ಮಂಡ್ಯ : ಉತ್ತರ ಪ್ರದೇಶದ ಗಂಗಾರತಿ ಮಾದರಿಯಲ್ಲಿ ಕೃಷ್ಣರಾಜಸಾಗರ ಜಲಾಶಯದ ಬಳಿ ಕಾವೇರಿ ಆರತಿ ನಡೆಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯ ಉಚ್ಛ ನ್ಯಾಯಾಲಯ ತಾತ್ಕಾಲಿಕ ಬ್ರೇಕ್ ಹಾಕಿದೆ.
ಅಣೆಕಟ್ಟು ಬಳಿ ಕಾವೇರಿ ಆರತಿ ಮಾಡುವುದು ಅಣೆಕಟ್ಟು ಸುರಕ್ಷತಾ ಕಾಯಿದೆಗೆ ವಿರುದ್ಧವೆಂದು ಆರೋಪಿಸಿ ರೈತ ನಾಯಕಿ ಸುನಂದಾ ಜಯರಾಂ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಾಧೀಶರಾದ ಕಾಮೇಶ್ವರರಾವ್, ಸಿ.ಎಂ.ಜೋಶಿ ಅವರು ಕಾವೇರಿ ಆರತಿ ಸಂಬಂಧ ನಡೆಯುತ್ತಿರುವ ಕಾಮಗಾರಿಗೆ ತಡೆಯಾಜ್ಞೆ ನೀಡಿದ್ದು, ಮುಂದಿನ ಆದೇಶದವರೆಗೆ ಎಲ್ಲ ರೀತಿಯ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ, ಭಾರತೀಯ ವಿಜ್ಞಾನ ಸಂಸ್ಥೆಯಿಂದ ವರದಿ ಪಡೆಯಬೇಕೆಂಬ ಸಲಹೆಯನ್ನು ನ್ಯಾಯಾಲಯ ಪುರಸ್ಕರಿಸಿರುವುದಾಗಿ ತಿಳಿದುಬಂದಿದೆ.
ಅಣೆಕಟ್ಟು ಬಳಿ ಕಾವೇರಿ ಆರತಿ ಮಾಡುವುದರ ವಿರುದ್ಧ ಕೆಆರ್‌ಎಸ್ ಸುತ್ತಮುತ್ತಲ ಗ್ರಾಮ ಪಂಚಾಯ್ತಿಗಳು ನಿರ್ಣಯ ಕೈಗೊಂಡಿವೆ. ಪ್ರಗತಿಪರ, ರೈತ, ದಲಿತ, ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇದರ ನಡುವೆಯೂ ರಾಜ್ಯ ಸರ್ಕಾರ ಕಾವೇರಿ ಆರತಿ ಮಾಡಲೇಬೇಕೆಂಬ ಹಠಕ್ಕೆ ಬಿದ್ದು ತರಾತುರಿಯಲ್ಲಿ ಕಾಮಗಾರಿ ನಡೆಸುತ್ತಿದೆ. ಕಾವೇರಿ ಆರತಿಗೆ ಮಾಡಲಾಗುವ ೯೮ ಕೋಟಿ ರು. ದುಂದುವೆಚ್ಚವನ್ನು ಕೆರೆಗಳ ಅಭಿವೃದ್ಧಿ, ನಾಲೆಗಳ ಅಭಿವೃದ್ಧಿ, ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಬಳಸುವಂತೆ ಮನವಿ ಮಾಡುತ್ತಿದ್ದರೂ, ರಾಜ್ಯ ಸರ್ಕಾರ ಮಾತ್ರ ಕಾವೇರಿ ಆರತಿ ಮಾಡುವ ಹಠಕ್ಕೆ ಬಿದ್ದು ಮುನ್ನಡೆಯುತ್ತಿರುವ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದರು.
ಅಣೆಕಟ್ಟು ಸುರಕ್ಷತಾ ಕಾಯಿದೆ ಏನು ಹೇಳುತ್ತದೆ, ಟೆಂಡರ್ ಕರೆಯದೆ ಕಾವೇರಿ ಆರತಿ ಕಾರ್ಯಕ್ರಮಕ್ಕೆ ಕಾಮಗಾರಿ ನಡೆಸುತ್ತಿರುವುದಾದರೂ ಏಕೆ ಎಂಬ ಪ್ರಶ್ನೆಗಳೊಂದಿಗೆ ದಾಖಲೆಗಳನ್ನು ಸಲ್ಲಿಸುವಂತೆ ಕಾಲಾವಕಾಶ ನೀಡಿ ಜು.೬ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಕಾವೇರಿ ಆರತಿ ವಿರುದ್ಧ ಸುನಂದಾ ಜಯರಾಂ ಹಾಗೂ ಅಮ್ಯೂಸ್‌ಮೆಂಟ್ ಪಾರ್ಕ್ ವಿರುದ್ಧ ಕೆ.ಬೋರಯ್ಯ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಇವರ ಪರವಾಗಿ ವಕೀಲ ಎಂ.ಶಿವಕುಮಾರ್ ವಾದ ಮಂಡಿಸಿದರೆ, ಸರ್ಕಾರದ ಪರವಾಗಿ ಶಶಿಕಿರಣ್ ಶೆಟ್ಟಿ, ಉದಯ್ ಹೊಳ್ಳ ಅವರು ವಕಾಲತ್ತು ವಹಿಸಿದ್ದಾರೆ.
ಕಾವೇರಿ ಆರತಿಗೆ ಹೈಕೋರ್ಟ್ ತಡೆ: ಮಂಡ್ಯದಲ್ಲಿ ಸಂತಸ
ರಾಜ್ಯ ಸರ್ಕಾರದ ಉದ್ದೇಶಿತ ಕಾವೇರಿ ಆರತಿಗೆ ರಾಜ್ಯ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿರುವುದನ್ನು ಸ್ವಾಗತಿಸಿ ರೈತ ಹಾಗೂ ಕನ್ನಡಪರ ಸಂಘಟನೆಗಳು ಸಿಹಿ ಹಂಚಿ ನಗರದಲ್ಲಿ ಸಂತಸ ವ್ಯಕ್ತಪಡಿಸಿದರು.
ಹೈಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿ ಹಾಗೂ ಸರ್ಕಾರದ ನಡೆ ವಿರುದ್ಧ ಘೋಷಣೆ ಕೂಗಿ ಪರಸ್ಪರ ಸಿಹಿ ಹಂಚುವ ಮೂಲಕ ಸಂತಸ ವ್ಯಕ್ತಪಡಿಸಿದರು.
ರೈತ ಸಂಘದ ಸೊ.ಶಿ.ಪ್ರಕಾಶ್ ಮಾತನಾಡಿ, ರಾಜ್ಯ ಸರ್ಕಾರ ದುಷ್ಟತನದಿಂದ ಕಾವೇರಿ ಆರತಿ ಹಾಗೂ ಅಮ್ಯೂಸ್‌ಮೆಂಟ್ ಪಾರ್ಕ್ ಯೋಜನೆಗಳನ್ನು ಜಾರಿಗೊಳಿಸಲು ಹೊರಟಿತ್ತು. ಹೈಕೋರ್ಟ್ ತಡೆ ನೀಡುವ ಮೂಲಕ ರಾಜ್ಯ ಸರ್ಕಾರಕ್ಕೆ ಪರಿಸರದ ಪಾಠ ಹೇಳಿದೆ ಎಂದರು.
ಕರುನಾಡ ಸೇವಕರು ಸಂಘಟನೆಯ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಕಾವೇರಿ ಆರತಿಗೆ ತಾತ್ಕಾಲಿಕ ತಡೆಯಾಜ್ಞೆ ನೀಡುವ ಮೂಲಕ ಹೈಕೋರ್ಟ್ ರೈತರ ದನಿಯಾಗಿದೆ. ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ರೈತರ ವಿರೋಧದ ನಡುವೆ ಯೋಜನೆ ಜಾರಿ ಮಾಡಲು ವಾಮಮಾರ್ಗ ಅನುಸರಿಸಿದ್ದಾರೆ. ಜಿಲ್ಲೆಯ ರೈತ ಸಂಘಟನೆಗಳು ಉಪಮುಖ್ಯಮಂತ್ರಿಗಳ ಸಭೆ ಬಹಿಷ್ಕರಿಸಿದ್ದರೂ ಕಾಂಗ್ರೆಸ್ ಕಾರ್ಯಕರ್ತರಿಗೆ ಹಸಿರು ಶಾಲು ಹೊದಿಸಿ ರೈತ ಮುಖಂಡರೊಂದಿಗೆ ಸಭೆ ನಡೆಸಿದಂತೆ ನಟನೆ ಮಾಡಿದ್ದರು.
ಹೈಕೋರ್ಟ್ ತೀರ್ಪು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಪಾಠವಾಗಬೇಕಿದೆ. ರಾಜ್ಯ ಸರ್ಕಾರ ಕೂಡಲೆ ಬೇಷರತ್ತಾಗಿ ಯೋಜನೆ ಹಿಂಪಡೆಯಬೇಕು. ರೈತರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಸಂಭ್ರಮಾಚರಣೆಯಲ್ಲಿ ಶಿವಳ್ಳಿ ಚಂದ್ರು, ಕರ್ನಾಟಕ ರಕ್ಷಣಾ ವೇದಿಕೆಯ ಎಚ್.ಡಿ. ಜಯರಾಂ, ರೈತ ಸಂಘದ ಸಂತೋಷ್ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು