ಬೇಸಿಗೆ ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ಕಾಡ್ಗಿಚ್ಚು : ಬೆಂಕಿ ಇಡುವವರ ಪತ್ತೆಗೆ ಡ್ರೋನ್‌

| N/A | Published : Mar 16 2025, 01:49 AM IST / Updated: Mar 16 2025, 11:00 AM IST

ಬೇಸಿಗೆ ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ಕಾಡ್ಗಿಚ್ಚು : ಬೆಂಕಿ ಇಡುವವರ ಪತ್ತೆಗೆ ಡ್ರೋನ್‌
Share this Article
  • FB
  • TW
  • Linkdin
  • Email

ಸಾರಾಂಶ

ಬೇಸಿಗೆ ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ಕಾಡ್ಗಿಚ್ಚು ಹೆಚ್ಚುತ್ತಿದೆ. ಆದರೆ, ಅದು ನೈಸರ್ಗಿಕವಾಗಿ ಉಂಟಾಗುತ್ತಿದೆಯೇ ಅಥವಾ ಕಿಡಿಗೇಡಿಗಳು ಸೃಷ್ಟಿ ಮಾಡುತ್ತಿದ್ದಾರೆಯೇ ಎಂಬುದನ್ನು ಅರಿಯಲು ಡ್ರೋನ್‌ ಕ್ಯಾಮೆರಾ ಬಳಸಿ ಕಾಡ್ಗಿಚ್ಚಿಗೆ ಮೂಲ ಕಾರಣ ತಿಳಿಯಲು ಇಲಾಖೆ ಮುಂದಾಗಿದೆ.

 ಬೆಂಗಳೂರು : ಬೇಸಿಗೆ ಆರಂಭಕ್ಕೂ ಮುನ್ನವೇ ರಾಜ್ಯದಲ್ಲಿ ಕಾಡ್ಗಿಚ್ಚು ಹೆಚ್ಚುತ್ತಿದೆ. ಆದರೆ, ಅದು ನೈಸರ್ಗಿಕವಾಗಿ ಉಂಟಾಗುತ್ತಿದೆಯೇ ಅಥವಾ ಕಿಡಿಗೇಡಿಗಳು ಸೃಷ್ಟಿ ಮಾಡುತ್ತಿದ್ದಾರೆಯೇ ಎಂಬುದನ್ನು ಅರಿಯಲು ಡ್ರೋನ್‌ ಕ್ಯಾಮೆರಾ ಬಳಸಿ ಕಾಡ್ಗಿಚ್ಚಿಗೆ ಮೂಲ ಕಾರಣ ತಿಳಿಯಲು ಇಲಾಖೆ ಮುಂದಾಗಿದೆ.

ಇತ್ತೀಚಿನ ದಿನಗಳಲ್ಲಿ ರಾಜ್ಯದ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚಿನ ಪ್ರಮಾಣ ಹೆಚ್ಚುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಕುದುರೆಮುಖ ರಾಷ್ಟ್ರೀಯ ಉದ್ಯಾನ, ಕರ್ಜಗಿ ಮೀಸಲು ಅರಣ್ಯ, ಕೊಡಗಿನ ಇಗ್ಗುತಪ್ಪ, ನಾಲಾಡಿ ಬೆಟ್ಟ ಪ್ರದೇಶ, ಚಾಮುಂಡಿ ಬೆಟ್ಟ ಮತ್ತಿತರ ಕಡೆ ಕಾಡ್ಗಿಚ್ಚು ಕಾಣಿಸಿಕೊಂಡು ನೂರಾರು ಎಕರೆ ಅರಣ್ಯ ಭೂಮಿ ಆಹುತಿಯಾಗಿತ್ತು. ಕಾಡ್ಗಿಚ್ಚಿಗೆ ಸೂಕ್ತ ಕಾರಣ ತಿಳಿಯಲು ಹಾಗೂ ಮಾನವನಿಂದ ಕಾಡ್ಗಿಚ್ಚು ಸೃಷ್ಟಿಯಾಗುತ್ತಿದೆಯೇ ಎಂಬುದನ್ನು ಅರಿಯಲು ಅರಣ್ಯ ಪ್ರದೇಶದಲ್ಲಿ ಡ್ರೋನ್‌ ಮೂಲಕ ಕಾವಲು ಕಾಯಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

ಡ್ರೋನ್‌ ಗಸ್ತು: ಚಿಕ್ಕಮಗಳೂರಿನಲ್ಲಿ ಡ್ರೋನ್‌ ಕ್ಯಾಮೆರಾ ಬಳಕೆ ಈಗಾಗಲೇ ಆರಂಭಿಸಲಾಗಿದ್ದು, ಬೆಟ್ಟ ಪ್ರದೇಶ, ಹುಲ್ಲುಗಾವಲು ಹೆಚ್ಚಿರುವ ಅರಣ್ಯ ಭಾಗದಲ್ಲಿ ಡ್ರೋನ್‌ ಕ್ಯಾಮೆರಾ ಗಸ್ತು ಶುರುವಾಗಿದೆ. ಡ್ರೋನ್ ಕ್ಯಾಮೆರಾ ಹಾರಿಸುವ ಸಂದರ್ಭದಲ್ಲಿ ಅರಣ್ಯ ಪ್ರದೇಶದಲ್ಲಿ ಜನ ಸಂಚಾರ ಇದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ನಿಯಮಿತವಾಗಿ ಬೆಳಗ್ಗೆ ಹಾಗೂ ಮಧ್ಯಾಹ್ನ ವೇಳೆಗೆ ಡ್ರೋನ್‌ ಕ್ಯಾಮೆರಾವನ್ನು ಅರಣ್ಯ ಪ್ರದೇಶದಲ್ಲಿ ಹಾರಾಟ ನಡೆಸಿ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತದೆ. ಹೀಗೆ ಸೆರೆ ಹಿಡಿಯಲಾಗುವ ದೃಶ್ಯಗಳಲ್ಲಿ ಬೆಂಕಿ ಬಿದ್ದ ಸ್ಥಳದಲ್ಲಿ ಜನ ಸಂಚಾರ ಕಂಡು ಬಂದು, ಅನುಮಾನ ಬಂದರೆ ಅಂಥವರನ್ನು ವಿಚಾರಣೆಗೊಳಪಡಿಸಲಾಗುತ್ತದೆ. ಅಲ್ಲದೆ, ಡ್ರೋನ್‌ ಕ್ಯಾಮೆರಾ ಬಳಕೆ ಮತ್ತು ವೀಡಿಯೋ ಪರಿಶೀಲನೆಗಾಗಿ ಹೆಚ್ಚುವರಿ ಸಿಬ್ಬಂದಿಯನ್ನೂ ನೇಮಿಸಲಾಗಿದೆ. 

ಅಪಾಯ ಹೆಚ್ಚಿರುವಲ್ಲಿ ಡ್ರೋನ್‌

ಅರಣ್ಯ ಪ್ರದೇಶದಲ್ಲಿ ಸೃಷ್ಟಿಯಾಗುವ ಕಾಡ್ಗಿಚ್ಚಿನ ನಿಖರ ಕಾರಣ ತಿಳಿಯಲು ಹಾಗೂ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚುವುದನ್ನು ಪತ್ತೆ ಮಾಡಲು ಡ್ರೋನ್‌ ಬಳಕೆ ಮಾಡಲಾಗುತ್ತಿದೆ. ಕಾಡ್ಗಿಚ್ಚಿನ ಅಪಾಯ ಹೆಚ್ಚಿರುವಲ್ಲಿ ಅದರ ಬಳಕೆಗೆ ಸೂಚನೆ ನೀಡಲಾಗಿದೆ.

ಈಶ್ವರ್ ಖಂಡ್ರೆ, ಅರಣ್ಯ ಸಚಿವ

ಹೆಚ್ಚು ಸಿಬ್ಬಂದಿ ನಿಯೋಜನೆ

ಚಿಕ್ಕಮಗಳೂರು ಭಾಗದ ಅರಣ್ಯ ಪ್ರದೇಶದಲ್ಲಿ ಉದ್ದೇಶಪೂರ್ವಕವಾಗಿ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿರುವ ಅನುಮಾನವಿದೆ. ಹೀಗಾಗಿ ಕಾಡಿಗೆ ಬೆಂಕಿ ಹಚ್ಚುವವರನ್ನು ಪತ್ತೆ ಮಾಡಲು ಡ್ರೋನ್‌ ಕ್ಯಾಮೆರಾ ಗಸ್ತು ಆರಂಭಿಸಲಾಗಿದೆ. ಅದಕ್ಕೆ ಬೇಕಾಗಿರುವ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಲಾಗಿದೆ.

-ರಮೇಶ್‌ ಬಾಬು, ಡಿಎಫ್‌ಒ, ಚಿಕ್ಕಮಗಳೂರು.