ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣ ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಸಂಖ್ಯಾಬಲದ ದೃಷ್ಟಿಯಿಂದ ಬಹುಮತ ಹೊಂದಿದ್ದರೂ, ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯುತ್ತಿದ್ದು ಒಬ್ಬರು ರೆಸಾರ್ಟ್ ರಾಜಕಾರಣಕ್ಕೆ ತೆರಳಿದರೆ ಮತ್ತೊಬ್ಬ ಸದಸ್ಯರು ತಮ್ಮನ್ನು ಬೆಂಬಲಿಸುವಂತೆ ಬಿಜೆಪಿ ಸದಸ್ಯನ ಮನವೊಲಿಸಲು ಆಸೆ, ಆಮಿಷ ಒಡ್ಡುತ್ತಿದ್ದು ಕಾಂಗ್ರೆಸ್ ಪಕ್ಷದ ಸದಸ್ಯರೇ ಒಬ್ಬರ ಕಾಲು ಒಬ್ಬರು ಎಳೆಯುವ ಸ್ಥಿತಿ ನಿರ್ಮಾಣವಾಗಿದ್ದು ರಾಜಕೀಯ ರಂಗಿನಾಟಕ್ಕೆ ಸಾಕ್ಷಿಯಾಗಿದೆ.ಕಳೆದ ಬಾರಿ ಪುರಸಭೆಯ 23 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಎಲ್ಲಾ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ 17 ಸ್ಥಾನಗಳನ್ನು ಗಳಿಸಿ ಬಾರಿ ಬಹುಮತದೊಂದಿಗೆ ಅಧಿಕಾರ ಗದ್ದುಗೆಗೆ ಏರಿತ್ತು. ಆರಂಭದಲ್ಲಿ ಎಲ್ಲಾ ಸರಿಯಿತ್ತಾದರೂ ನಂತರದಲ್ಲಿ ಮತ್ತೆ ಪಕ್ಷದ ಒಳ ಜಗಳ, ಅಧಿಕಾರ ಹಂಚಿಕೆಯ ಕಿತ್ತಾಟದಿಂದಾಗಿ ಬಹುಮತವಿದ್ದರೂ ಅಧ್ಯಕ್ಷ ಸ್ಥಾನ ಪಡೆಯಲು ಕಿತ್ತಾಡುವ ಸ್ಥಿತಿ ಬಂದಿದೆ. ಅಧ್ಯಕ್ಷ ಸ್ಥಾನದ ವಿಚಾರಕ್ಕೆ ಅಶೋಕ್ ಕೋರ್ಟ್ ಮೆಟ್ಟಿಲೇರಿದ್ದು ಈಗ ಇತ್ಯರ್ಥವಾಗಿದ್ದು ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ.ಆಂತರಿಕ ಕಲಹ:ಕಾಂಗ್ರೆಸ್ ಸದಸ್ಯರ ನಡುವೆ ಅಧ್ಯಕ್ಷ ಸ್ಥಾನದ ಹಂಚಿಕೆ ಅಥವಾ ನಾಯಕತ್ವದ ವಿಚಾರದಲ್ಲಿ ತೀವ್ರ ಭಿನ್ನಾಭಿಪ್ರಾಯ ತಲೆದೂರಿದೆ. ಒಬ್ಬರಿಗೊಬ್ಬರು ಹೊಂದಾಣಿಕೆ ಮಾಡಿಕೊಳ್ಳದ ಕಾರಣ, ಸ್ವಪಕ್ಷದವರನ್ನೇ ಸೋಲಿಸಲು ಗುಂಪು ರಾಜಕಾರಣ ಹಾಗೂ ತಂತ್ರ ಪ್ರತಿ ತಂತ್ರಗಳನ್ನು ರೂಪಿಸಲಾಗುತ್ತಿದೆ. ಆಂತರಿಕ ಭಿನ್ನಾಭಿಪ್ರಾಯ, ಒಳ ಜಗಳ ಹಾಗೂ ಬಣಗಳ ರಾಜಕೀಯದಿಂದಾಗಿ ಬೇಲೂರು ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರ ಒಗ್ಗಟ್ಟು ಚಿಂದಿ ಚಿತ್ರಾನ್ನವಾಗಿದೆ. ಪುರಸಭೆಯ ಅಧ್ಯಕ್ಷ ಸ್ಥಾನಕ್ಕಾಗಿ ಈಗಾಗಲೇ ಆಂತರಿಕ ಕಲಹ ಮುಗಿಲು ಮುಟ್ಟಿದೆ.ಬಿಜೆಪಿ ಸದಸ್ಯನ ಮೊರೆ ಹೋದ ಗಿರೀಶ್:ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಕ್ರಮ್ ಪಾಷಾ ಜೆಡಿಎಸ್ ಕಾಂಗ್ರೆಸ್ ಏಕೈಕ ಬಿಜೆಪಿ ಸದಸ್ಯರನ್ನು ಕಟ್ಟಿಕೊಂಡು ರೆಸಾರ್ಟ್ ರಾಜಕಾರಣಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಮತ್ತೋರ್ವ ಅಧ್ಯಕ್ಷ ಆಕಾಂಕ್ಷಿ ಗಿರೀಶ್ ಕೂಡ ಸದಸ್ಯರ ಮನವೊಲಿಸುವ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಇದು ಸಾಲದು ಎಂಬಂತೆ ಏಕೈಕ ಬಿಜೆಪಿ ಸದಸ್ಯ ಪ್ರಭಾಕರ್ ಅವರ ಮನೆ ಬಾಗಿಲು ತಟ್ಟಿ ದಯಮಾಡಿ ಸಹಕರಿಸುವಂತೆ ಕೋರಿದ್ದಾರೆ. ಅನ್ಯಕೋಮಿನ ಸದಸ್ಯನನ್ನು ಬೆಂಬಲಿಸುವುದು ಬಿಟ್ಟು ನನಗೆ ಬೆಂಬಲ ನೀಡಿ. ಎದುರಾಳಿ ಎಷ್ಟು ಆಮಿಷ ಒಡ್ಡಿದ್ದಾನೆ ಅದರ ಡಬಲ್ ನಾನು ಕೊಡುತ್ತೇನೆ ಎಂದು ಹೇಳಿದ್ದಾರೆ ಎನ್ನಲಾದ ಆಡಿಯೋ ತುಣುಕುಗಳು ಎಲ್ಲೆಡೆ ವೈರಲ್ ಆಗುತ್ತಿವೆ.ಕುದುರೆ ವ್ಯಾಪಾರ ಬಲುಜೋರು:
ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಪೈಪೋಟಿ ಮುಂದುವರಿದಿದ್ದು ಸದಸ್ಯರ ಕುದುರೆ ವ್ಯಾಪಾರಕ್ಕೆ ಆಕಾಂಕ್ಷಿಗಳು ಮುಂದಾಗಿದ್ದಾರೆ. ಈಗಾಗಲೇ ಎರಡು ಬಾರಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಸದಸ್ಯರಿಗೆ ಸಾಕಷ್ಟು ಹಣವನ್ನು ನೀಡಿ ನೀರಿನಂತೆ ಹಣವನ್ನು ಖರ್ಚು ಮಾಡಲಾಗಿದೆ ಎಂಬ ವದಂತಿ ಇದೆ. ಇಷ್ಟಾದರೂ ಬುದ್ಧಿ ಕಲಿಯದ ಅಧ್ಯಕ್ಷ ಪಟ್ಟದ ಆಕಾಂಕ್ಷಿಗಳು ಈಗ ಮತ್ತೆ ಹಣದ ಆಮಿಷ ಒಡ್ಡಿ ಸದಸ್ಯರನ್ನು ಕೊಂಡುಕೊಳ್ಳಲು ಮಸಲತ್ತು ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಕಾಂಗ್ರೆಸ್ ಸಂಘಟನೆಗೆ ಹಿನ್ನಡೆ :ಬಹುಮತವಿದ್ದೂ ಅಧಿಕಾರ ಪಡೆಯಲು ವಿರೋಧ ಪಕ್ಷವಾದ ಬಿಜೆಪಿಯ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿರುವ ಕಾಂಗ್ರೆಸ್ ಪಕ್ಷದ ಸಂಘಟನಾ ಶಕ್ತಿಗೆ ಹಿನ್ನಡೆಯಾಗಿ ಕಾಣುತ್ತಿದೆ ಎಂದು ಹಿರಿಯ ಮುಖಂಡರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಈಗಿನ ಪರಿಸ್ಥಿತಿಯಲ್ಲಿ ಜಿಲ್ಲಾ ಮಟ್ಟದ ನಾಯಕರು, ಸ್ಥಳೀಯ ಮುಖಂಡರು ಮಧ್ಯಪ್ರವೇಶಿಸಿ ಅತೃಪ್ತ ಸದಸ್ಯರ ಮನವೊಲಿಸದಿದ್ದರೆ, ಬೇಲೂರು ಪುರಸಭೆಯಲ್ಲಿ ಅನಿರೀಕ್ಷಿತ ರಾಜಕೀಯ ಬದಲಾವಣೆಗಳು ಸಂಭವಿಸತ್ತಾ ಇದ್ದರೆ ಮತದಾರರು ಜನಪ್ರತಿನಿಧಿಗಳನ್ನು ನಂಬುವುದಾದರೂ ಹೇಗೆ. ಇದು ಪ್ರಜಾಪ್ರಭುತ್ವದಲ್ಲಿ ಪಕ್ಷದ ಸಿದ್ಧಾಂತಗಳಿಗಿಂತ ವೈಯಕ್ತಿಕ ಅಧಿಕಾರ ದಾಹ ಹೇಗೆ ಮೇಲುಗೈ ಸಾಧಿಸುತ್ತದೆ ಎಂಬುದಕ್ಕೆ ಒಂದು ನಿದರ್ಶನ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.