ಹುಬ್ಬಳ್ಳಿ: ಧಾರಾಕಾರ ಮಳೆ ನಗರದಲ್ಲಿ ದೊಡ್ಡ ಅವಾಂತರವನ್ನೇ ಸೃಷ್ಚಿಸಿದೆ. ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರೆ, ಕೆಲ ರಸ್ತೆಗಳಲ್ಲಿ ರಾತ್ರಿಯೆಲ್ಲ ನೀರು ನಿಂತು ಸಂಚರಿಸದಂತಾಗಿತ್ತು. ಅಕ್ಷರಶಃ ನಗರದ ನಿದ್ದೆ ಗೆಡಿಸಿದೆ ಮಳೆ.
ಸಮುದಾಯ ಭವನದಲ್ಲಿ ಆಶ್ರಯ: ಇಂದಿರಾನಗರದ ಪಡದಯ್ಯನ ಹಕ್ಕಲದಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಇಲ್ಲಿನ ಕೆಲ ಕುಟುಂಬಗಳು ರಾತ್ರಿಯೆಲ್ಲ ಸಮುದಾಯ ಭವನದಲ್ಲಿ ತಂಗಿದ್ದರು. ಹಳೆಯ ಮನೆಗಳಿರುವುದರಿಂದ ಚಾವಣಿ ಕುಸಿಯುವ ಆತಂಕದಿಂದ ಕೆಲವರು ಸಮುದಾಯ ಭವನದಲ್ಲಿ ಆಶ್ರಯ ಪಡೆದಿದ್ದರು.
ನೆಲಮಹಡಿಗೆ ನುಗ್ಗಿದ ನೀರು: ಇಲ್ಲಿನ ಕೇಶ್ವಾಪುರ ಮನೋಜ್ ಪಾರ್ಕ್, ಗೋಪನಕೊಪ್ಪ, ಬಸವೇಶ್ವರ ಪಾರ್ಕ್, ಬೆಂಗೇರಿ, ಹಳೆ ಹುಬ್ಬಳ್ಳಿಯ ಸದರಸೋಪಾ, ನಾರಾಯಣ ಸೋಪಾ, ಆನಂದನಗರ, ನೇಕಾರನಗರ, ಶಿರೂರುಪಾರ್ಕ್ ವಿದ್ಯಾನಗರದ ಕೆಲ ಕಟ್ಟಡಗಳ ನೆಲ ಮಹಡಿಯಲ್ಲಿ ನೀರು ನಿಂತಿತ್ತು. ಕಾಟನ್ ಮಾರ್ಕೆಟ್‌ನ ಜರತಾರ್‌ಘರ್ ಬಿಲ್ಡಿಂಗ್‌ನ ಕೆಳಮಹಡಿ, ಶಿರೂರ ಪಾರ್ಕಿನ ಅಕ್ಷಯ ಕಾಲನಿಗಳ ನೆಲಮಹಡಿಯಲ್ಲಿ ನೀರು ನಿಂತು ಇಲ್ಲಿನ ಜನ ಪರಿತಪಿಸುವಂತಾಯಿತು. ಬೆಳಗ್ಗೆ ಮೋಟರ್‌ನಿಂದ ನೀರು ಹೊರಹಾಕಲಾಯಿತು. ನಗರದ 59ನೇ ವಾರ್ಡಿನ ಶಿವಗಂಗಾ ಲೇಟೌಟ್, ಅಜಂತಾನಗರ 45ನೇ ವಾರ್ಡಿನ ದಯಾನಂದ ಕಾಲನಿ ಮತ್ತು ವಿಜಯನಗರ ವಿಜಯ ಅಪಾರ್ಟ್‌ಮೆಂಟ್‌ಗೆ ಮ್ಯಾನ್‌ಹೋಲ್ ತುಂಬಿ ನೀರು ನುಗ್ಗಿದೆ.ನೀರಲ್ಲಿ ಸ್ಮಾರ್ಟ್ ಸಿಟಿ ಕಟ್ಟಡ: ಬುಧವಾರದ ಮಳೆಗೆ ಇಲ್ಲಿ ಕಾಟನ್ ಮಾರ್ಕೆಟ್‌ನಲ್ಲಿನ ಸಾಂಸ್ಕೃತಿಕ ಭವನ ನೆಲಮಹಡಿ ಪೂರ್ತಿ ನೀರು ತುಂಬಿತ್ತು. ಇಲ್ಲಿ ನಿಲ್ಲಿಸಿದ್ದ ವಾಹನಗಳು ಕಾಣದಷ್ಟು ನೀರು ನಿಂತಿತ್ತು. ಇಲ್ಲಿದ್ದ ವಸ್ತುಗಳೆಲ್ಲ ಮಳೆನೀರಿನಿಂದ ಹಾನಿಯಾಗಿವೆ. ಬೆಳಗ್ಗೆಯಿಂದ ಸಂಜೆ ವರೆಗೂ ನೀರು ಹೊರಹಾಕುವ ಕಾರ್ಯ ನಡೆದೇ ಇತ್ತು. ಇಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ವಾಹನಗಳು ನೀರಲ್ಲಿ ಸಿಲುಕಿದ್ದವು. ಜನರೇಟರ್ ಸೇರಿ ಹಲವು ವಸ್ತುಗಳಿಗೆ ಹಾನಿಯಾಗಿದೆ. ಸಂಜೆವರೆಗೂ ಈ ಕಟ್ಟಡಕ್ಕೆ ವಿದ್ಯುತ್ ಸರಬರಾಜು ಇರಲಿಲ್ಲ. ಇಲ್ಲಿನ ಸಿಬ್ಬಂದಿ ಬೇರೆ ಕಟ್ಟಡದಿಂದ ಒಳಪ್ರವೇಶಿಸಿ ಕಾರ್ಯ ನಿರ್ವಹಿಸುವಂತಾಗಿತ್ತು.
ನೀರಲ್ಲಿ ತೇಲಿಹೋದ ಆಟೋ: ಇಲ್ಲಿನ ಪಿಬಿ ರಸ್ತೆಯ ತೊರವಿಹಕ್ಕಲ ಬಳಿಯ ಗ್ಯಾರೊಂಜೋಂದರಲ್ಲಿ ನಿಲ್ಲಿಸಿದ್ದ ಆಟೋ ರಾಜಕಾಲುವೆಯಲ್ಲಿ ತೇಲಿಹೋಗಿ 500 ಮೀಟರ್ ದೂರದಲ್ಲಿ ನಿಂತಿದೆ. ಆಟೋದಲ್ಲಿ ಹೊಲಸು ತುಂಬಿ ಹಾಳಾಗಿದೆ. ಇದನ್ನು ಹೊರತೆಗೆಯಲು ಸ್ಥಳೀಯರು ಹರಸಾಹಸ ಪಡುವಂತಾಯಿತು. ಅಲ್ಲದೆ, ಗ್ಯಾರೇಜಿನಲ್ಲಿಟ್ಟಿದ್ದ ವಸ್ತುಗಳೂ ತೇಲಿಹೋಗಿ ಮಾಲಕರಿಗೆ ಅಪಾರ ನಷ್ಟವುಂಟಾಗಿದೆ.ಮಳೆಯಿಂದ ಒಂದು ಜೀವಹಾನಿಯಾಗಿದೆ. ಇಲ್ಲಿವರೆಗೆ 200ರಿಂದ 250 ಮನೆಗಳಿಗೆ ನೀರು ನುಗ್ಗಿರುವ ವರದಿಯಾಗಿದೆ. ಶಹರ ತಾಲೂಕು ವ್ಯಾಪ್ತಿಯಲ್ಲಿ 10 ಮನೆಗಳು ಭಾಗಶಃ ಕುಸಿದಿವೆ. 2 ಗಿಡಗಳು ನೆಲಕ್ಕುರಳಿದ್ದು, ತೆರವು ಕಾರ್ಯಾಚರಣೆ ನಡೆದಿದೆ ಎಂದು ಶಹರ ತಹಸೀಲ್ದಾರ್ ಕಲಗೌಡ ಪಾಟೀಲ ಹೇಳಿದರು.