ಬೆಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ‘ಎಕ್ಸ್’ ಖಾತೆಯಲ್ಲಿ ವಿವಾದಾತ್ಮಕ ವಿಡಿಯೋ ಪೋಸ್ಟ್ ಮಾಡಿದ ಆರೋಪದಡಿ ದಾಖಲಾಗಿದ್ದ ಪ್ರಕರಣ ಸಂಬಂಧ ಪತ್ರಕರ್ತ ಹಾಗೂ ಲೇಖಕ ಅಜಿತ್ ಭಾರತಿಗೆ ಹೈಗ್ರೌಂಡ್ಸ್ ಠಾಣೆ ಪೊಲಿಸರು ನೋಟಿಸ್ ನೀಡಲು ಉತ್ತರಪ್ರದೇಶದ ನೋಯ್ಡಾಗೆ ತೆರಳಿದ್ದಾಗ ಹೈಡ್ರಾಮಾ ನಡೆದಿದೆ.
ಪತ್ರಕರ್ತ ಅಜಿತ್ ಭಾರತಿ ಉತ್ತರಪ್ರದೇಶದ ನೋಯ್ಡಾದಲ್ಲಿ ನೆಲೆಸಿದ್ದಾರೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಹೈಗ್ರೌಂಡ್ಸ್ ಠಾಣೆ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲು ಗುರುವಾರ ನೋಯ್ಡಾದ ಅಜಿತ್ ಭಾರತಿ ನಿವಾಸದತ್ತ ತೆರಳಿದ್ದಾರೆ. ಮೂವರು ಪೊಲೀಸರು ಮಫ್ತಿಯಲ್ಲಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಕೆಲ ಕಾಲ ಹೈಡ್ರಾಮ ಸೃಷ್ಟಿಯಾಗಿದೆ.
ಅಜಿತ್ ಭಾರತಿ ಸಹ ಮಫ್ತಿಯಲ್ಲಿದ್ದ ಹೈಗ್ರೌಂಡ್ಸ್ ಠಾಣೆ ಪೊಲೀಸರನ್ನು ಯಾರು ನೀವು ಎಂದು ಪ್ರಶ್ನಿಸಿದ್ದಾರೆ. ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿರುವ ಸ್ಥಳೀಯ ಪೊಲೀಸರು, ಹೈಗ್ರೌಂಡ್ಸ್ ಠಾಣೆಯ ಮೂವರು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಹೈಗ್ರೌಂಡ್ಸ್ ಠಾಣೆ ಪೊಲೀಸರು ತಮ್ಮ ಪರಿಚಯ ಹೇಳಿಕೊಂಡು, ತಾವು ಬಂದಿರುವ ಉದ್ದೇಶ ತಿಳಿಸಿದ್ದಾರೆ. ಬಳಿಕ ಸ್ಥಳೀಯ ಪೊಲೀಸರ ಸಮ್ಮುಖದಲ್ಲೇ ಆರೋಪಿ ಅಜಿತ್ ಭಾರತಿಗೆ ನೋಟಿಸ್ ನೀಡಿದ್ದಾರೆ.
ಹೈಗ್ರೌಂಡ್ಸ್ ಠಾಣೆ ಪೊಲೀಸರು ಅಜಿತ್ ಭಾರತಿಗೆ ನೋಟಿಸ್ ನೀಡಲು ಬಂದಿರುವ ವಿಚಾರವನ್ನು ಸ್ಥಳೀಯ ಪೊಲೀಸರಿಗೆ ತಿಳಿಸದೆ ಇರುವುದು ಹಾಗೂ ಮಫ್ತಿಯಲ್ಲಿ ತೆರಳಿದ್ದೇ ಹೈಡ್ರಾಮಾಗೆ ಕಾರಣ ಎನ್ನಲಾಗಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಚರ್ಚೆಗೆ ಕಾರಣವಾಗಿದೆ. ನೆಟ್ಟಿಗರು ಪತ್ರಕರ್ತ ಅಜಿತ್ ಭಾರತಿಗೆ ಬೆಂಬಲ ಸೂಚಿಸಿ, ಬೆಂಗಳೂರು ಪೊಲೀಸರ ವಿರುದ್ಧ ಟೀಕೆ ಮಾಡುತ್ತಿದ್ದಾರೆ.
ಏನಿದು ಪ್ರಕರಣ?
ಪತ್ರಕರ್ತ ಅಜಿತ್ ಭಾರತಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ವಿಡಿಯೊ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿ ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಹಾಗೂ ವಕೀಲರಾದ ಬಿ.ಕೆ.ಬೋಪಣ್ಣ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಜೂ.15ರಂದು ದೂರು ನೀಡಿದ್ದರು.
ಪತ್ರಕರ್ತ ಅಜಿತ್ ಭಾರತಿ ಜೂ.13ರಂದು ತಮ್ಮ ಎಕ್ಸ್ ಖಾತೆಯಲ್ಲಿ ರಾಹುಲ್ ಗಾಂಧಿ ಅವರು ರಾಮ ಮಂದಿರದ ಜಾಗದಲ್ಲಿ ಬಾಬರಿ ಮಸೀದಿ ಮರಳಿ ತರಲು ಉದ್ದೇಶಿಸಿದ್ದಾರೆ ಎಂಬ ಸುಳ್ಳು ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಆದರೆ, ರಾಹುಲ್ ಗಾಂಧಿ ಅವರು ಆ ರೀತಿಯ ಯಾವುದೇ ಹೇಳಿಕೆ ನೀಡಿಲ್ಲ. ಅಜಿತ್ ಭಾರತಿ ಅವರು ದ್ವೇಷವನ್ನು ಪ್ರಚೋದಿಸುವ ಉದ್ದೇಶದಿಂದ ಸುಳ್ಳು ಮಾಹಿತಿ ಹರಡಿದ್ದಾರೆ. ವಿವಿಧ ಧಾರ್ಮಿಕ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಮತ್ತು ದ್ವೇಷದ ವಿಷ ಬೀಜ ಬಿತ್ತುತ್ತಿದ್ದಾರೆ. ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು. ಈ ದೂರು ಆಧರಿಸಿ ಹೈಗ್ರೌಂಡ್ಸ್ ಠಾಣೆ ಪೊಲೀಸರು ಅಜಿತ್ ಭಾರತಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.