ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ಬೆಂಬಲ ಬೆಲೆಯ ರಾಗಿ ಖರೀದಿ ಕೇಂದ್ರಕ್ಕೆ ಹೊರ ಜಿಲ್ಲೆಗಳಿಂದ ಲಾರಿಗಟ್ಟಲೆ ರಾಗಿ ಬರುತ್ತಿದೆ. ಇದರಿಂದ ತಾಲೂಕಿನ ನಿಷ್ಟಾವಂತ ರೈತರಿಗೆ ಮೋಸವಾಗುತ್ತಿದೆ ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಸಿ ಜಿ ರವಿ ಆರೋಪಿಸಿದ್ದಾರೆ.ಪಟ್ಟಣದ ಎಪಿಎಂಸಿ ರಾಗಿ ಖರೀದಿ ಕೇಂದ್ರದ ಆವರಣದಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಈಗಾಗಲೇ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಗಿ ಖರೀದಿ ಕೇಂದ್ರವನ್ನ ಆರಂಭಿಸಿದೆ. ಆದರೆ ನಿಜವಾದ ರೈತ ಬೆಳೆದಂತಹ ರಾಗಿಗೆ ಬೆಲೆ ಇಲ್ಲದೆ ಹೊರ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದ ರಾಗಿ ಖರೀದಿ ಮಾಡಿಕೊಂಡು ರಾಗಿ ಖರೀದಿ ಕೇಂದ್ರಗಳಿಗೆ ಲಾರಿಯ ಮೂಲಕ ಮತ್ತು ಟ್ರ್ಯಾಕ್ಟರ್ ಮೂಲಕ ಮಧ್ಯವರ್ತಿಗಳು ತರುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ರಾಗಿಯನ್ನು ಬೆಳೆದಿದ್ದಾರೆ ಎಂದು ಸಮೀಕ್ಷೆ ಇದೆ. ಆದರೆ ರಾಗಿ ಖರೀದಿ ಕೇಂದ್ರದಲ್ಲಿ ಮಾತ್ರ ಹೆಚ್ಚು ರೈತರ ನೋಂದಣಿ ಆಗಿದೆ. ಇದಕ್ಕೆ ಮೂಲ ಕಾರಣ ಮಧ್ಯವರ್ತಿಗಳು. ಇವರು ರೈತರ ಮನೆ ಬಾಗಿಲಿಗೆ ತೆರಳಿ ರೈತ ಇಂತಿಷ್ಟು ಹಣವನ್ನು ನೀಡಿ ರೈತರಿಂದ ಎಫ್‌ಐಡಿ ಪಡೆದು ನಂತರ ಆ ಎಫ್‌ಐಡಿಗೆ ರಾಗಿ ಎಂದು ನೋಂದಣಿ ಮಾಡಿಸಿಕೊಂಡು ರಾಗಿ ಖರೀದಿ ಕೇಂದ್ರಕ್ಕೆ ರಾಗಿಯನ್ನು ತರುತ್ತಿದ್ದಾರೆ ಎಂದು ದೂರಿದರು. ಭಾನುವಾರ ಬೆಳಗ್ಗೆ ಬೆಲಸಿಂದ ಮುಂಭಾಗದಲ್ಲಿ ಶಿವಮೊಗ್ಗ ಜಿಲ್ಲೆಯ ಲಾರಿ ಒಂದರಲ್ಲಿ ಸುಮಾರು ೪೦೦ಕ್ಕೂ ಅಧಿಕ ಚೀಲಗಳು ಟ್ರ್ಯಾಕ್ಟರ್‌ಗಳಿಗೆ ವರ್ಗಾವಣೆ ಮಾಡುತ್ತಿರುವ ವಿಡಿಯೋ ಕೂಡ ನಮ್ಮ ಬಳಿ ಇದೆ. ಲಾರಿ ಚಾಲಕನನ್ನ ಪ್ರಶ್ನಿಸಿದರೆ ನನ್ನ ಮೇಲೆ ಲಾರಿ ಹತ್ತಿಸುವುದಾಗಿ ಬೆದರಿಕೆ ಹಾಕುತ್ತಾನೆ. ಈ ಹಿಂದೆಯೂ ಕೂಡ ಈ ಇಲಾಖೆಯಲ್ಲಿ ಅಕ್ರಮ ನಡೆದಿದ್ದು ಆಗಲು ಕೂಡ ಲಾರಿ ಸಮೇತ ಪೊಲೀಸ್ ಇಲಾಖೆ ದೂರನ್ನು ನೀಡಿ ತಾಲೂಕು ದಂಡಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೂ ಕೂಡ ನೀಡಿದರೂ ಯಾವುದೇ ರೀತಿಯ ಪ್ರಯೋಜನವಾಗಲಿಲ್ಲ. ಆಗಲು ಇದಕ್ಕೆಲ್ಲ ಮೂಲ ಕಾರಣ ಜಿಲ್ಲೆಯ ರಾಗಿ ಖರೀದಿ ಕೇಂದ್ರದ ಖರೀದಿ ಅಧಿಕಾರಿಗಳು ಮತ್ತು ಜಿಲ್ಲಾ ಆಹಾರ ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕಿ ಅನುರಾಧ ಕೈವಾಡವಿದೆ. ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಚಿವರು ಗಮನಹರಿಸಬೇಕು ಮತ್ತು ರಾಗಿ ಖರೀದಿ ಕೇಂದ್ರವನ್ನು ಸ್ಥಗಿತಗೊಳಿಸಬೇಕು. ಇಲ್ಲದೆಹೋದ ಪಕ್ಷದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಉಗ್ರ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಇದೇ ಸಂದರ್ಭದಲ್ಲಿ ರೈತ ಮುಖಂಡರಾದ ಪ್ರಕಾಶ್, ಪುಟ್ಟೇಗೌಡ, ಶಂಕರಲಿಂಗೇಗೌಡ, ಮಂಜುನಾಥ್, ತೇಜಸ್ ಮತ್ತಿತರಿದ್ದರು.
===ಮುಖ್ಯಾಂಶಗಳು:*ಬೇರೆಡೆಯಿಂದ ಬಂದ ೪೦೦ಕ್ಕೂ ಅಧಿಕ ಚೀಲಗಳು ಟ್ರ್ಯಾಕ್ಟರ್‌ಗಳಿಗೆ ವರ್ಗಾವಣೆ
* ರಾಗಿ ಖರೀದಿ ಕೇಂದ್ರದ ಖರೀದಿ ಅಧಿಕಾರಿಗಳ ವಿರುದ್ಧ ಆಕ್ರೋಶ
- ಉಗ್ರ ಹೋರಾಟದ ಎಚ್ಚರಿಕೆ