ಐದು ಮನೆಯವರ ಸ್ಥಳಾಂತರ, ರಕ್ಷಣೆಗೆ ಧಾವಿಸಿದ ಅಗ್ನಿಶಾಮಕ ದಳ
ಶುಕ್ರವಾರ ಸಂಜೆಯಿಂದ ಸುರಿದ ಭಾರಿ ಮಳೆಗೆ ಬೆಳ್ಳಾರೆ - ಗೌರಿಹೊಳೆ - ಪಡ್ಪು ಭಾಗದ ತಗ್ಗು ಪ್ರದೇಶದಲ್ಲಿನ ೫ ಮನೆಗಳಿಗೆ ನೀರು ನುಗ್ಗಿ ಮನೆಯವರನ್ನು ಸ್ಥಳಾಂತರ ಮಾಡಲಾಯಿತು.ರಾತ್ರಿ ವಿಷಯ ತಿಳಿದ ತಹಸೀಲ್ದಾರ್ ಮಂಜುಳಾ, ಕಂದಾಯ ನಿರೀಕ್ಷ ಅವಿನ್ ರಂಗತ್ತಮಲೆಯವರ ನೇತೃತ್ವದಲ್ಲಿ ಪಿಡಿಒ, ವಿ.ಎ., ಅಗ್ನಿಶಾಮಕ ಸಹಿತ ಸಿಬ್ಬಂದಿ ಸ್ಥಳಕ್ಕೆ ತೆರಳಿದರು. ತಗ್ಗು ಪ್ರದೇಶವಾದುದರಿಂದ ಭಾರಿ ಪ್ರಮಾಣದ ನೀರು ಬಂದಿತ್ತು.ಮೂರು ಮನೆಯವರು ನೀರು ಬರುವ ಮೊದಲೇ ಸ್ಥಳಾಂತಗೊಂಡಿದ್ದರು. ಎರಡು ಮನೆಯವರನ್ನು ಶಿಫ್ಟ್ ಮಾಡಲಾಯಿತು.
ಐವರ್ನಾಡು ಗ್ರಾಮದ ಬಾಂಜಿಕೋಡಿ ಎಂಬಲ್ಲಿ ಒಂದು ಮನೆಯವರನ್ನು ಸ್ಥಳಾಂತರ ಮಾಡಲಾಗಿದೆ.ಭಾರಿ ಮಳೆಯಿಂದ ನದಿ ನೀರು ಹೆಚ್ಚಳವಾಗಿ ನಾಗಪಟ್ಟಣ ಅಣೆಕಟ್ಟು ತುಂಬಿತ್ತು. ಆದ್ದರಿಂದ ಅಣೆಕಟ್ಟಿನ ೧೦ ಗೇಟುಗಳನ್ನು ತೆಗೆಯಲಾಗಿದೆ.
ಪೆರುವಾಜೆ ಗೌರಿಹೊಳೆ ಸಮೀಪ ನಾಗನಮಜಲು ಎಂಬಲ್ಲಿ ಮನೆಯೊಳಗೆ ಮಳೆ ನೀರು ನುಗ್ಗಿದ್ದು, ಮನೆಯೊಳಗಿದ್ದ ವೃದ್ಧೆಯೊಬ್ಬರನ್ನು ಸ್ಥಳೀಯರು ರಕ್ಷಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.