ನಿಗಮದ ಹಗರಣದಲ್ಲಿ ಕಾಣದ ಕೈಗಳು: ಶಿವನಗೌಡ ನಾಯಕ

KannadaprabhaNewsNetwork |  
Published : Aug 30, 2026, 01:15 AM IST
29ಕೆಡಿವಿಜಿ2, 3-ದಾವಣಗೆರೆಯಲ್ಲಿ ಶನಿವಾರ ಬಿಜೆಪಿ ಮಾಜಿ ಸಚಿವ ಶಿವನಗೌಡ ನಾಯಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಣದಿಂದಲೇ ಚುನಾಯಿತರಾದ ಸದಸ್ಯರು ಸಂಪುಟದಲ್ಲಿ ಪ್ರಭಾವಿಗಳಾಗಿದ್ದು, ಅಂತಹವರ ಸದಸ್ಯತ್ವವನ್ನೇ ರದ್ದುಪಡಿಸುವಂತೆ ಬಿಜೆಪಿ ಮುಖಂಡ, ಮಾಜಿ ಸಚಿವ ಶಿವನಗೌಡ ನಾಯಕ್ ಒತ್ತಾಯಿಸಿದ್ದಾರೆ.

- ನಾಗೇಂದ್ರ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು, ಹಗರಣದ ದುಡ್ಡಲ್ಲೇ ಗೆದ್ದವರ ಸದಸ್ಯತ್ವವೂ ರದ್ದುಪಡಿಸಲಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಣದಿಂದಲೇ ಚುನಾಯಿತರಾದ ಸದಸ್ಯರು ಸಂಪುಟದಲ್ಲಿ ಪ್ರಭಾವಿಗಳಾಗಿದ್ದು, ಅಂತಹವರ ಸದಸ್ಯತ್ವವನ್ನೇ ರದ್ದುಪಡಿಸುವಂತೆ ಬಿಜೆಪಿ ಮುಖಂಡ, ಮಾಜಿ ಸಚಿವ ಶಿವನಗೌಡ ನಾಯಕ್ ಒತ್ತಾಯಿಸಿದ್ದಾರೆ.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ರಾಜ್ಯ ಸಚಿವ ಸಂಪುಟದಲ್ಲಿರುವ ಪ್ರಭಾವಿಗಳಿದ್ದಾರೆ. ಮಾಜಿ ಸಚಿವ ನಾಗೇಂದ್ರ ಪ್ರವೃತ್ತಿಯಿಂದ ಕಳ್ಳರಲ್ಲ. ನಾಗೇಂದ್ರಗೆ ತಪ್ಪು ಮಾಡಿದ್ದೇನೆಂದು ಅನಿಸಿರಬೇಕು. ಹಾಗಾಗಿಯೇ ಕಣ್ಣೀರು ಹಾಕಿದ್ದಾರೆ. ಜನತಾ ನ್ಯಾಯಾಲಯಕ್ಕೆ ಬರುತ್ತಾರೆಂದರೆ ಅದು ಒಳ್ಳೆಯ ನಿರ್ಧಾರ. ಮಹರ್ಷಿ ವಾಲ್ಮೀಕಿ ನಿಗಮದ ಹಗರಣವನ್ನು ನಾಗೇಂದ್ರ ಒಬ್ಬರೇ ಮಾಡಿದ್ದಲ್ಲ, ನಾಗೇಂದ್ರ ಹಿಂದೆ ಕಾಣದ ಕೈಗಳು ಸಾಕಷ್ಟಿವೆ ಎಂದು ದೂರಿದರು.

ರಾಜ್ಯದ ನಾಲ್ವರು ಪ್ರಮುಖರು ನಾಗೇಂದ್ರ ಬೆನ್ನಿನ ಹಿಂದಿದ್ದಾರೆ. ಆ ನಾಲ್ಕು ಜನರು ಯಾರೆಂಬ ಸಂಗತಿ ಹೊರಬರಬೇಕು. ಹಣಕಾಸು ಇಲಾಖೆಯವರು, ಸಂಪುಟದ ಸಹೋದ್ಯೋಗಿಗಳು ಇರಬಹುದು. ಚುನಾವಣೆಗೆ ಬೇರೆ ಎಲ್ಲಿಯೋ ಲೂಟಿ ಮಾಡಬಹುದಿತ್ತು. ಆದರೆ, ದಲಿತರ ಹಣವನ್ನೇ ಏಕೆ ಲೂಟಿ ಮಾಡಬೇಕಿತ್ತು? ಹಗರಣದಲ್ಲಿ ಬಲಿಪಶು ಆಗಿದ್ದು ಮಾತ್ರ ನಾಗೇಂದ್ರ ಹಾಗೂ ಎರಡನೇಯದ್ದು ಸಮುದಾಯ ಎಂದು ಅವರು ದೂರಿದರು.

ನಾಗೇಂದ್ರ ಸಚಿವ ಸ್ಥಾನ ಜೊತೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂಬ ಹೇಳಿಕೆ ನೀಡಿದ್ದಾರೆ. ಬಹಳ ಸಂತೋಷದ ಸಂಗತಿ ಅದು. ಮೊದಲು ನಾಗೇಂದ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಕೆಲಸ ಮಾಡಬೇಕು. ಬಿಜೆಪಿ ನಾಯಕರು ಚಲಾವಣೆಯೇ ಇಲ್ಲದ ನಾಣ್ಯವೆಂಬ ಹೇಳಿಕೆ ನಾಗೇಂದ್ರ ಹೇಳಿದ್ದಾರೆ. ಅವೇ ಚಲಾವಣೆ ಇಲ್ಲದ ನಾಣ್ಯಗಳೇ ನಾಗೇಂದ್ರ ರಾಜೀನಾಮೆಗೂ ಕಾರಣವಾಗಿರಬಹುದು ಎಂದು ತಿರುಗೇಟು ನೀಡಿದರು.

ಸಚಿವ ಸ್ಥಾನಕ್ಕೆ ನಾಗೇಂದ್ರ ರಾಜೀನಾಮೆ ನೀಡಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಪ್ರಥಮ ಹಂತದ ಜಯವಾಗಿದೆ. ನಾಗೇಂದ್ರ ರಾಜೀನಾಮೆಯಿಂದಷ್ಟೇ ನಮ್ಮ ಹೋರಾಟವೇನೂ ಕೊನೆಗಾಣುವುದಿಲ್ಲ. ₹187 ಕೋಟಿ ಹಗರಣದಲ್ಲಿ ಕಾಣದ ಕೈಗಳು ಯಾರದ್ದೆಂದು ಸ್ಪಷ್ಟವಾಗಬೇಕು. ಅಷ್ಟೂ ಹಣ ವಾಪಸ್‌ ನಿಗಮದ ಖಾತೆಗೆ ಜಮಾ ಆಗುವವರೆಗೂ ನಮ್ಮ ಹೋರಾಟವಂತೂ ನಿಲ್ಲುವುದಿಲ್ಲ. ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ, ₹187 ಕೋಟಿ ಹಣ‍ ವಾಪಸ್‌ ನಿಗಮಕ್ಕೆ ಜಮಾ ಮಾಡುವಂತೆ ಹೋರಾಟ ಇರುತ್ತದೆ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಎಸ್‌ಸಿ- ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿತ್ತು. ಆದರೆ, ಕಾಂಗ್ರೆಸ್ ಸರ್ಕಾರವು ಹಿಂದೆ ಬೊಮ್ಮಾಯಿ ಸರ್ಕಾರ ಹೆಚ್ಚಿಸಿದ್ದ ಮೀಸಲಾತಿಯನ್ನು ಇಳಿಕೆ ಮಾಡಿ, ಶೋಷಿತ ಸಮುದಾಯಕ್ಕೆ ಘೋರ ದ್ರೋಹ ಬಗೆಯಿತು. ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ₹53 ಸಾವಿರ ಕೋಟಿ ಎಸ್‌ಸಿಪಿ-ಟಿಎಸ್‌ಪಿ ಹಣವನ್ನೇ ಕಾಂಗ್ರೆಸ್ ಸರ್ಕಾರವು ದುರುಪಯೋಗಪಡಿಸಿಕೊಂಡಿದೆ. ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ನೀತಿಯ ವಿರುದ್ಧ, ಗೃಹಲಕ್ಷ್ಮಿ ಯೋಜನೆಯಲ್ಲಿ ಕಾಣೆಯಾದ ₹5 ಸಾವಿರ ಕೋಟಿ ಹಗರಣದ ವಿರುದ್ಧವೂ ಹೋರಾಟ ನಡೆಯಲಿದೆ ಎಂದು ಹೇಳಿದರು.

ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ, ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ, ದಾವಣಗೆರೆ ದಕ್ಷಿಣ ಕ್ಷೇತ್ರದ ಪರಾಜಿತ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಮೆಳ್ಳೆಕಟ್ಟೆ ಎ.ಇ.ನಾಗರಾಜ, ಪ್ರಧಾನ ಕಾರ್ಯದರ್ಶಿ ಆರ್.ಲಕ್ಷ್ಮಣ, ಎಚ್.ಪಿ.ವಿಶ್ವಾಸ, ಚನ್ನಗಿರಿ ಲೋಹಿತಕುಮಾರ, ಪಣಿಯಾಪುರ ಲಿಂಗರಾಜ ಇತರರು ಇದ್ದರು.

- - -

(ಬಾಕ್ಸ್‌)

* ಸೆ.1ರಿಂದ 10ರವರೆಗೆ ಬೃಹತ್ ಪಾದಯಾತ್ರೆ

ತುಂಗಭದ್ರಾ ಜಲಾಶಯದ ಹೂಳೆತ್ತಿ, 200 ಟಿಎಂಸಿ ಹೆಚ್ಚುವರಿ ನೀರು ಸಂಗ್ರಹಿಸುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿತ್ತು. ಈಗ ರಾಜ್ಯ ಸರ್ಕಾರ ಮೈಮರೆತಿದೆ. ನವಲಿ ಸಮನಾಂತರ ಜಲಾಶಯಕ್ಕಾಗಿ ಹೋರಾಟ ನಡೆಸಲಿದ್ದೇವೆ. ವಿಧವಾ ವೇತನ, ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ ಯೋಜನೆಗಳ ಹಣವನ್ನು ಕಳೆದ 11 ತಿಂಗಳಿನಿಂದ ಬಡವರಿಗೆ ನೀಡದೇ, ಬಡವರಿಗೆ ಮನೆ ನೀಡದೇ ಸಾಮಾಜಿಕ ಸುರಕ್ಷತೆ ಸ್ಥಗಿತಗೊಳಿಸಿದ್ದರ ವಿರುದ್ಧ ಹೋರಾಟ ನಡೆಯಲಿದೆ. ವಿದ್ಯಾವಂತ ಪದವೀಧರರಿಗೆ ಸರ್ಕಾರಿ ಉದ್ಯೋಗ ನೀಡುವಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿ, ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ, ಡ್ರಗ್ಸ್ ಮಾಫಿಯಾ, ತುಷ್ಟೀಕರಣ ಹಾಗೂ ಕರ್ನಾಟಕದಲ್ಲಿ ಕಾನೂನು, ಸುವ್ಯವಸ್ಥೆ ಸಂಪೂರ್ಣ ಕುಸಿದಿರುವುದರ ವಿರುದ್ಧ ಸೆ.1ರಿಂದ 10ನೇ ತಾರೀಖಿನವರೆಗೆ ಬೃಹತ್ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದು ಶಿವನಗೌಡ ಪಾಟೀಲ್ ತಿಳಿಸಿದರು.

- - -

-29ಕೆಡಿವಿಜಿ2, 3: ದಾವಣಗೆರೆಯಲ್ಲಿ ಶನಿವಾರ ಬಿಜೆಪಿ ಮಾಜಿ ಸಚಿವ ಶಿವನಗೌಡ ನಾಯಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ ಆರ್ಥಿಕ ಅಭಿವೃದ್ಧಿಗೆ ಧಗ್ರಾಯೋ ಸಹಕಾರಿ
ಪಡಿತರ ಅಕ್ಕಿ-ರಾಗಿ ಅಕ್ರಮ ಸಾಗಾಟ ಅಪಘಾತದಲ್ಲಿ ಬಯಲು!