ಪತ್ರಕರ್ತರ ಸ್ನೇಹಿತರ ಬಳಗ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಮಡಿಕೇರಿ ನಗರದ ಪತ್ರಕರ್ತರಿಗೆ ಭಾನುವಾರ ಆಯೋಜಿಸಿದ್ದ ಸೌಹಾರ್ದ ಕ್ರಿಕೆಟ್ ಪಂದ್ಯಾಟದಲ್ಲಿ ಮೀಡಿಯಾ ಮಾಸ್ಟರ್ಸ್ ತಂಡ ಪ್ರಥಮ ಸ್ಥಾನ ಪಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪತ್ರಕರ್ತರ ಸ್ನೇಹಿತರ ಬಳಗ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಮಡಿಕೇರಿ ನಗರದ ಪತ್ರಕರ್ತರಿಗೆ ಭಾನುವಾರ ಆಯೋಜಿಸಿದ್ದ ಸೌಹಾರ್ದ ಕ್ರಿಕೆಟ್ ಪಂದ್ಯಾಟದಲ್ಲಿ ಮೀಡಿಯಾ ಮಾಸ್ಟರ್ಸ್ ತಂಡ ಪ್ರಥಮ ಸ್ಥಾನ ಪಡೆಯಿತು.

ಬೆಸ್ಟ್ ಆಫ್ ತ್ರಿ ಪಂದ್ಯಾಟದ ಮೊದಲ ಪಂದ್ಯದಲ್ಲಿ ರಾಕೇಶ್ ಮಾಲೀಕತ್ವದ ಆದರ್ಶ್ ಅದ್ಕಲೇಗಾರ್ ನಾಯಕತ್ವದ ಮೀಡಿಯಾ ಮಾಸ್ಟರ್ಸ್ ತಂಡ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿತು. ನಿಗದಿತ ೮ ಓವರ್‌ನಲ್ಲಿ ೪ ವಿಕೆಟ್ ನಷ್ಟಕ್ಕೆ ೭೨ ರನ್ ಕಲೆ ಹಾಕಿತು. ತಂಡದ ಪರ ಪ್ರೇಮ್ ೨೦ ರನ್ ಕಲೆ ಹಾಕಿದರು. ಗುರಿ ಬೆನ್ನಟ್ಟಿದ ನವೀನ್ ಡಿಸೋಜ ಮಾಲೀಕತ್ವದ ಮಂಜುಸುವರ್ಣ ನಾಯಕತ್ವದ ಪವರ್ ಹಿಟ್ಟರ್ಸ್ ತಂಡ ೫.೨ ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಗೆಲುವಿನ ದಡ ಸೇರಿತು. ತಂಡದ ಪರ ಮಂಜು ಸುವರ್ಣ ೫೮ ರನ್ ಕಲೆ ಹಾಕಿದರು.

೨ನೇ ಪಂದ್ಯದಲ್ಲಿ ಟಾಸ್ ಗೆದ್ದ ಮೀಡಿಯಾ ಮಾಸ್ಟರ್ಸ್ ತಂಡ ನಿಗದಿತ ಓವರ್‌ಗಳಲ್ಲಿ ೨ ವಿಕೆಟ್ ಕಳೆದುಕೊಂಡು ೧೧೬ ರನ್ ಕಲೆ ಹಾಕಿತು. ತಂಡದ ಪರ ಪ್ರೇಮ್ ೨೨ , ಶಿವು ಕಾಂತರಾಜ್ ೨೪, ಆದರ್ಶ್ ಅದ್ಕಲೇಗಾರ್ ೫೦ ರನ್ ಕಲೆ ಹಾಕಿದರು. ಗುರಿ ಬೆನ್ನಟ್ಟಿದ ಪವರ್ ಹಿಟ್ಟರ್ಸ್ ತಂಡ ೬ ವಿಕೆಟ್ ಕಳೆದುಕೊಂಡು ೮೭ ರನ್ ಕಲೆ ಹಾಕಿ ಸೋಲುಂಡಿತು.

೩ನೇ ಪಂದ್ಯದಲ್ಲಿ ಟಾಸ್ ಸೋತ ಮೀಡಿಯಾ ಮಾಸ್ಟರ್ಸ್ ತಂಡ ನಿಗದಿತ ಓವರ್‌ನಲ್ಲಿ ೨ ವಿಕೆಟ್ ನಷ್ಟಕ್ಕೆ ೧೩೪ ರನ್ ಕಲೆ ಹಾಕಿತು. ತಂಡದ ಪರ ಶಿವು ಕಾಂತರಾಜ್ ೩೮ ರನ್ ಕಲೆ ಹಾಕಿದರೆ, ಆದರ್ಶ್ ಅದ್ಕಲೇಗಾರ್ ೬೩ ರನ್ ಕಲೆ ಹಾಕಿದರು.

ಗುರಿಬೆನ್ನಟ್ಟಿದ ಪವರ್ ಹಿಟ್ಟರ್ಸ್ ತಂಡ ದಿವಾಕರ್ ಅವರ ಮೊದಲ ಓವರ್‌ನಲ್ಲಿ ಮಂಜು ಸುವರ್ಣ, ನವೀನ್ ಡಿಸೋಜ, ವಿಜಯ್ ಅವರ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಿಗದಿತ ಓವರ್‌ನಲ್ಲಿ ೮ ವಿಕೆಟ್ ನಷ್ಟಕ್ಕೆ ೬೭ ರನ್ ಕಲೆ ಹಾಕಿತು. ಪರಿಣಾಮ ೨-೧ ಅಂತರದಲ್ಲಿ ಮೀಡಿಯಾ ಮಾಸ್ಟರ್ಸ್ ತಂಡ ಗೆಲುವು ಸಾಧಿಸಿ ಪ್ರಥಮ ಸ್ಥಾನ ಪಡೆದರೆ, ಪವರ್ ಹಿಟ್ಟರ್ಸ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಪಂದ್ಯಾಟಕ್ಕೆ ತೀರ್ಪುಗಾರರಾಗಿ ಜಯಪ್ರಕಾಶ್, ಕೆ.ಎಂ.ಇಸ್ಮಾಯಿಲ್. ಸ್ಕೋರರ್ ಆಗಿ ಭಾಚರಣಿಯಂಡ ಶಶಾಂಕ್ ಕಾರ್ಯನಿರ್ವಹಿಸಿದರು.

ಬಹುಮಾನ ವಿತರಣಾ ಸಮಾರಂಭ: ನಗರದ ಪತ್ರಿಕಾ ಭವನದಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯಿತು. ಈ ಸಂದರ್ಭ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಚರಣಿಯಂಡ ಅನು ಕಾರ್ಯಪ್ಪ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕಿ ಬಿ.ಆರ್.ಸವಿತಾ ರೈ, ಪತ್ರಕರ್ತರ ಸೌಹಾರ್ದ ಪಂದ್ಯಾವಳಿ ಸಂಚಾಲಕ ನವೀನ್ ಡಿಸೋಜ ಮಾತನಾಡಿದರು. ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಆದರ್ಶ್ ಅದ್ಕಲೇಗಾರ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕ್ರೀಡಾ ಸಮಿತಿ ಸಂಚಾಲಕ ಸಂತೋಷ್ ರೈ ಉಪಸ್ಥಿತರಿದ್ದರು. ಹೆಚ್.ಜೆ.ರಾಕೇಶ್ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.