ಬಾಲಕಾರ್ಮಿಕ ಪದ್ಧತಿ ವಿರುದ್ಧ ಜಾಗೃತಿ ಜಾಥಾಗೆ ನ್ಯಾಯಾಧೀಶರಿಂದ ಚಾಲನೆ

KannadaprabhaNewsNetwork |  
Published : Jun 13, 2025, 05:08 AM IST
12ಕೆಎಂಎನ್ ಡಿ14 | Kannada Prabha

ಸಾರಾಂಶ

ಅನಕ್ಷರಸ್ಥರು ಹಾಗೂ ಬಡತನದಲ್ಲಿರುವವರು 14 ವರ್ಷದೊಳಗಿನ ಮಕ್ಕಳನ್ನು ದುಡಿಯಲು ಹೆಚ್ಚಾಗಿ ಕಳುಹಿಸುತ್ತಾರೆ. ಅಂತಹ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ಅವರು ಸ್ವಾತಂತ್ರ‍್ಯ ಜೀವನ ನಡೆಸಲು ಸಹಕಾರಿಯಾಗಲು ದೇಶದಲ್ಲಿ ಅನೇಕ ಕಾನೂನು ಜಾರಿಗೆ ತರಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ಜಿಲ್ಲಾ ಪ್ರಧಾನ ಮತ್ತು ಸಷೆನ್ಸ್‌ ನ್ಯಾಯಾಧೀಶ ಜಿ.ಎನ್.ಸುಬ್ರಹ್ಮಣ್ಯ ಅವರು ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿದರು.

ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಹಮ್ಮಿಕೊಂಡಿದ್ದ ಜಾಥಾವು ಜಿಲ್ಲಾಧಿಕಾರಿಗಳ ಕಚೇರಿಯಿಂದ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದವರೆಗೂ ಮೆರವಣಿಗೆ ನಡೆಸಿ ಜಾಗೃತಿ ಮೂಡಿಸಲಾಯಿತು.

ಶಾಲಾ ಮಕ್ಕಳು ಜಾಥಾದಲ್ಲಿ ಪಾಲ್ಗೊಂಡು ಬಾಲ ಕಾರ್ಮಿಕತೆ ನಾಚಿಕೆಗೇಡು ಬಾಲಕಾರ್ಮಿಕ ಪದ್ಧತಿ ನಿಲ್ಲಿಸಿ, ದುಡಿಮೆ ಬೇಡ ಶಿಕ್ಷಣ ಬೇಕು, ಮುಗ್ಧತೆ ರಕ್ಷಿಸಿ ಬಾಲಕಾರ್ಮಿಕತೆ ಶಿಕ್ಷಿಸಿ ಎಂಬ ನಾಮಫಲಕ ಪ್ರದರ್ಶಿಸುವ ಮೂಲಕ ಜಾಗೃತಿ ಜಾಥಾ ನಡೆಸಲಾಯಿತು.

ಚಾಲನೆ ನೀಡಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ.ಎನ್.ಸುಬ್ರಹ್ಮಣ್ಯ ಮಾತನಾಡಿ, ಅನಕ್ಷರಸ್ಥರು ಹಾಗೂ ಬಡತನದಲ್ಲಿರುವವರು 14 ವರ್ಷದೊಳಗಿನ ಮಕ್ಕಳನ್ನು ದುಡಿಯಲು ಹೆಚ್ಚಾಗಿ ಕಳುಹಿಸುತ್ತಾರೆ. ಅಂತಹ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ಅವರು ಸ್ವಾತಂತ್ರ‍್ಯ ಜೀವನ ನಡೆಸಲು ಸಹಕಾರಿಯಾಗಲು ದೇಶದಲ್ಲಿ ಅನೇಕ ಕಾನೂನು ಜಾರಿಗೆ ತರಲಾಗಿದೆ. ಬಾಲ ಕಾರ್ಮಿಕರನ್ನು ರಕ್ಷಿಸಲು ಅನೇಕ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.

ಅಧಿಕಾರಿಗಳು ಎಲ್ಲೆಲ್ಲಿ ಬಾಲ ಕಾರ್ಮಿಕರಿಂದ ದುಡಿಸಿಕೊಳ್ಳಲಾಗುತ್ತಿದೆ ಅಂತವರು ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡಿದ್ದಾರೆ. 14 ವರ್ಷದೊಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನು ಬಾಹಿರ ಈ ಕುರಿತು ಜಾಗೃತಿ ಮೂಡಿಸಲು ಜಾಥಾ ನಡೆಸಲಾಗಿದೆ ಎಂದರು.

ಈ ವೇಳೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ಜಿಲ್ಲಾ ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ಪ್ರಭಾಕರ್, ನಿರೀಕ್ಷಕರಾದ ಸ್ವಾಮಿ, ಗಂಗಾಧರ್, ನಾಗರತ್ನ, ಮಕ್ಕಳ ರಕ್ಷಣಾ ಘಟಕದ ಸದಸ್ಯ ಮಿಕ್ಕೆರೆ ವೆಂಕಟೇಶ್, ಡಿಡಿಪಿಐ ಶಿವರಾಮೇಗೌಡ ಸೇರಿದಂತೆ ಇತರರು ಹಾಜರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ