ಇನ್ನೊಬ್ಬರಿಗೆ ಸಹಾಯ ಮಾಡುವುದರಿಂದ ಯಾರೂ ಬಡವರಾಗುವುದಿಲ್ಲ. ಅದು ಹೃದಯ ಶ್ರೀಮಂತಿಕೆಯನ್ನು ಕೊಡುತ್ತದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಕನ್ನಡಪ್ರಭ ವಾರ್ತೆ ಹೊಸನಗರ
ಇನ್ನೊಬ್ಬರಿಗೆ ಸಹಾಯ ಮಾಡುವುದರಿಂದ ಯಾರೂ ಬಡವರಾಗುವುದಿಲ್ಲ. ಅದು ಹೃದಯ ಶ್ರೀಮಂತಿಕೆಯನ್ನು ಕೊಡುತ್ತದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.ಶನಿವಾರ ಹೊಸನಗರ ಗಾಯಿತ್ರಿ ಮಂದಿರದಲ್ಲಿ ಪಟ್ಲ ಫೌಂಡೇಶನ್ ಅಶ್ರಯದಲ್ಲಿ ಅಂ ರಾಮಶೇಟ್ ವೇದಿಕೆ ಹಾಗೂ ಶ್ರೀ ಗಣಪತಿ ದೇವಾಸ್ಥಾನದ ಮಾರ್ಕೋಡು ಸುಬ್ರಾಯ ಆಚಾರ್ಯ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರ್ಥಿಕವಾಗಿ ದುರ್ಬಲರಾದವರನ್ನು ಮೇಲೆತ್ತಿ ಸಬಲರನ್ನಾಗಿಸುವುದು ಹೃದಯಕ್ಕೆ ಒಂದು ಒಳ್ಳೆಯ ವ್ಯಾಯಾಮ ಇದ್ದ ಹಾಗೆ. ಮನುಷ್ಯ ಮನೆ ಮನೆಯಲ್ಲೂ ಜನಿಸುತ್ತಾನೆ. ಆದರೆ, ಮನುಷ್ಯತ್ವ ಎಂಬುದು ಎಲ್ಲರಲ್ಲಿಯೂ ಇರಬೇಕೆಂದೇನೂ ಇಲ್ಲ. ಹೃದಯ ಶ್ರೀಮಂತಿಕೆಯನ್ನು ಹೊಂದಿದ ಭಾಗವತ ಪಟ್ಲ ಸತೀಶ್ ಶೆಟ್ಟಿಯವರು ಇದಕ್ಕೆಲ್ಲ ಜೀವಂತ ನಿದರ್ಶನರಾಗಿ ದುರ್ಬಲ ಕಲಾವಿದರ ಭವಿಷ್ಯದ ಆಶಾಕಿರಣವಾಗಿ ಗೋಚರಿಸುತ್ತಾರೆ ಎಂದರು.
ಹೊಸನಗರ ತಾಲೂಕಿನ 50 ಶಾಲೆಯ ವಿದ್ಯಾರ್ಥಿಗಳಿಗೆ ಕಳೆದ ಎರಡು ವರ್ಷಗಳಿಂದ ಯಕ್ಷಶಿಕ್ಷಣ ನೀಡುವ ಜೊತೆಗೆ ಅವರ ಪ್ರತಿಭೆಯನ್ನು ಹೊರಹಾಕಲು ವೇದಿಕೆ ನಿರ್ಮಾಣ ಮಾಡಿ ಅದರ ವೆಚ್ಚವನ್ನು ಸಹ ಪಟ್ಲ ಫೌಂಡೇಶನ್ ಭರಿಸುತ್ತಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.
ಹಿರಿಯ, ಬಡ ಕಲಾವಿದರು ಯಕ್ಷಗಾನಮೇಳಗಳಲ್ಲಿ ಈಗಲೂ ದುಡಿಯುತ್ತಿದ್ದಾರೆ. ಅಂತಹ ಬಡ ಕಲಾವಿದರಿಗೆ ಆಸರೆಯಾಗಿ ನಿಂತವರೇ ಪಟ್ಲ ಸತೀಶ್ ಶೆಟ್ಟಿ. ‘ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು’ ಎಂಬ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಹಲವಾರು ಕಲಾವಿದರಿಗೆ ಬದುಕಿನ ಬೆಳಕಿನತ್ತ ನಡೆಯುವ ದಾರಿಯನ್ನು ತೋರಿಸಿ ಕೊಟ್ಟಿದ್ದಾರೆ ಎಂದು ಬಣ್ಣಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡ ಮಾತನಾಡಿ, ಪಟ್ಲ ಸತೀಶ್ ಶೆಟ್ಟಿ ಎಂದೊಡನೆ ನನಗೆ ನೆನಪಾಗುತ್ತಿದ್ದುದು ಯಕ್ಷಗಾನದ ಭಾಗವತಿಕೆಯ ವಿಶಿಷ್ಟ ಶೈಲಿಯ ಗಾಯನ. ಸ್ವರ ಏರಿಳಿತಗಳಿಂದ ತನ್ನದೇ ಆದ ಹೇರಳ ಅಭಿಮಾನಿಗಳ ವಲಯವನ್ನು ಸೃಷ್ಟಿಸಿಕೊಂಡ ಭಾಗವತಿಕೆಯ ಝಲಕ್. ಬರಬರುತ್ತಾ ಯಕ್ಷಪ್ರಿಯರನ್ನು ಹುಚ್ಚೆಬ್ಬಿಸಿದ ಪಟ್ಲ ಭಾಗವತಿಕೆಯು ತನ್ನ ಸ್ವರದ ಆಳ, ಅಗಲಗಳನ್ನು ಮತ್ತೂ ವಿಸ್ತಾರಗೊಳಿಸಿತು. ಪಟ್ಲರು ತಮ್ಮ ಸ್ವರಮಾಧುರ್ಯದಿಂದ ಬಹುಬೇಗ ಪ್ರಸಿದ್ಧಿಗೆ ಬಂದ ಭಾಗವತರಾಗಿದ್ದಾರೆ ಎಂದರು.
ಪಟ್ಲ ಪೌಂಡೇಶನ್ ಕಳೆದ ಹತ್ತು ವರ್ಷಗಳಿಂದ ಯಕ್ಷ ಕಲಾವಿದರು ಹಾಗೂ ಅವರ ಕುಟುಂಬ ರಕ್ಷಣೆಗೆ ಸಾಕಷ್ಟು ಯೋಜನೆಗಳನ್ನು ನೀಡುವುದರ ಜೊತೆಗೆ ರಾಷ್ಟ್ರಮಟ್ಟದಲ್ಲಿ ಯಕ್ಷಗಾನಕಲೆಯನ್ನು ಜೀವಂತವಾಗಿ ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ. ಎಲ್ಲ ವಿದ್ಯಾರ್ಥಿಗಳು ಅಸಕ್ತಿಯಿಂದ ಯಕ್ಷಗಾನ ಅಬ್ಯಾಸ ಮಾಡಿ ಎಂದು ಕರೆನೀಡಿದರು.ಇದೇ ಸಂದರ್ಭದಲ್ಲಿ
ಪಟ್ಲ ಸತೀಶ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ನಗರ ರಾಘವೇಂದ್ರ ಮಾತನಾಡಿದರು.
ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆ ಡಿ.ದೇವರಾಜ್, ಬೆಂಗಳೂರಿನ ಉದ್ಯಮಿ ಮಾವಿನಕೊಪ್ಪ ಎನ್.ಸುರೇಶ್, ಹೊಸನಗರ ತಾಲೂಕು ಆರೋಗ್ಯ ಭಾರತೀ ಅಧ್ಯಕ್ಷ ಡಾ.ಚೈತನ್ಯ, ಕಳೂರು ಸೊಸೈಟಿ ಅಧ್ಯಕ್ಷ ದುಮ್ಮ ವಿನಯ್, ಎನ್. ಆರ್. ದೇವನಾಂದ್, ಸಾಹಿತಿ ಸುದೀಂದ್ರ ಭಂಡಾರ್‌ಕರ್, ಪತ್ರಕರ್ತ ಸಂಘದ ಅಧ್ಯಕ್ಷ ಎಂ.ಕೆ. ವೆಂಕಟೇಶ್ ಮೂರ್ತಿ, ಗೌತಮ್ ಆಚಾರ್ಯ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.