ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಕನ್ನಡ ಭವನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗೋವಿಂದರಾಜು ಎಂ. ಕಲ್ಲೂರು ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಕಥಾಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೋವಿಂದರಾಜು ತಮ್ಮ ಕಥೆಗಳ ಮೂಲಕ ಪರಂಪರೆಯ ಕಥನಗಳನ್ನು ಸಮಕಾಲೀನ ಸಂದರ್ಭದ ತಿಳುವಳಿಕೆಯ ಜೊತೆಗಿಟ್ಟು ವಿಶ್ಲೇಷಣೆ ನಡೆಸಲು ಪ್ರಯತ್ನಿಸುತ್ತಾರೆ. ಸಮಾಜದಲ್ಲಿರುವ ರೂಢಿ ಕಂದಾಚಾರಗಳನ್ನು ಪ್ರಶ್ನಿಸುವ ಗುಣ, ಕಥೆ ಹೇಳಲು ಬಳಸಿಕೊಂಡ ಭಾಷೆ, ತಂತ್ರಗಾರಿಕೆ ಈ ಸಂಕಲನವನ್ನು ವಿಶಿಷ್ಟವಾಗಿಸಿದೆ ಎಂದರು.ವಿಮರ್ಶಕ ರವಿಕುಮಾರ್ ಮಾತನಾಡಿ, ಕಥಾಸ್ಪರ್ಧೆಗಳು, ಸೃಜನಶೀಲ ಚಟುವಟಿಕೆಗಳು ವಿಮರ್ಶೆ, ಸಂಶೋಧನೆಗೆ ಹಿನ್ನೆಡೆಯನ್ನುಂಟುಮಾಡುತ್ತವೆ ಎಂಬ ಮಾತುಗಳ ನಡುವೆ ಇಲ್ಲಿನ ಕಥೆಗಳು ಸಂಶೋಧನಾತ್ಮಕ ಸೃಜನೆಗಳಾಗಿವೆ. ಈ ಸಂಕಲನವು ಸಂಶೋಧನೆ,ವಿಮರ್ಶೆ, ಸೃಜನಶೀಲತೆಯ ನಡುವಿನ ಗೆರೆಯನ್ನು ಅಳಿಸಿಹಾಕಿದೆ. ಇವು ವಿಮರ್ಶಾ ಸಂಶೋಧನಾತ್ಮಕ ಕಥೆಗಳು. ಎಂಟು ಕಥೆಗಳನ್ನು ಹೊಂದಿರುವ ಈ ಸಂಕಲನದಲ್ಲಿ ಏಕ ಮಾದರಿಯ ಸಂಸ್ಕೃತಿ ಹೇರಿಕೆಗೆ ಸಾಹಿತ್ಯಿಕ ಪ್ರತಿರೋಧವಿದೆ. ಇಡೀ ಸಂಕಲನದ ಉದ್ದಕ್ಕೂ ಕಾವ್ಯದ ರೂಪಕಗಳು ಎದುರಾಗುತ್ತವೆ. ಕೆಲವು ಕಥೆಗಳು ಕಾವ್ಯದಿಂದ ಆರಂಭವಾದರೆ ಕೆಲವು ಕಥೆಗಳು ಕಾವ್ಯದಿಂದ ಮುಕ್ತಾಯವಾಗುತ್ತವೆ ಎಂದರು.
ಲೇಖಕ, ಪ್ರಾಧ್ಯಾಪಕ ನಿತ್ಯಾನಂದ ಬಿ. ಶೆಟ್ಟಿ ಮಾತನಾಡಿ, ಭಾಷೆಯನ್ನು ಬಳಸಿ ಮಾಡುವ ಕೃತವೆಲ್ಲವೂ ರಾಜಕೀಯ ಚಟುವಟಿಕೆಯೇ ಆಗಿರುತ್ತವೆ.ಇಲ್ಲಿನ ಕಥೆಗಳಲ್ಲಿ ಕಂಡು ಬರುವ ಮುಖ್ಯ ಗುಣ ಆತ್ಮವಿಮರ್ಶೆ. ಕೆಡುಕನ್ನು ಅನ್ಯದಲ್ಲಿ ಗುರುತಿಸುವುದು ಸುಲಭ. ಆದರೆ ನನ್ನೊಳಗಿನ ಕೆಡುಕಿನ ದಾರಿಯನ್ನು ಅನ್ವೇಷಿಸುವುದು ಕಷ್ಟ. ಈ ಕಥೆಗಾರ ಕಷ್ಟದ ಹಾದಿಯನ್ನು ಆರಿಸಿದ್ದಾರೆ ಎಂದರು.
ಮಲ್ಲಿಕಾ ಬಸವರಾಜು ಮಾತನಾಡಿ, ಆಧುನಿಕತೆ ಹಾಗೂ ಪುರಾಣವನ್ನು ಸೃಜನಶೀಲವಾಗಿ ಬೆರೆಸಿದ ಇಲ್ಲಿನ ಕಥೆಗಳಲ್ಲಿ ಬರುವ ಸ್ತ್ರೀ ಪಾತ್ರಗಳಿಗೆ ಅಪಾರ ಗಟ್ಟಿ ಧ್ವನಿ ಇದೆ. ಸಮಕಾಲೀನ ಸಂದರ್ಭದಲ್ಲಿ ಗಮನಿಸಲೇಬೇಕಾದ ಸಂಕಲನವಾಗಿದೆ ಎಂದರು.