ಕನ್ನಡಪ್ರಭ ವಾರ್ತೆ ಭಟ್ಕಳ
ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.ತಾಲೂಕಿನಲ್ಲಿ ಭಾನುವಾರ ಬೆಳಗ್ಗೆವರೆಗೆ ಒಟ್ಟು 68.4 ಮಿಮಿ ಮಳೆಯಾಗಿದೆ. ಭಾರೀ ಮಳೆಗೆ ತಗ್ಗು ಪ್ರದೇಶ ಜಲಾವೃತಗೊಂಡಿದೆ. ಪಟ್ಟಣದ ಸಂಶುದ್ದೀನ ವೃತ್ತದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ಜಾಗವಿಲ್ಲದೇ ನೀರು ವೃತ್ತದಲ್ಲಿ ಶೇಖರಣೆಯಾಗಿ ಜನ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಭತ್ತ, ಅಡಿಕೆ ಬೆಳೆಗಾರರಿಗೆ ತೊಂದರೆ ಆಗಿದೆ. ಕಳೆದ ಕೆಲವು ದಿನಗಳಿಂದ ಮಳೆ ನಿಂತಿದ್ದರಿಂದ ಅಡಕೆಯ ಕೋಳೆ ರೋಗದ ಭಾದೆಯೂ ನಿಂತಿತ್ತು. ಆದರೆ ಇದೀಗ ಮತ್ತೆ ಮಳೆ ಜೋರಾಗಿ ಸುರಿಯುತ್ತಿರುವುದರಿಂದ ಅಡಕೆ ಬೆಳೆಗೆ ತೊಂದರೆಯಾಗುತ್ತಿದ್ದು, ಕೊಳೆ ರೋಗ ಮತ್ತೆ ವ್ಯಾಪಿಸಿ ಬೆಳೆ ಹಾನಿಯಾಗಿದೆ. ಭತ್ತ ಬೆಳೆದು ಕಟಾವಿಗೆ ಬರುತ್ತಿರುವ ಸಂದರ್ಭದಲ್ಲೇ ಮಳೆ ಸುರಿಯುತ್ತಿರುವುದು ತೊಂದರೆ ಆಗಿದೆ. ಭಾನುವಾರ ಬೆಳಗ್ಗೆಯಿಂದ ಸಂಜೆಯ ವರೆಗೂ ಎಡಬಿಡದೇ ಮಳೆ ಸುರಿದಿದ್ದರಿಂದ ವಾರದ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟಿಗೆ ತೊಂದರೆ ಉಂಟಾಯಿತು. ನವರಾತ್ರಿಯ ಸಂದರ್ಭವಾಗಿದ್ದರಿಂದ ಭಕ್ತರಿಗೆ ವಿವಿಧ ದೇವಸ್ಥಾನಗಳಿಗೆ ಹೋಗಲು ಸಹ ಮಳೆಯಿಂದ ತೊಂದರೆ ಉಂಟಾಯಿತು. ಈ ಸಲದ ಮಳೆಗೆ ಗ್ರಾಮಾಂತರ ಮತ್ತು ಪಟ್ಟಣ ಭಾಗದ ಕೆಲವು ರಸ್ತೆಗಳು ಹಾಳಾಗಿದ್ದು, ಸಂಚಾರಕ್ಕೆ ಪರದಾಡುವಂತಾಗಿದೆ. ಭಾರೀ ಮಳೆಯ ಹಿನ್ನೆಲೆ ಭಾನುವಾರ ಮಧ್ಯಾಹ್ನದ ನಂತರ ಪೇಟೆಯಲ್ಲಿ ಜನರ ಹೆಚ್ಚು ಓಡಾಟ ಕಂಡು ಬಂದಿಲ್ಲ.
ಗೋಕರ್ಣದಲ್ಲಿ ಮಳೆಯ ಅಬ್ಬರಕ್ಕೆ ಪ್ರವಾಸಿಗರು ಕಂಗಾಲುಭಾನುವಾರ ಮುಂಜಾನೆಯಿಂದ ಪ್ರವಾಸಿ ತಾಣದಲ್ಲಿ ಭಾರಿ ಮಳೆ ಸುರಿದಿದ್ದು, ವಾರಾಂತ್ಯದ ರಜೆಯ ಜೊತೆ ದಸರಾ ರಜೆಯ ಪ್ರಯುಕ್ತ ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು, ಮಳೆ ಅಬ್ಬರಕ್ಕೆ ಕಂಗಾಲಾದರು.ನೂರು ರೂಪಾಯಿಯ ಪ್ಲಾಸ್ಟಿಕ್ ಅಂಗಿ, ಛತ್ರಿಗಳ ಖರೀದಿಸುತ್ತಾ ಮಳೆಯಿಂದ ರಕ್ಷಿಸಿಕೊಂಡು ಅತ್ತಿತ್ತ ಓಡಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಛತ್ರಿ, ಪ್ಲಾಸ್ಟಿಕ್ ಅಂಗಿಗಳ ವ್ಯಾಪಾರದಿಂದ ವ್ಯಾಪರಸ್ಥರು ಸಂತಸಗೊಂಡಿದ್ದಾರೆ. ಪ್ರಮುಖ ದೇವಾಲಯಗಳಾದ ಮಹಾಗಣಪತಿ, ಮಹಾಬಲೇಶ್ವರ ಮಂದಿರದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ದೇವರ ದರ್ಶನಕ್ಕೆ ಸರದಿ ಸಾಲು ನೆರೆದಿತ್ತು. ಇಲ್ಲಿನ ಎಲ್ಲಾ ಪ್ರಮುಖ ಕಡಲತೀರದಲ್ಲಿ ಜನರು ನೆರೆದಿದ್ದು, ಸಮುದ್ರಕ್ಕಿಳಿದು ಆಟವಾಡಲು ಮಳೆ ಕಡಿವಾಣ ಹಾಕಿದ್ದು, ಆದರೂ ಕೆಲವರು ಮಳೆಯನ್ನ ಲೆಕ್ಕಿಸದೆ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಇನ್ನೂ ಪ್ರತಿ ಬಾರಿ ಜನಜಂಗುಳಿಯಾದಾಗ ಉಂಟಾಗುವ ವಾಹನ ದಟ್ಟಣೆ ಸಂಚಾರಕ್ಕೆ ತೊಡಕು, ಮಳೆ ಬಂದಾಗ ರಸ್ತೆಯಲ್ಲಿ ನೀರು ತುಂಬುವುದು ಮುಂದುವರಿದಿದ್ದು, ದಸರಾ ರಜೆ ಕಳೆಯಲು ಬಂದ ಜನರಿಗೆ ಮಳೆಗಾಲದ ಅನುಭವವಾಗುತ್ತಿದೆ. ಕಡಲತೀರದಲ್ಲಿ ನೀರಿಗಿಳಿಯುವವರ ಮೇಲೆ ಜೀವರಕ್ಷಕ ಸಿಬ್ಬಂದಿ ನಿಗಾ ಇಟ್ಟಿದ್ದರು.