ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ, ಬೆಳೆಸಲು ಸಾಂಸ್ಕೃತಿಕ ಉತ್ಸವಗಳು ಸಹಕಾರಿಯಾಗಲಿವೆ. ಸ್ಥಳೀಯ ಜನಪದ ನಾಯಕರು ಅಲ್ಲಿನ ನೆಲಮೂಲದ ಸಾಂಸ್ಕೃತಿಕ ಅನನ್ಯತೆಯ ಪ್ರತೀಕವಾಗಿದ್ದಾರೆ ಎಂದು ಜಾನಪದ ವಿದ್ವಾಂಸ ಸಣ್ಣ ನಾಗಪ್ಪ ತಿಳಿಸಿದರು. ಅವರು ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿ ಕೇಂದ್ರದಲ್ಲಿ ನಡೆದ ಸಾಸಲು ಚಿನ್ನಮ್ಮ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ, ಬೆಳೆಸಲು ಸಾಂಸ್ಕೃತಿಕ ಉತ್ಸವಗಳು ಸಹಕಾರಿಯಾಗಲಿವೆ. ಸ್ಥಳೀಯ ಜನಪದ ನಾಯಕರು ಅಲ್ಲಿನ ನೆಲಮೂಲದ ಸಾಂಸ್ಕೃತಿಕ ಅನನ್ಯತೆಯ ಪ್ರತೀಕವಾಗಿದ್ದಾರೆ ಎಂದು ಜಾನಪದ ವಿದ್ವಾಂಸ ಸಣ್ಣ ನಾಗಪ್ಪ ತಿಳಿಸಿದರು. ಅವರು ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿ ಕೇಂದ್ರದಲ್ಲಿ ನಡೆದ ಸಾಸಲು ಚಿನ್ನಮ್ಮ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಾಸಲು ಚಿನ್ನಮ್ಮ ಮಹಾಸಾದ್ವಿ ಮತ್ತು ಮಹಿಳಾ ಶಕ್ತಿಯ ಜೀವಂತ ಸಂಕೇತವಾಗಿದ್ದಾರೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದ ಜನಪದ ಪರಂಪರೆಯಲ್ಲಿ ಸಾಸಲು ಜೀವನ ಕುರಿತು ಸಾಕಷ್ಟು ಸಾಹಿತ್ಯ ಕಂಡು ಬರುತ್ತದೆ. ಕನ್ನಡ ಸಾಹಿತ್ಯದಲ್ಲಿ ಬರುವ ದಾನ ಚಿಂತಾಮಣಿ ಅತ್ತಿಮಬ್ಬೆಯಂತೆ, ಸಾಸಲು ಚಿನ್ನಮ್ಮ ಸಹ ಕೆರೆ, ಬಾವಿಗಳನ್ನು ಕಟ್ಟಿಸುವ ಮೂಲಕ ಜನೋಪಕಾರಿ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
ಸಾಸಲು ಚಿನ್ನಮ್ಮ ಕುರಿತು ಹಲವಾರು ಪವಾಡಗಳನ್ನು ಜನಪದ ಕಥೆಗಾರರು ಹೇಳುತ್ತಾರೆ. ‘ಸಾಸಲು ಚಿನ್ನಮ್ಮ ಕುರಿತು ಜನಪದ ಸಾಹಿತ್ಯದಲ್ಲಿ ಕಥೆ, ಕಾವ್ಯ, ನಾಟಕಗಳಿವೆ. ಸಾಸಲು ಸೇರಿದಂತೆ ತುಮಕೂರು ಜಿಲ್ಲೆಯ ಪಾವಗಡ, ಆಂಧ್ರಪ್ರದೇಶದ ಅನಂತಪುರ ಮುಂತಾದ ಕಡೆಗಳಲ್ಲಿ ಸಾಸಲು ಚಿನ್ನಮ್ಮ ಕುರಿತ ಜನಪದ ಸಾಹಿತ್ಯ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸಾಸಲು ಚಿನ್ನಮ್ಮನ ಹೆಸರಿನಲ್ಲಿ ನಿರ್ಮಾಣವಾಗಿರುವ ಕೆರೆಗಳು, ಬಾವಿಗಳು, ದೇವಾಲಯಗಳು ಆಕೆಯ ಸಮಾಜಮುಖಿ ಕಾರ್ಯ ಗಳಿಗೆ ಸಾಕ್ಷಿಯಾಗಿವೆ ಎಂದರು.
ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಮಹಿಳೆಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯ ಸಂಕೇತವಾಗಿದೆ. ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡಿ, ಅವರ ಸಾಧನೆಗಳನ್ನು ಪ್ರೋತ್ಸಾಹಿಸುವ ಮೂಲಕ ಸಮಾಜದಲ್ಲಿ ಮಹಿಳೆಯರಿಗೆ ಗೌರವಯುತ ಸ್ಥಾನ ಕಲ್ಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ, ತಾ.ಪಂ ಮಾಜಿ ಅಧ್ಯಕ್ಷ ಅಶ್ವತ್ಥನಾರಾಯಣಸ್ವಾಮಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ಗೋವಿಂದರಾಜು, ಗೌರವ ಕಾರ್ಯದರ್ಶಿ ಎ.ಜಯರಾಮ್, ಸಾಸಲು ಚಿನ್ನಮ್ಮ ಉತ್ಸವ ಸಮಿತಿಯ ಪದಾಧಿಕಾರಿಗಳಾದ ನರಸಿಂಹಗೌಡ, ಶ್ರೀನಿವಾಸ್, ಲಾವಣ್ಯ ನಾಗರಾಜ್, ರವಿಕುಮಾರ್, ಲೋಕೇಶ್, ರಮೇಶ್, ನರಸಿಂಹಮೂರ್ತಿ, ಚಂದ್ರಶೇಖರ್, ನರೇಂದ್ರ ಮುಂತಾದವರು ಭಾಗವಹಿಸಿದ್ದರು.
ವಿಜೃಂಭಣೆಯ ಮೆರವಣಿಗೆ :
ಸಾಸಲು ಚಿನ್ನಮ್ಮ ಉತ್ಸವದ ಭವ್ಯ ಮೆರವಣಿಗೆ ಸಾಸಲು ಚಿನ್ನಮ್ಮ ದೇವಾಲಯ ಮುಂಭಾಗದಿಂದ ಪ್ರಾರಂಭವಾಯಿತು. ನೂರಾರು ಮಹಿಳೆಯರು ಪೂರ್ಣ ಕುಂಭದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಡೊಳ್ಳುಕುಣಿತ, ವೀರಗಾಸೆ, ಕೀಲುಕುದುರೆ, ಚಿಟ್ಟಿಮೇಳ, ಯಕ್ಷಗಾನ, ಗೊಂಬೆಗಳು, ತಮಟೆ ಮುಂತಾದ ಕಲಾ ತಂಡಗಳು ಮೆರವಣಿಗೆ ಜಾನಪದ ಮೆರಗು ನೀಡಿದ್ದವು. ಪ್ರಗತಿಪರ ರೈತ ರಾಜೇಗೌಡ ಹೊಸದಾಗಿ ಸಿದ್ಧಪಡಿಸಿದ್ದ ಎತ್ತಿನ ಗಾಡಿ ಮತ್ತು ಎತ್ತುಗಳ ಜೊಡೆ ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ:
ಸಾಸಲು ಚಿನ್ನಮ್ಮ ಉತ್ಸವದ ಮುಖ್ಯ ವೇದಿಕೆಯಲ್ಲಿ ದೊಡ್ಡಬಳ್ಳಾಪುರ ಪರಿಗಣಿತ ಕಲಾ ತಂಡ, ನಾಟ್ಯ ಮಯೂರಿ ಕಲಾತಂಡ, ಇಡಗುಂಜಿ ಕಲಾ ಸಂಘ, ಜೂನಿಯರ್ ರಾಜ್ ಕುಮಾರ್, ಜೂನಿಯರ್ ವಿಷ್ಣುವರ್ಧನ್, ಜಾನಪದ ಗಾಯಕರು, ರಂಗಭೂಮಿ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಅಂತಾರಾಷ್ಟ್ರೀಯ ಛಾಯಾಗ್ರಾಹಕ ಟಿ.ಕೆಂಪಣ್ಣ ಅವರ ಕರ್ನಾಟಕ ಪ್ರಾಚೀನ ದೇವಾಲಯ ಛಾಯಾಚಿತ್ರ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.