ಸದಾ ಸಾತ್ವಿಕ ಕಾರ್ಯಗಳನ್ನೇ ಮಾಡುತ್ತಾ ಸ್ತ್ರೀ ಕುಲಕ್ಕೆ ಆದರ್ಶವಾದ, ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮನ ಬದುಕು ಸರ್ವಕಾಲಕ್ಕೂ ಅನುಕರಣೀಯವಾದದ್ದು ಎಂದು ರೆಡ್ಡಿ ಸಮಾಜ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್. ದ್ವಾರಕೀಶ್ ರೆಡ್ಡಿ ಹೇಳಿದರು.
ಹೂವಿನಹಡಗಲಿ: ಸಹನೆ ಮತ್ತು ತಾಳ್ಮೆಯನ್ನು ತನ್ನ ಬದುಕಿನ ವಜ್ರ ಕವಚವನ್ನಾಗಿ ಮಾಡಿಕೊಂಡು, ಕೆಡುಕನ್ನು ಬಯಸಿದವರಿಗೆ ಎಂದೂ ಕೆಡುಕಾಗದಿರಲೆಂದು, ಸದಾ ಸಾತ್ವಿಕ ಕಾರ್ಯಗಳನ್ನೇ ಮಾಡುತ್ತಾ ಸ್ತ್ರೀ ಕುಲಕ್ಕೆ ಆದರ್ಶವಾದ, ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮನ ಬದುಕು ಸರ್ವಕಾಲಕ್ಕೂ ಅನುಕರಣೀಯವಾದದ್ದು ಎಂದು ರೆಡ್ಡಿ ಸಮಾಜ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್. ದ್ವಾರಕೀಶ್ ರೆಡ್ಡಿ ಹೇಳಿದರು.
ತಾಲೂಕಿನ ಹಿರೇಮಲ್ಲಿಕೆರೆ ಗ್ರಾಮದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೇಮರಡ್ಡಿ ಮಲ್ಲಮ್ಮನ ಆದರ್ಶಮಯ ಬದುಕು ಎಲ್ಲರಿಗೂ ಸ್ಫೂರ್ತಿದಾಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹೇಮರೆಡ್ಡಿ ಮಲ್ಲಮ್ಮ ಸಮುದಾಯ ಭವನಕ್ಕೆ ಗ್ರಾಮದ ಮಕಾಶಿ ದೇವಪ್ಪ ತಮ್ಮ ಸ್ವಂತ ನಿವೇಶನ ದಾನ ಮಾಡಿದರು. ಅವರನ್ನು ತಾಲೂಕ ರೆಡ್ಡಿ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಮಲ್ಲನಕೆರೆ ಮಠದ ಅಭಿನವ ಚೆನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ರೆಡ್ಡಿ ಸಮಾಜದ ಉಪಾಧ್ಯಕ್ಷ ರಾಜೂರ ಮಲ್ಲಪ್ಪ, ಖಜಾಂಚಿ ವಿಶ್ವನಾಥ ರೆಡ್ಡಿ ಡಂಬಳ, ಮುಖಂಡರಾದ ಮಲ್ಲಪ್ಪ ಡಂಬಳ, ಫಕ್ಕೀರಡ್ಡಿ ಡಂಬಳ, ರಾಜೂರು ಶಿವಣ್ಣ, ಬಂಡಿ ಮಲ್ಲಪ್ಪ, ಮಕಾಶಿ ನಿಂಗರೆಡ್ಡಿ, ದಾಟುನಾಳು ಹನುಮಂತಪ್ಪ, ತೇರಿನ ಮನೆ ಬಸವ ರೆಡ್ಡಪ್ಪ, ಬಸ್ರಳ್ಳಿ ಎಸ್. ಬಸರೆಡ್ಡಿ, ಹಿರೇಮಲ್ಲನಕೆರೆಯ ರೆಡ್ಡಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.
ಲೌಕಿಕ ಜೀವನದ ನಡುವೆ ಶರಣತ್ವ ಮೆರೆದವರು ಹೇಮರೆಡ್ಡಿ ಮಲ್ಲಮ್ಮ
ಕುರುಗೋಡು: ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಭಾನುವಾರ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಕಚೇರಿ ಶಿರಸ್ತೇದಾರ್ ವಿಜಯಕುಮಾರ್ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಜಯಂತಿಗೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿ, ಮೋಕ್ಷದ ಮಾರ್ಗ ತೋರಿದ ಮಹಾಸಾಧ್ವಿ ದಾನ, ದಾಸೋಹ ಹಾಗೂ ನಿಸ್ವಾರ್ಥ ಭಕ್ತಿಗೆ ಹೆಸರಾದ ಹೇಮರೆಡ್ಡಿ ಮಲ್ಲಮ್ಮ ಅವರು ಸಮಾಜ ಸುಧಾರಣೆಯಲ್ಲಿ ಕ್ರಾಂತಿ ಮಾಡಿದ ಅವರನ್ನು ಜಾತಿಗೆ ಸೀಮಿತವಾಗಿಸದೇ ಅವರ ವಿಚಾರ, ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಹೇಳಿದರು. ಲೌಕಿಕ ಜೀವನದ ನಡುವೆ ಶರಣತ್ವ ಮೆರೆದ ಮಹಾಮಾನವತಾವಾದಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಆದರ್ಶ ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದರು.ಜೆ. ರವಿರೆಡ್ಡಿ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮರ ಬದುಕೇ ಮಹಾನ್ ಗ್ರಂಥವಾಗಿದೆ. ಸನ್ಯಾನಿಸಿ, ವೈರಾಗಿಣಿ ಆಗದೆ, ಸಾಂಸಾರಿಕ ಜೀವನ ನಡೆಸುತ್ತಲೂ ಸಾಧನೆ ಮಾಡಬಹುದು ಎಂಬುದನ್ನು ನಿರೂಪಿಸಿದರು. ಪ್ರೀತಿ, ವಿಶ್ವಾಸದಿಂದ ಮಾಡಿದ ಕೆಲಸ ಫಲ ಕೊಡುತ್ತದೆ. ವ್ಯಭಿಚಾರಿಯಾದ ಮೈದುನ ವೇಮನನ್ನು ತಿದ್ದಿ ತೀಡಿ, ಮಹಾತತ್ವಜ್ಞಾನಿಯನ್ನಾಗಿ ರೂಪಿಸಿದರು. ಆಂಧ್ರದ ನಾಡಗೀತೆಯಲ್ಲಿ ಮಲ್ಲಮ್ಮನ ಉಲ್ಲೇಖವಿದೆ. ಅಕ್ಕಮಹಾದೇವಿ ಶ್ರೀಶೈಲ ಮಲ್ಲಿಕಾರ್ಜುನನನ್ನು ಪತಿ ಎಂದರೆ, ಮಲ್ಲಮ್ಮ ತಂದೆ ಎಂದರು. ಇಬ್ಬರ ದೃಷ್ಟಿ ಭಿನ್ನವಾಗಿ ಕಂಡರೂ ಆಶಯ, ಆದರ್ಶಗಳು ಸಮಾಜಕ್ಕೆ ಪೂರಕ ಎಂದರು.ಭೀಮರೆಡ್ಡಿ, ಹನುಮಂತ ರೆಡ್ಡಿ, ಭಾಸ್ಕರ ರೆಡ್ಡಿ, ತಿಮ್ಮಪ್ಪ, ಎರ್ರೆಪ್ಪ, ಚಿದಾನಂದ ಕಚೇರಿ ಸಿಬ್ಬಂದಿ, ಲತಾ, ಎಮ್ಮಿನೂರಪ್ಪ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.