ಭೀಮಣ್ಣ ಗಜಾಪುರ
ಕೂಡ್ಲಿಗಿ : ಭಾನುವಾರ ರಾತ್ರಿ ತಾಲೂಕಿನ ಹೊಸಹಟ್ಟಿಯಲ್ಲಿ ಬೆಂಕಿಯ ಮಳೆ ಸುರಿಯಲಿದೆ. ಆ ಕ್ಷಣಕ್ಕಾಗಿ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಭಕ್ತರು ಆಗಮಿಸುತ್ತಾರೆ.
ಏನಿದು ಬೆಂಕಿ ಮಳೆ ಅಂತೀರಾ, ಹೌದು ನಿಜಕ್ಕೂ ಗಂಟೆಗಟ್ಟಲೆ ಇಲ್ಲಿಯ ಬುಡಕಟ್ಟು ಸಮುದಾಯದ ಜನತೆ ತಮ್ಮ ಆರಾಧ್ಯ ದೈವ ಶ್ರೀ ಬಗ್ಗಲು ಓಬಳೇಶ್ವರ ದೇವರ ಹೆಸರಿನಲ್ಲಿ ಬರಿ ಮೈಯಲ್ಲಿ, ಬರಿಗೈಯಲ್ಲಿ ಕೆಂಡ ತೂರಿ ಭಕ್ತಿ ಸಮರ್ಪಿಸುತ್ತಾರೆ. ಕೆಲವು ಭಕ್ತರು ಕೆಂಡದ ರಾಶಿಗೆ ಬರಿ ಮೈಯಲ್ಲಿ ಜಿಗಿದು ಕೆಂಡ ತೂರುತ್ತಾರೆ.ಪ್ರತಿ ಮೂರು ವರ್ಷಕ್ಕೊಮ್ಮೆ ಶ್ರೀ ಬಗ್ಗಲು ಓಬಳೇಶ್ವರ ಸ್ವಾಮಿಯ ಕೆಂಡರಾಧನೆ ನಡೆಯುತ್ತದೆ. ಮಾ. 16ರ ರಾತ್ರಿ ಈ ಆಚರಣೆ ನಡೆಯಲಿದ್ದು, ಇದಕ್ಕೆ ಗ್ರಾಮದ ದೈವಸ್ಥರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಬೇಡ ಬುಡಕಟ್ಟು ಸಂಪ್ರದಾಯಿಕ ಆಚರಣೆಗಳು ಮತ್ತು ವೈಜ್ಞಾನಿಕ ವಿಸ್ಮಯ ಮೂಡಿಸುವ ಪ್ರಾಚೀನ ಪದ್ದತಿ ಮತ್ತು ಪರಂಪರೆಗಳ ಆನಾವರಣಕ್ಕೆ ಸಾಕ್ಷಿಯಾಗಲಿದೆ.
ಇತಿಹಾಸ:
ಬೇಡ ಬುಡಕಟ್ಟು ಸಮುದಾಯದ ಶ್ರೀಬಗ್ಗಲು ಓಬಳೇಶ್ವರ ಸ್ವಾಮಿಯ ಇತಿಹಾಸ ಪ್ರಾಚೀನವಾದದ್ದು, ಈ ಸಮುದಾಯದವರು ಮೂಲತಃ ಪಶುಪಾಲಕರಾಗಿದ್ದು, ಗೋಪಾಲಕ ವೃತ್ತಿ ಪ್ರಮುಖವಾಗಿದೆ. ಹಲವು ಶತಮಾನಗಳ ಹಿಂದೆ ಅಂಧ್ರಪ್ರದೇಶದ ಶ್ರೀಶೈಲ ಕಡೆಯಿಂದ ಕರ್ನಾಟಕದ ಚಿನ್ನಹಗರಿ ಉಪನದಿಯ ಪ್ರದೇಶಕ್ಕೆ ಗೋವುಗಳೊಂದಿಗೆ ವಲಸೆ ಬಂದವರು. ತರುವಾಯ ಹೊಸಹಟ್ಟಿ ಗ್ರಾಮ ಪರಿಸರದಲ್ಲಿ ರೊಪ್ಪ(ಹಟ್ಟಿ)ಕಟ್ಟಿಕೊಂಡು ಗೋವುಗಳೊಂದಿಗೆ ವಾಸಿಸುತ್ತಿರುವಾಗ ಜತೆಗೆ ಬಗ್ಗಲು(ಇದ್ದಿಲು) ವಹಿವಾಟು ಮಾಡಲೆಂದು ಸಂಗ್ರಹಣೆ ಮಾಡಿರುವಾಗ ಆಕಸ್ಮಿಕವಾಗಿ ಇದ್ದಿಲಿನ ರಾಶಿಯಲ್ಲಿ ದೇವರು ಬೆಂಕಿಯ ಕೆಂಡದ ರೂಪದಲ್ಲಿ ಕಾಣಿಸಿಕೊಂಡಿತು ಎಂಬ ಪ್ರತೀತಿ ಇಲ್ಲಿನ ಭಕ್ತರದ್ದು. ಆ ದೇವರೆ ಆರಾಧ್ಯದೈವ ಶ್ರೀಬಗ್ಗಲು ಓಬಳೇಶ್ವರಸ್ವಾಮಿ ಎಂಬುದು ಹಿರಿಯರ ಅಭಿಪ್ರಾಯ.
ಸಕಲ ಸಿದ್ಧತೆ:
ನಾಡಿನಲ್ಲಿರುವ ಮ್ಯಾಸಬೇಡರು ತಮ್ಮ ದೈವಗಳಿಗೆ ಮಾಡುವ ಪೂಜಾ ಕಾರ್ಯ ಭಿನ್ನತೆಯೊಂದಿಗೆ ಕೂಡಿರುತ್ತವೆ. ಈ ಪೈಕಿ ರಾಜ್ಯದಲ್ಲಿ ಬಹುಮುಖ್ಯವಾಗಿರುವ ಹೊಸಹಟ್ಟಿಯ ಶ್ರೀಬಗ್ಗಲು ಓಬಳೇಶ್ವರಸ್ವಾಮಿ ಹಬ್ಬದಲ್ಲಿ ಬರಿಗೈಲಿ ನಿಗಿನಿಗಿ ಕೆಂಡವನ್ನು ಹಿಡಿದು ಆಕಾಶಕ್ಕೆ ತೂರುವ ಪರಿ ನಿಜಕ್ಕೂ ರಣ ರೋಚಕ.
ಈ ಎಲ್ಲ ಸಾಂಪ್ರದಾಯಿಕ ಆಚರಣೆಗೆ ಗ್ರಾಮದಲ್ಲಿನ ದೈವಸ್ಥರು ಸಿದ್ದತೆ ಮಾಡಿಕೊಂಡಿದ್ದು, ಶನಿವಾರ ಬೆಳಗ್ಗೆ ಸಂಪ್ರದಾಯದಂತೆ 20 ಕಿಮೀ ದೂರದ ರಂಗಯ್ಯನದುರ್ಗ ಜಲಾಶಯಕ್ಕೆ ಗ್ರಾಮದ ಸಕಲಭಕ್ತರು, ಮಹಿಳೆಯರು, ಮಕ್ಕಳು ಬರಿಗಾಲಲ್ಲಿ ಪಾದಯಾತ್ರೆ ಮೂಲಕ ತೆರಳಿ ಗಂಗೆಪೂಜೆ ಮಾಡಿಕೊಂಡು ಬಂದಿದ್ದಾರೆ.ನಿಷೇಧ: ಈ ಹಬ್ಬದ ಆಚರಣೆ ತೀರ್ಮಾನವಾದರೆ ಸಾಕು ಗ್ರಾಮದಲ್ಲಿ ಒಂದು ವಾರ ಕಾಲ ಮದ್ಯ, ಮಾಂಸ ಆಹಾರ ಸೇವಿಸುವುದು ಮತ್ತು ಬೇರೆಡೆ ಸೇವಿಸಿ ಗ್ರಾಮ ಪ್ರವೇಶ ಮಾಡುವುದು ಮತ್ತು ಚರ್ಮಾತ್ಪೊನ್ನ ವಸ್ತುಗಳನ್ನು ಬಳಕೆ ಮಾಡುವುದು ಸಂಪೂರ್ಣ ನಿಷೇಧ ಮಾಡಲಾಗಿದೆ. ಕೆಂಡಾರಾಧನೆ ನಂತರವು ಮೂರು ದಿನಗಳ ಕಾಲ ಚಾಲ್ತಿಯಲ್ಲಿರುತ್ತದೆ. ಈ ಸಂಪ್ರದಾಯ ಚಾಚು ತಪ್ಪದೆ ಪಾಲಿಸಿಕೊಂಡು ಹಲವು ಶತಮಾನಗಳಿಂದ ಬರಲಾಗುತ್ತಿದೆ.