ಉ.ಕ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ

KannadaprabhaNewsNetwork |  
Published : Dec 06, 2025, 03:15 AM IST
ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಈ ಬಾರಿಯ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ಪ್ರಾದೇಶಿಕ ಅಸಮತೋಲನದ ಬಗ್ಗೆ ಸಮರ್ಪಕ ಚರ್ಚೆ ಮಾಡಬೇಕು. ಉತ್ತರ ಕರ್ನಾಟಕ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಈ ಬಾರಿಯ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಮತ್ತು ಪ್ರಾದೇಶಿಕ ಅಸಮತೋಲನದ ಬಗ್ಗೆ ಸಮರ್ಪಕ ಚರ್ಚೆ ಮಾಡಬೇಕು. ಉತ್ತರ ಕರ್ನಾಟಕ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಮೊದಲಿನಿಂದಲೂ ಅಭಿವೃದ್ಧಿಯಿಂದ ವಂಚಿತಗೊಂಡಿದೆ. ಸುವರ್ಣಸೌಧ ನಿರ್ಮಾಣವಾದರೆ ಈ ಭಾಗದ ಅಭಿವೃದ್ಧಿಯಾಗುತ್ತದೆ ಎಂಬ ಈ ಭಾಗದ ಆಶಯ ಈಡೇರಿಲ್ಲ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ದೃಷ್ಟಿಯಿಂದ ಹಿಂದುಳಿದಿದೆ. ಮೈಸೂರು ಭಾಗ ನಮ್ಮ ಭಾಗಕ್ಕಿಂತ ಮುಂದುವರಿದ ಭಾಗವಾಗಿದೆ. ಎಲ್ಲ ಸರ್ಕಾರಗಳು ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸುತ್ತ ಬಂದಿವೆ. ನಮ್ಮ ಭಾಗಕ್ಕೆ ಅಭಿವೃದ್ಧಿಯಲ್ಲಿ ತಾರತಮ್ಯ ಆಗುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ದಿ.ಉಮೇಶ ಕತ್ತಿ ಅವರು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಟ್ಟಿದ್ದರು. ಈಗ ಶಾಸಕ ರಾಜು ಕಾಗೆ ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಿದ್ದಾರೆ. ನಾವು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಿಲ್ಲ. ಆದರೆ, ತಾರತಮ್ಯ ನೀತಿ ಮುಂದುವರಿದರೆ ಈ ಭಾಗದ ಜನತೆಯೇ ಬೀದಿಗಿಳಿದ ಹೋರಾಟ ಮಾಡುತ್ತಾರೆ ಎಂದು ಎಚ್ಚರಿಸಿದರು.

ಉತ್ತರ ಕರ್ನಾಟಕದ ನೀರಾವರಿ ಯೋಜನೆಯ ವಿಚಾರದಲ್ಲಿ ಮಲತಾಯಿ ಧೋರಣೆ ಇದೆ. ಕಾವೇರಿಗೆ ಇರುವ ನ್ಯಾಯ ಕೃಷ್ಣೆಗೆ ಯಾಕಿಲ್ಲ..?. ತುಂಗೆ ಭದ್ರಾಗೆ ಇರುವ ಕಾಳಜಿ ಮಲಪ್ರಭಾ, ಘಟಪ್ರಭಾಗೆ ಯಾಕಿಲ್ಲ ಎಂದು ಪ್ರಶ್ನಿಸಿದರು.

ರೈತರ ಕಾಮಧೇನು ಆಲಮಟ್ಟಿ ಯೋಜನೆ ಕುಂಟುತ್ತಾ ಸಾಗುತ್ತಿದೆ. ಸರ್ಕಾರ ನೆಪ ಮಾತ್ರಕ್ಕೆ ಅನುದಾನ ಬಿಡುಗಡೆ ಮಾಡಿದೆ. ಬೆಳಗಾವಿ ಜಿಲ್ಲೆಯಲ್ಲಿ 14ಏತ ನೀರಾವರಿ ಆಡಳಿತಾತ್ಮಕ ಮಂಜೂರಾತಿ ಇದ್ದರೂ ಕುಂಟುತ್ತಾ ಸಾಗಿದೆ. ಈಗಲಾದರೂ ಉತ್ತರ ಕರ್ನಾಟಕ ಯೋಜನೆ ಕಾಯಕಲ್ಪ ನೀಡಬೇಕು. ಸರ್ಕಾರಿ ಇಲಾಖೆಯಲ್ಲಿ ಶೇ.50 ಸಿಬ್ಬಂದಿ ಕೊರತೆ ನೀಗಿಸಬೇಕು. ಉತ್ತರ ಕರ್ನಾಟಕದಲ್ಲಿ ಶೇ.50ರಷ್ಟು ಸಿಬ್ಬಂದಿ ಕೊರತೆ ಇದೆ. ತಾರತಮ್ಯದ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಹೈದರಾಬಾದ್ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವ ಮೂಲಕ ಸರ್ಕಾರ ವಿಶೇಷ ಅನುದಾನ ನೀಡಿದೆ. ಅದರಂತೆಯೇ ಉತ್ತರ ಕರ್ನಾಟಕ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು ಎಂದು ಒತ್ತಾಯಿಸಿದರು.

ಉತ್ತರ ಕರ್ನಾಟಕದಲ್ಲಿ ಕಬ್ಬನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ರೈತರ ಹೋರಾಟದ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿಟನ್‌ ಕಬ್ಬಿಗೆ ಕೇವಲ ₹ 50 ಬೆಂಬಲ ಬೆಲೆ ಘೋಷಿಸಿದೆ. ಅದನ್ನು ₹150ಕ್ಕೆ ಹೆಚ್ಚಿಸಬೇಕು. ಸರ್ಕಾರಗಳು ಕಳೆದ 10 ವಿಧಾನಮಂಡಳ ಅಧಿವೇಶನದಲ್ಲಿ ಈ ಭಾಗಕ್ಕೆ 10 ಯೋಜನೆಗಳನ್ನು ಘೋಷಿಸಿ, ಅನುಷ್ಠಾನಗೊಳಿಸುವುದಾಗಿ ಹೇಳಿದ್ದವು. ಆದರೆ, ಯಾವುದೇ ಯೋಜನೆಗಳು ಕಾರ್ಯರೂಪಕ್ಕೆ ಬಂದಿಲ್ಲ ಎಂದರು.

ಬೆಳಗಾವಿ ಜಿಲ್ಲೆ ವಿಭಜನೆಗೆ ಒತ್ತಾಯ

ಆಡಳಿತಾತ್ಮಕ, ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ, ಮೂರು ಜಿಲ್ಲೆಗಳನ್ನಾಗಿ ಘೋಷಿಸಬೇಕು. ಜಿಲ್ಲೆ ವಿಭಜನೆಯಾದರೆ ಮಾತ್ರ ಜಿಲ್ಲೆಗಳು ಅಭಿವೃದ್ಧಿ ಸಾಧ್ಯವಾಗುತ್ತದೆ. ಹಾಗಾಗಿ, ಚಳಿಗಾಲದ ಅಧಿವೇಶನದಲ್ಲಿ ವೈಜ್ಞಾನಿಕವಾಗಿ ಜಿಲ್ಲೆಗಳ ಘೋಷಣೆ ಮಾಡಬೇಕು. ಪ್ರವಾಹ ಪೀಡಿತ ನದಿತೀರದ ಗ್ರಾಮಗಳನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಬೇಕು. ಬೆಳಗಾವಿ ನಗರಕ್ಕೆ ರಿಂಗ್ ರೋಡ್ ಮಾಡಬೇಕು. ಧಾರವಾಡ- ಬೆಳಗಾವಿ ಮತ್ತು ಬೆಳಗಾವಿ ಮತ್ತು ನಿಪ್ಪಾಣಿ ನಡುವೆ ಹೊಸ ಕೈಗಾರಿಕೆ ಎಸ್‌ಇಜೆಡ್‌ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಂ.ಬಿ.ಜಿರಲಿ, ಸಂಜಯ ಪಾಟೀಲ, ಡಾ.ವಿಶ್ವನಾಥ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಟ್ಲ: 14ರಂದು ಸ್ವರ ಸಿಂಚನ ಸಂಗೀತ ಶಾಲೆ ದಶ ಸಂಭ್ರಮ
ಸಿ ಅಂಡ್‌ ಡಿ, ಸೆಕ್ಷನ್-‌ 4 ಸಮಸ್ಯೆಗೆ ಸರ್ಕಾರದ ಸ್ಪಂದನೆ: ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆದ ರೈತರು