ಶಿವಾನಂದ ಗೊಂಬಿ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ್ ಹುದ್ದೆಗೆ ಆಡಳಿತ ಪಕ್ಷ ಬಿಜೆಪಿಯಲ್ಲಿ ಭಾರೀ ಪೈಪೋಟಿ ಶುರುವಾಗಿದೆ. ನಾಲ್ಕಾರು ಜನರು ಈಗಿನಿಂದಲೇ ಲಾಬಿ ನಡೆಸುತ್ತಿದ್ದಾರೆ.23ನೇ ಅವಧಿಯ ಮೇಯರ್-ಉಪಮೇಯರ್ ಚುನಾವಣೆ ಜೂ. 29ರಂದು ನಡೆಯಲಿದೆ. ಮೇಯರ್ ಸ್ಥಾನವು ಹಿಂದುಳಿದ ವರ್ಗ ಎ ಹಾಗೂ ಉಪಮೇಯರ್ ಸ್ಥಾನವೂ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ.
ಮೇಯರ್ ಸ್ಥಾನಕ್ಕೆ ಯಾರ್‍ಯಾರು?:ಹಿಂದುಳಿದ ವರ್ಗ ಎ ವರ್ಗಕ್ಕೆ ಹಿರಿಯ ಸದಸ್ಯರಾದ ರಾಮಣ್ಣ ಬಡಿಗೇರ, ಉಮೇಶಗೌಡ ಕೌಜಗೇರಿ, ಭೀರಪ್ಪ ಖಂಡೇಕರ್, ತಿಪ್ಪಣ್ಣ ಮಜ್ಜಗಿ ಈ ನಾಲ್ವರು ಮೇಯರ್ ಸ್ಥಾನದ ರೇಸ್‌ನಲ್ಲಿದ್ದಾರೆ. ಇದರಲ್ಲಿ ರಾಮಣ್ಣ ಬಡಿಗೇರ ನಾಲ್ಕನೆಯ ಬಾರಿ ಸದಸ್ಯರಾಗಿದ್ದರೆ, ಉಳಿದ ಮೂವರು 3ನೇ ಬಾರಿ ಸದಸ್ಯರಾದವರು. ಇದರಲ್ಲಿ ಬಡಿಗೇರ ಹೆಸರು ಮುಂಚೂಣಿಯಲ್ಲಿದೆ ಎಂದು ಮೂಲಗಳು ತಿಳಿಸುತ್ತವೆ.
ಇನ್ನು ಎಸ್ಸಿ ಮಹಿಳೆಗೆ ಮೀಸಲಾಗಿರುವ ಉಪಮೇಯರ್ ಹುದ್ದೆಗೆ ದುರ್ಗಮ್ಮ ಬಿಜವಾಡ ಹಾಗೂ ಚಂದ್ರಿಕಾ ಮೇಸ್ತ್ರಿ ಹೆಸರು ಕೇಳಿ ಬರುತ್ತಿದೆ. ಈ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಬಹುದು ಎಂದು ಪಕ್ಷದ ಮೂಲಗಳು ತಿಳಿಸುತ್ತವೆ.
ಜಿಲ್ಲೆಯ ಮಟ್ಟಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೈಕಮಾಂಡ್ ಎಂಬಂತೆ ಇದ್ದಾರೆ. ಜೋಶಿ ಹಾಗೂ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಸೇರಿದಂತೆ ಹಲವು ಹಿರಿಯರು ಚರ್ಚಿಸಿ ಅಂತಿಮಗೊಳಿಸಲಿದ್ದಾರೆ. ಇದಕ್ಕಾಗಿ ಜೂ. 28ಕ್ಕೆ ಜಿಲ್ಲೆಯ ಕೋರ್ ಕಮಿಟಿ ಮೀಟಿಂಗ್ ನಡೆಯಲಿದೆ. ಅಲ್ಲಿ ಹೆಸರನ್ನು ಅಖೈರುಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ ಮೇಯರ್- ಉಪಮೇಯರ್ ಹುದ್ದೆ ಚುನಾವಣೆ ವೇಳೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಕಾಂಗ್ರೆಸ್‌ನಲ್ಲಿದ್ದರು. ಹೀಗಾಗಿ ಬಿಜೆಪಿ ಸದಸ್ಯರನ್ನು ತಮ್ಮತ್ತ ಸೆಳೆಯುತ್ತಾರೋ ಎಂಬ ಭೀತಿಯಲ್ಲಿ ಎಲ್ಲ ಸದಸ್ಯರನ್ನು ದಾಂಡೇಲಿ ಬಳಿ ರೆಸಾರ್ಟ್‌ಗೆ ಬಿಜೆಪಿ ಕರೆದುಕೊಂಡು ಹೋಗಿತ್ತು. ಇದೀಗ ಶೆಟ್ಟರ್ ಬಿಜೆಪಿಯಲ್ಲೇ ಇದ್ದಾರೆ. ಬೆಳಗಾವಿ ಸಂಸದರಾಗಿದ್ದಾರೆ. ಬಿಜೆಪಿ ಸದಸ್ಯರು ಕಾಂಗ್ರೆಸ್‌ನತ್ತ ಹೋಗುವ ಸಾಧ್ಯತೆಗಳಿಲ್ಲ. ಹೀಗಾಗಿ ಈ ಸಲ ರೆಸಾರ್ಟ್‌ಗೆ ಕರೆದುಕೊಂಡು ಹೋಗುತ್ತಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಲಾಬಲ: