ಮೊಬೈಲ್ ಜಾಮರ್‌ ಸಾಮರ್ಥ್ಯ ಮಿತಿ ಜೈಲಿಗಷ್ಟೇ ಸೀಮಿತಗೊಳಿಸಲು ಹೈಕೋರ್ಟ್ ನಿರ್ದೇಶನ

KannadaprabhaNewsNetwork |  
Published : Dec 06, 2025, 03:15 AM IST
32 | Kannada Prabha

ಸಾರಾಂಶ

ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಮೊಬೈಲ್ ಜಾಮರ್‌ಗಳ ಸಾಮರ್ಥ್ಯ ಮಿತಿಯನ್ನು ಕಾರಾಗೃಹಕ್ಕಷ್ಟೆ ಸೀಮಿತಗೊಳಿಸುವಂತೆ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಮೆಸರ್ಸ್ ಟೆಲಿಕಮ್ಯುನಿಕೇಷನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್‌ಗೆ ಹೈಕೋರ್ಟ್ ನಿರ್ದೇಶಿಸಿದೆ.

ಮಂಗಳೂರು: ನಗರದ ಕೊಡಿಯಾಲಬೈಲ್‌ನಲ್ಲಿರುವ ಮಂಗಳೂರು ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಮೊಬೈಲ್ ಹಾಗೂ ಇಂಟರ್ನೆಟ್ ಬಳಕೆಗೆ ಸಮಸ್ಯೆ ಆಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಮೊಬೈಲ್ ಜಾಮರ್‌ಗಳ ಸಾಮರ್ಥ್ಯ ಮಿತಿಯನ್ನು ಕಾರಾಗೃಹಕ್ಕಷ್ಟೆ ಸೀಮಿತಗೊಳಿಸುವಂತೆ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾದ ಮೆಸರ್ಸ್ ಟೆಲಿಕಮ್ಯುನಿಕೇಷನ್ಸ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್‌ಗೆ ಹೈಕೋರ್ಟ್ ನಿರ್ದೇಶಿಸಿದೆ.

ನ್ಯಾಯಾಲಯದಲ್ಲಿ ಸಂವಹನಕ್ಕೆ ಅಡ್ಡಿಪಡಿಸುತ್ತಿರುವ ಜಾಮರ್‌ಗಳನ್ನು ತಕ್ಷಣವೇ ತೆರವುಗೊಳಿಸಲು ಗೃಹ ಇಲಾಖೆ ಹಾಗೂ ಕಾರಾಗೃಹದ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಕೋರಿ ಮಂಗಳೂರು ವಕೀಲರ ಸಂಘ ಮತ್ತದರ ಅಧ್ಯಕ್ಷ ಎಚ್.ವಿ.ರಾಘವೇಂದ್ರ ಹಾಗೂ ಕಾರ್ಯದರ್ಶಿ ಶ್ರೀಧರ ಹೊಸಮನೆ ಅವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಅರ್ಜಿಯಲ್ಲಿ ಹೇಳಲಾಗಿರುವ ಸಮಸ್ಯೆ ಕುರಿತು ತಾಂತ್ರಿಕ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರದ ಸಂವಹನ ಸಚಿವಾಲಯಕ್ಕೆ ಸೂಚಿಸಲಾಗಿತ್ತು. ಅದರಂತೆ ಸಚಿವಾಲಯದ ವೈರ್‌ಲೆಸ್ ಮಾನಿಟರಿಂಗ್ ಸಂಸ್ಥೆ ಸಲ್ಲಿಸಿದ ವರದಿ ಪರಿಶೀಲಿಸಿದಾಗ, ಜೈಲು ಆವರಣದೊಳಗೆ ಜಾಮರ್ ಸಿಗ್ನಲ್ ಸಾಮರ್ಥ್ಯ ಅಂದಾಜು ೭೦ ಡಿಬಿಎಂ (ಡೆಸಿಬೆಲ್ ಮಿಲಿವಾಟ್ಸ್) ಎಂದು ಸೂಚಿಸುತ್ತದೆ. ಆದರೂ, ಈ ಸಾಮರ್ಥ್ಯ ಮಿತಿಯು ಜೈಲು ಆವರಣದ ಗಡಿಯನ್ನು ದಾಟಿದೆ ಮತ್ತು ೯೦೦ ಮೀಟರ್‌ನಲ್ಲಿ ಜಾಮರ್ ಸಾಮರ್ಥ್ಯ-೮೦ ಡಿಬಿಎಂ ಮತ್ತು ೨.೫ ಕಿಮೀ ವರೆಗೆ -೧೦೦ ಡಿಬಿಎಂ ಆಗಿದೆ ಎಂಬುದನ್ನು ಪರಿಗಣಿಸಿ ನ್ಯಾಯಪೀಠ ಈ ನಿರ್ದೇಶನ ನೀಡಿತು.ಜಾಮರ್ ಸಿಗ್ನಲ್ ನಿಗದಿತ ವ್ಯಾಪ್ತಿ ಪ್ರದೇಶವನ್ನು ಮೀರಿ ವಿಸ್ತರಿಸಿದೆ ಎಂದು ವರದಿಯು ಸ್ಪಷ್ಟವಾಗಿ ಸೂಚಿಸುತ್ತದೆ ಮತ್ತು ಔಟ್‌ಪುಟ್ ಪವರ್ ಮತ್ತು ಜಾಮರ್ ಆಂಟೆನಾಗಳ ಎತ್ತರ/ಓರಿಯಂಟೇಷನ್ ಸೇರಿದಂತೆ ಜಾಮರ್‌ನ ತಾಂತ್ರಿಕ ನಿಯತಾಂಕಗಳನ್ನು ಮರುಮೌಲ್ಯಮಾಪನ ಮಾಡಿ ಅದನ್ನು ಸೂಕ್ತಗೊಳಿಸಬೇಕು ಎಂದು ವರದಿ ಶಿಫಾರಸು ಮಾಡಿದೆ. ಈ ವಿಚಾರವನ್ನು ಉಲ್ಲೇಖಿಸಿದ ನ್ಯಾಯಪೀಠ, ಜಿಲ್ಲಾ ನ್ಯಾಯಾಲಯ ಸಂಕೀರ್ಣ ಮತ್ತು ಆವರಣದಲ್ಲಿ ಮೊಬೈಲ್, ಇಂಟರ್ನೆಟ್ ಬಳಕೆಗೆ ನೆಟ್ವರ್ಕ್ ಸಮಸ್ಯೆ ಆಗದಂತೆ ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಲಾಗಿರುವ ಜಾಮರ್‌ಗಳ ಸಾಮರ್ಥ್ಯವನ್ನು ಮಿತಿಗೊಳಿಸಬೇಕು ಎಂದು ನಿರ್ದೇಶಿಸಿ, ಅರ್ಜಿ ವಿಚಾರಣೆ ಮುಂದೂಡಿತು. ದೂರುದಾರ ಮಂಗಳೂರು ವಕೀಲರ ಸಂಘದ ಪರವಾಗಿ ಖ್ಯಾತ ವಕೀಲ ಪಿ.ಪಿ.ಹೆಗ್ಡೆ ವಾದಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಟ್ಲ: 14ರಂದು ಸ್ವರ ಸಿಂಚನ ಸಂಗೀತ ಶಾಲೆ ದಶ ಸಂಭ್ರಮ
ಸಿ ಅಂಡ್‌ ಡಿ, ಸೆಕ್ಷನ್-‌ 4 ಸಮಸ್ಯೆಗೆ ಸರ್ಕಾರದ ಸ್ಪಂದನೆ: ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆದ ರೈತರು