಯಾಹ್ನ 2.30 ರಿಂದ 5ಗಂಟೆಗೆವರೆಗೆ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮಾಡುವರು. ಸರ್ಕಾರಿ ಅಧಿಕಾರಿ ಅಥವಾ ನೌಕರರಿಂದ ಕಾನೂನು ರಿತ್ಯ ಆಗಬೇಕಾದ ಕೆಲಸದಲ್ಲಿ ವಿಳಂಬವಾಗಿದ್ದಲ್ಲಿ, ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವೃಥಾ ತೊಂದರೆ ಕೊಡುವುದು ಅಥವಾ ಇನ್ಯಾವುದೇ ರೀತಿಯ ದುರಾಡಳಿತದಲ್ಲಿ ತೊಡಗಿದ್ದರೆ, ಅದರಿಂದ ತೊಂದರೆಗೆ ಒಳಗಾಗದ ಸಾರ್ವಜನಿಕರು ನಿಗದಿತ ಅರ್ಜಿ ನಮೂನೆ-1 ಮತ್ತು ನಮೂನೆ-2ರಲ್ಲಿ ಲಿಖಿತ ರೂಪದಲ್ಲಿ ದಾಖಲೆ, ಸಾಕ್ಷ್ಯಾಧಾರಗಳೊಂದಿಗೆ ದೂರು ಸಲ್ಲಿಸಬಹುದು. ಈ ವೇಳೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿರಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ಉಪಲೋಕಾಯುಕ್ತ ಭೇಟಿ ಹಿನ್ನಲೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಪ್ಪದೇ ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕು. ಅಗತ್ಯ ವೈದ್ಯಕೀಯ ಕಾರಣ ಹೊರತು ಪಡಿಸಿ, ಅಧಿಕಾರಿಗಳು ಉಪಲೋಕಾಯುಕ್ತ ಭೇಟಿ ವೇಳೆ ಗೈರು ಹಾಜರಾಗಿರುವುದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಜ.24ರಂದು ಲೋಕಾಯುಕ್ತರು ಜಿಲ್ಲೆಯ ಹಾಸ್ಟೆಲ್, ಕಚೇರಿಗಳು, ಆಸ್ಪತ್ರೆಗಳಿಗೆ ಅನಿರೀಕ್ಷಿತ ಭೇಟಿ ಪರಿಶೀಲನೆ ನಡೆಸುವರು. ಎಲ್ಲಾ ಅಧಿಕಾರಿಗಳು ತಮ್ಮ ಕಚೇರಿ ಸೇರಿದಂತೆ ಕಚೇರಿ ಆವರಣಗಳನ್ನು ಸಹ ಸ್ವಚ್ಛವಾಗಿರಿಸಿಕೊಳ್ಳಬೇಕು. ಕಚೇರಿ ಹಾಜರಾತಿ, ಹಣದ ದಾಖಲಾತಿ, ಚಲನವಲನ ವಹಿ ಸೇರಿದಂತೆ ಎಲ್ಲ ಅಗತ್ಯ ಕಡತಗಳನ್ನು ನಿರ್ವಹಿಸಬೇಕು. ಟಪಾಲು ಶಾಖೆಯಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಬಹು ದಿನಗಳ ಕಾಲ ಕಡತಗಳು ವಿಳಂಬವಾಗದಂತೆ ವಿಲೇ ಮಾಡಲು ಅಧಿಕಾರಿಗಳು ಗಮನ ಹರಿಸಬೇಕು. ಸಾರ್ವಜನಿಕರು ನೀಡಿರುವ ದೂರು, ಅದಕ್ಕೆ ನೀಡಿರುವ ಪ್ರತ್ಯುತ್ತರ ಬಗ್ಗೆ ಮಾಹಿತಿ ಸಿದ್ದವಿರಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಾಕೀತು ಮಾಡಿದರು.

ಸಭೆಯಲ್ಲಿ ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ ಸೇರಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ ತೆಬಿಯಾ ರೋಸಿಯಾ ಹೂ ವೈಭವ!
ನಿವೇಶನ ರಹಿತರಿಗೆ ಸರ್ಕಾರದಿಂದ ಸೈಟ್‌