ನಗರದ ವಿವಿಧೆಡೆ ಸಂಜೆ ವೇಳೆಗೆ ಭರ್ಜರಿ ಮಳೆ

KannadaprabhaNewsNetwork |  
Published : Sep 07, 2025, 01:00 AM IST
ಮಳೆ | Kannada Prabha

ಸಾರಾಂಶ

ನಗರದ ಶೇಷಾದ್ರಿಪುರದ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತು ವಾಹನ ಸವಾರರು ಪರದಾಡಿದರು.

 ಬೆಂಗಳೂರು :  ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಮಧ್ಯಾಹ್ನ, ಸಂಜೆ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ನಿಂತ ಪರಿಣಾಮ ಸುಗಮ ವಾಹನ ಸಂಚಾರಕ್ಕೆ ಪರದಾಡಬೇಕಾಯಿತು.

ಶನಿವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ಆಗಾಗ ತುಂತುರು ಹಾಗೂ ಹಗುರ ಮಳೆಯಾಯಿತು. ಆದರೆ, ರಾತ್ರಿ 8.30ರ ಸುಮಾರಿಗೆ ಮೆಜೆಸ್ಟಿಕ್‌, ಸದಾಶಿವನಗರ, ವಿಧಾನಸೌಧ, ಉಲ್ಲಾಳ, ಮಲ್ಲೇಶ್ವರ, ರಾಜಾಜಿನಗರ, ಮಹಾಲಕ್ಷ್ಮಿಲೇಔಟ್‌, ನಾಗಪುರ, ಯಶವಂತಪುರ, ರಾಜರಾಜೇಶ್ವರಿ ನಗರ, ಶಾಂತಿನಗರ, ಚಾಮರಾಜಪೇಟೆ ಸೇರಿ ವಿವಿಧೆಡೆ ಧಾರಾಕಾರ ಮಳೆ ಸುರಿಯಿತು. ಸುಮಾರು 20 ನಿಮಿಷಕ್ಕೂ ಅಧಿಕ ಕಾಲ ಮಳೆ ಸುರಿದ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು. ಫ್ಲೈಓವರ್‌ ಕೆಳಭಾಗದಲ್ಲಿ ಬೈಕ್‌ ಸವಾರರು ನಿಂತುಕೊಂಡು ಮಳೆಯಿಂದ ರಕ್ಷಣೆ ಪಡೆದರು.

ಅಂಡರ್‌ ಪಾಸ್‌, ಫ್ಲೈಓವರ್‌ ಗಳ ಮೇಲೆ ಭಾರಿ ಪ್ರಮಾಣದಲ್ಲಿ ನೀರು ನಿಂತುಕೊಂಡ ದೃಶ್ಯಗಳು ಕಂಡು ಬಂದವು. ಮಳೆ ನೀರುಗಾಲುವೆಗಳಲ್ಲಿ ಕಸ ತುಂಬಿಕೊಂಡ ಪರಿಣಾಮ ನಗರದ ಬಹುತೇಕ ರಸ್ತೆಗಳಲ್ಲಿ ಭಾರೀ ಪ್ರಮಾಣ ನೀರು ಹರಿಯುತ್ತಿರುವುದು ಕಂಡು ಬಂತು.

ಹಲವಾರು ಕಡೆ ವಾಹನ ದಟ್ಟಣೆ:

ಪ್ರಮುಖವಾಗಿ ಓಕಳಿಪುರ, ಮೆಜಸ್ಟಿಕ್‌ ಸುತ್ತಮುತ್ತಲಿನ ರಸ್ತೆ, ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಂಡು ಬಂತು. ಕುವೆಂಪು ವೃತ್ತದ ಬಳಿ ನೀರು ನಿಂತ ಕಾರಣ ಭದ್ರಪ್ಪ ಲೇಔಟ್ ಕಡೆಗೆ ನಿಧಾನಗತಿಯ ವಾಹನ ಸಂಚಾರ ಕಂಡು ಬಂತು. ಸಿಕ್ಯೂಎಎಲ್ ಕ್ರಾಸ್ ಬಳಿ ನೀರು ನಿಂತು ಮೇಖ್ರಿ ವೃತ್ತದ ಕಡೆಗೆ ಸಂಚಾರ ದಟ್ಟಣೆ ಇತ್ತು.

ಗಾರೆಬಾವಿಪಾಳ್ಯ ಜಂಕ್ಷನ್ ಬಳಿ ನೀರು ನಿಂತು ನಗರದ ಕಡೆಗೆ ಸಂಚರಿಸುವ ವಾಹನ ಸವಾರರು ಪರದಾಡಿದರು. ನಾಗವಾರ ಜಂಕ್ಷನ್ ನಿಂದ ವೀರಣ್ಣಪಾಳ್ಯ ಸರ್ವೀಸ್ ರಸ್ತೆ ಕಡೆಗೆ, ಕ್ವೀನ್ಸ್ ರಸ್ತೆ ಕಡೆಯಿಂದ ಅನಿಲ್ ಕುಂಬ್ಳೆ ಜಂಕ್ಷನ್ ಕಡೆಗೆ, ಹುಣಸೆಮರ ಜಂಕ್ಷನ್ ಕಡೆಯಿಂದ ಬಿನ್ನಿಮಿಲ್ ರೈಲ್ವೇ ಅಂಡರ್ ಪಾಸ್ ಕಡೆಗೆ, ಖೋಡೆ ಜಂಕ್ಷನ್ ಅಂಡರ್‌ಪಾಸ್ ಕಡೆಯಿಂದ ಮೆಜೆಸ್ಟಿಕ್ ಕಡೆಗೆ ಹೋಗುವ ವಾಹನ ನಿಧಾನಗತಿಯಲ್ಲಿ ಸಂಚರಿಸಿದವು.

ದೇವಿನಗರ ಕಡೆಯಿಂದ ಕುವೆಂಪು ವೃತ್ತದ ಕಡೆಗೆ, ಹಳೆಯ ಉದಯ ಟಿವಿ ಜಂಕ್ಷನ್ ಕಡೆಯಿಂದ ಜಯಮಹಲ್ ರಸ್ತೆ ಕಡೆಗೆ, ಉಲ್ಲಾಳ ಜಂಕ್ಷನ್, ಜಯಮಹಲ್ ಅರಮನೆ ಮುಂಭಾಗ ಚೊಕ್ಕಸಂದ್ರ ಬಳಿ ನೀರು ನಿಂತಿರುವುದರಿಂದ ದಾಸರಹಳ್ಳಿ ಕಡೆಗೆ, ದೊಡ್ಡಮರ ರಸ್ತೆ ಬಳಿ ನೀರು ನಿಂತಿರುವುದರಿಂದ ಚೂಡಸಂದ್ರದ ಕಡೆಗೆ, ದೊಮ್ಮಸಂದ್ರದಿಂದ ಮುತ್ತನಲ್ಲೂರು ಕ್ರಾಸ್‌ ಕಡೆಗೆ, ಎಚ್‌ಎಸ್‌ಬಿಸಿ ಜಂಕ್ಷನ್ ಕಡೆಯಿಂದ ಬಿಳೇಕಹಳ್ಳಿ ಕಡೆಗೆ, ಸಾರಕ್ಕಿ ಸಿಗ್ನಲ್ ಕಡೆಯಿಂದ ಸಿಂಧೂರ ಕಡೆಗೆ, 35ನೇ ಜೆ.ಪಿ. ನಗರ ಕಡೆಯಿಂದ ಸಾರಕ್ಕಿ ಸಿಗ್ನಲ್ ಕಡೆಗೆ, ಸಾಗರ್ ಜಂಕ್ಷನ್ ಕಡೆಯಿಂದ ಡೈರಿ ವೃತ್ತದ ಕಡೆಗೆ, ಇಬ್ಬಲೂರು ಕಡೆಯಿಂದ ಅಗರದ ಕಡೆಗೆ ಸಾಗುವ ಮಾರ್ಗದಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಆಸ್ರಾ ಆಸ್ಪತ್ರೆಯ ಬನ್ನೇರುಘಟ್ಟ ರಸ್ತೆ ಕಡೆಯಿಂದ ಸಾಗರ ಜಂಕ್ಷನ್ ಕಡೆಗೆ, ಮಡಿವಾಳ ಪೊಲೀಸ್ ಠಾಣೆ ಕಡೆಯಿಂದ ಸಿಲ್ಕ್ ಬೋರ್ಡ್ ಕಡೆಗೆ, ಹೆಬ್ಬಾಳ ಮುಖ್ಯ ರಸ್ತೆ ಮತ್ತು ಸರ್ವಿಸ್ ರೋಡ್ ಕಡೆಯಿಂದ ವಿಮಾನ ನಿಲ್ದಾಣದ ಕಡೆಗೆ, ರೂಪೇನ ಅಗ್ರಹಾರ ಜಂಕ್ಷನ್ ಕಡೆಯಿಂದ ಬೊಮ್ಮನಹಳ್ಳಿ ಕಡೆಗೆ, ಸಾರಕ್ಕಿ ಸಿಗ್ನಲ್ ಕಡೆಯಿಂದ ಜರಗನಹಳ್ಳಿ ಕಡೆಗೆ, ಮೈಸೂರು ರೋಡ್ ಟೋಲ್ ಗೇಟ್ ಕಡೆಯಿಂದ ಹಳೆ ಗುಡ್ಡದಹಳ್ಳಿ ಕಡಗೆ, ಬೊಮ್ಮನಹಳ್ಳಿ ಜಂಕ್ಷನ್ ಕಡೆಯಿಂದ ರೂಪೇನ ಅಗ್ರಹಾರ ಜಂಕ್ಷನ್ ಕಡೆಗೆ. ಕಸ್ತೂರಿ ನಗರ ಮುಖ್ಯ ರಸ್ತೆಯಿಂದ ಟಿನ್ ಫ್ಯಾಕ್ಟರಿ ಕಡೆಗೆ, ರಾಮಮೂರ್ತಿನಗರ, ಹೆಬ್ಬಾಳ ರಸ್ತೆ ಮಾರ್ಗವಾಗಿ ವಾಹನಗಳ ಸಂಚಾರ ನಿಧಾನಗತಿಯಲ್ಲಿ ಇತ್ತು.

ಮಳೆಯಿಂದ ನಗರದ ಕೆಲ ಕಡೆ ಮರ ಹಾಗೂ ಮರದ ರೆಂಬೆ ಕೊಂಬೆ ಬಿದ್ದಿದ್ದು, ನಗರ ಪಾಲಿಕೆ ಸಿಬ್ಬಂದಿ ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದರು, ರಸ್ತೆಯಲ್ಲಿ ನಿಂತ ನೀರು ಹರಿದು ಹೋಗಲು ಇದ್ದ ಅಡೆತಡೆ ನಿವಾರಣೆ ಮಾಡಲಾಯಿತು.

ಎಲ್ಲಿ ಎಷ್ಟು ಮಳೆ?:

ನಗರದಲ್ಲಿ ಶನಿವಾರ ಸರಾಸರಿ 1.8 ಸೆಂ.ಮೀ. ಮಳೆಯಾಗಿದೆ. ಆರ್‌.ಆರ್‌. ನಗರದಲ್ಲಿ ಅತಿ ಹೆಚ್ಚು5.2 ಸೆಂ.ಮೀ. ಮಳೆಯಾಗಿದೆ. ಕೆಂಗೇರಿಯಲ್ಲಿ 5, ವಿದ್ಯಾಪೀಠದಲ್ಲಿ 4.9, ಹೆಮ್ಮಿಗೆಪುರ 4.7, ಬೊಮ್ಮನಹಳ್ಳಿಯಲ್ಲಿ 4.6, ನಾಯಂಡನಹಳ್ಳಿ 4.2, ಬಿಟಿಎಂ 3.3, ವಿ ನಾಗೇನಹಳ್ಳಿ 3.1, ಪೀಣ್ಯಕೈಗಾರಿಕಾ ಪ್ರದೇಶ ಹಾಗೂ ಬಿಳೆಕಹಳ್ಳಿಯಲ್ಲಿ ತಲಾ 3, ಎಚ್‌.ಗೊಲ್ಲಹಳ್ಳಿಯಲ್ಲಿ 2.9, ದೊರೆಸಾನಿಪಾಳ್ಯ ಹಾಗೂ ಕೋರಮಂಗಲದಲ್ಲಿ ತಲಾ 2.7, ಹಂಪಿನಗರ 2.5, ಪುಲಕೇಶಿನಗರ 2.3, ಎಚ್‌ಎಸ್‌ಆರ್‌ ಲೇಔಟ್‌ 2.2, ಬಸವೇಶ್ವರ ನಗರ 2.1 ಸೆಂ.ಮೀ ಮಳೆಯಾಗಿದೆ. ಭಾನುವಾರವೂ ನಗರದಲ್ಲಿ ಸಾಧಾರಣದಿಂದ ಕೂಡಿದ ಹಗುರ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

PREV
Read more Articles on

Recommended Stories

ಭಕ್ತರ ಸಹಕಾರದಿಂದ ದೇವಸ್ಥಾನದಲ್ಲಿ ಹೊಸತನ
ಪತ್ನಿ ಮೇಲೆ ಹಲ್ಲೆಗೈದು ಅರ್ಧ ತಲೆ ಬೋಳಿಸಿದ ಪತಿ