ಕನ್ನಡಪ್ರಭ ವಾರ್ತೆ ಬೆಳಗಾವಿ
ಮುಂದಿನ ಐದು ವರ್ಷದಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್‌ನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಅನೇಕ ಹೊಸ ಹೊಸ ಯೋಜನೆಗಳನ್ನು ರೂಪಿಸಿದ್ದು, ರೈತರ ಜೀವನಾಡಿಯಂತೆ ಬ್ಯಾಂಕಿನ ಸೇವೆಯು ಇಡೀ ವರ್ಷವೂ ರೈತರಿಗೆ ಸಿಗಲಿದೆ ಎಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮತ್ತು ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹೇಳಿದರು.ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಶಂಕರಲಿಂಗ ಮಂಗಲ ಕಾರ್ಯಾಲಯದಲ್ಲಿ ಗುರುವಾರ ರಾತ್ರಿ ಜರುಗಿದ ಹುಕ್ಕೇರಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಸೌಹಾರ್ದಯುತ ಸಭೆ ಮತ್ತು ಸತ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸದ್ಯದಲ್ಲಿಯೇ ಹೊಸ ಯೋಜನೆಗಳು ಜಾರಿಗೆ ಪ್ರಯತ್ನಿಸಲಾಗುವುದು ಎಂದರು.
ಜಿಲ್ಲಾ ಸಚಿವ ಸತೀಶ್ ಜಾರಕಿಹೊಳಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ನನ್ನ ಮುಂದಾಳತ್ವದಲ್ಲಿ ಬ್ಯಾಂಕ್ ಆರ್ಥಿಕವಾಗಿ ಬಲಿಷ್ಟಗೊಳ್ಳಲು ಹಾಗೂ ರೈತರ ಮನೆ ಬಾಗಿಲಿಗೆ ಜಾರಿಯಾಗುವ ಯೋಜನೆಗಳು ಸಿಗಲಿವೆ. ಶೀಘ್ರದಲ್ಲಿ ಇವುಗಳ ಅನುಷ್ಟಾನಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು.₹3360 ನಿಗದಿ:
ಹೀರಾ ಶುಗರ್, ಹಾಲಸಿದ್ಧನಾಥ ಮತ್ತು ಸಂಗಮ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಿದ ರೈತರಿಗೆ ವಾರದೊಳಗೆ ಬಿಲ್ ಪಾವತಿಸಲು ಕ್ರಮ ಕೈಕೊಳ್ಳಲಾಗಿದೆ. ಹಾಲಸಿದ್ಧನಾಥ್ ಸಕ್ಕರೆ ಕಾರ್ಖಾನೆಯು ರೈತರ ಪ್ರತಿ ಟನ್ ಕಬ್ಬಿಗೆ ರೂಪಾಯಿ ₹3360 ಗಳನ್ನು ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು. ಹೀರಾ ಶುಗರ್ಸ್ ಪ್ರಸ್ತುತ 5500 ಸಾಮರ್ಥ್ಯದ ಕಬ್ಬು ನುರಿಸುವದು ಎರಡ್ಮೂರು ದಿನದಲ್ಲಿ ಸುಮಾರು 10 ಸಾವಿರ ಕಬ್ಬು ನುರಿಸುವ ಸಾಮರ್ಥ್ಯ ಹೊಂದಲಿದೆ. 1.5 ಲಕ್ಷ ಲೀಟರ್ ಎಥೆನಾಲ್ ಹಾಗೂ ಎರಡು ಪಟ್ಟು ಹೆಚ್ಚಿಗೆ ಕೋ, ಜನರೇಶನ್ ಉತ್ಪಾದನೆ ಆಗಲಿದೆ ಎಂದು ಅವರು ಹೇಳಿದರು.ವೇದಿಕೆಯಲ್ಲಿ ಹಿರಿಯ ಮುಖಂಡ ಎ.ಎಸ್. ಶಿರಕೋಳಿ, ಹೀರಾ ಶುಗರ್ಸ ಅಧ್ಯಕ್ಷ ಬಸವರಾಜ ಕಲ್ಲಟ್ಟಿ, ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಅಶೋಕ ಪಟ್ಟಣಶೆಟ್ಟಿ, ಶ್ರೀಕಾಂತ್ ( ಭಂಡು) ಹಥನೂರೆ, ಶಶಿರಾಜ ಪಾಟೀಲ, ಪ್ರಭುದೇವ ಪಾಟೀಲ, ಪರಗೌಡ ಪಾಟೀಲ, ಸುರೇಶ ಹುಣಚ್ಯಾಳಿ, ಸಂತೋಷ ಮುಂಡಸಿ, ಪವನ ಪಾಟೀಲ, ರಿಷಬ ಪಾಟೀಲ, ಮಹಾಂತೇಶ ಮಗದುಮ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಮತ್ತು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ್ ಜೊಲ್ಲೆ ಅವರನ್ನು ಹುಕ್ಕೇರಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸದಸ್ಯರು ಸತ್ಕರಿಸಿದರು.------------ಕೋಟ್...
ವಿದ್ಯುತ್ ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಬೀಗಬೇಕಾಗಿಲ್ಲ. ನಮ್ಮದು ಸೋಲಾಗಿರಬಹುದು. ಆದರೆ,ನಮ್ಮ ಅಭ್ಯರ್ಥಿಗಳು ಪಡೆದಿರುವ ಮತಗಳ ಪ್ರಮಾಣ ಹೆಚ್ಚಳವಾಗಿದೆ. ಹುಕ್ಕೇರಿ ತಾಲೂಕಿನ ರೈತರ ಪ್ರಗತಿಗೆ ನಾವು ಸದಾ ಬದ್ದರಿದ್ದೇವೆ. ನಾನು, ಸಚಿವ ಸತೀಶ್ ಜಾರಕಿಹೊಳಿ ಮತ್ತು ಅಣ್ಣಾಸಾಹೇಬ್ ಜೊಲ್ಲೆಯವರು ಸೇರಿ ನಮ್ಮ ಬೆನ್ನು ಹತ್ತಿದವರನ್ನು ಯಾವ ಕಾರಣಕ್ಕೂ ಕೈ ಬಿಡುವುದಿಲ್ಲ. ನಿಮ್ಮ ಜತೆಯಲ್ಲಿ ನಾವು ಸದಾ ಇರುತ್ತೇವೆ.-ಬಾಲಚಂದ್ರ ಜಾರಕಿಹೊಳಿ, ಶಾಸಕರು, ಬೆಮುಲ್ ಅಧ್ಯಕ್ಷರು