ಸೂರ್ಯನಗರ 4ನೇ ಹಂತದ ಭೂಸ್ವಾಧೀನವೇ ರದ್ದು: ಹೈಕೋರ್ಟ್

KannadaprabhaNewsNetwork |  
Published : Sep 01, 2026, 04:30 AM IST
home minister | Kannada Prabha

ಸಾರಾಂಶ

ಪರಿಸರ ಸೂಕ್ಷ್ಮ ವಲಯದಲ್ಲಿ (ಇಎಸ್‌ಜೆಡ್) ಕರ್ನಾಟಕ ಗೃಹ ಮಂಡಳಿಯ ಸೂರ್ಯ ನಗರ ಲೇಔಟ್‌ ಅಭಿವೃದ್ಧಿಪಡಿಸಲಾಗಿದೆ ಎಂದು ಲೇಔಟ್‌ಗೆಂದು ಮಾಡಲಾಗಿದ್ದ ಭೂಸ್ವಾಧೀನವನ್ನು ರಾಜ್ಯ ಹೈಕೋರ್ಟ್ ರದ್ದುಪಡಿಸಿದೆ. ಈ ಆದೇಶದಿಂದ ನಿವೇಶನ ಹಂಚಿಕೆಯಾಗಿರುವ ಸಾವಿರಾರು ಫಲಾನುಭವಿಗಳಿಗೆ ಆತಂಕ ಶುರುವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪರಿಸರ ಸೂಕ್ಷ್ಮ ವಲಯದಲ್ಲಿ (ಇಎಸ್‌ಜೆಡ್) ಕರ್ನಾಟಕ ಗೃಹ ಮಂಡಳಿಯ ಸೂರ್ಯ ನಗರ ಲೇಔಟ್‌ ಅಭಿವೃದ್ಧಿಪಡಿಸಲಾಗಿದೆ ಎಂದು ಲೇಔಟ್‌ಗೆಂದು ಮಾಡಲಾಗಿದ್ದ ಭೂಸ್ವಾಧೀನವನ್ನು ರಾಜ್ಯ ಹೈಕೋರ್ಟ್ ರದ್ದುಪಡಿಸಿದೆ. ಈ ಆದೇಶದಿಂದ ನಿವೇಶನ ಹಂಚಿಕೆಯಾಗಿರುವ ಸಾವಿರಾರು ಫಲಾನುಭವಿಗಳಿಗೆ ಆತಂಕ ಶುರುವಾಗಿದೆ.

ಬನ್ನೇರುಘಟ್ಟ ಅರಣ್ಯ ಪ್ರದೇಶ ವ್ಯಾಪ್ತಿಯ ಇಎಸ್‌ಜೆಡ್‌ನಲ್ಲಿರುವ ರೈತರ ಜಮೀನುಗಳನ್ನು ಸ್ವಾಧೀನಪಡಿಸಿಕೊಂಡು ಸೂರ್ಯ ನಗರ ಲೇಔಟ್ ನಿರ್ಮಿಸಲಾಗಿದೆ. ಜಮೀನು ಭೂಸ್ವಾಧೀನ ಕೈ ಬಿಡಬೇಕು ಎಂದು ಕೋರಿ ಗೋವಿಂದ ರೆಡ್ಡಿ ಸೇರಿದಂತೆ ಇನ್ನಿತರ ರೈತರು ಸಲ್ಲಿಸಿದ್ದ ರಿಟ್ ಅಪೀಲು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಆ.29ರಂದು ಆದೇಶ ಪ್ರಕಟಿಸಿದೆ. ಒಟ್ಟು ಸುಮಾರು 68 ಎಕರೆ ಜಮೀನುಗಳ ಮಾಲೀಕರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ನೀಡಿದೆ.

ನಿವೇಶನ ಫಲಾನುಭವಿಗಳಿಗೆ ಆತಂಕ:

ಮೂರು ತಿಂಗಳ ಹಿಂದಷ್ಟೇ ಸೂರ್ಯ ನಗರ 4ನೇ ಹಂತದಲ್ಲಿ ಅಭಿವೃದ್ಧಿಪಡಿಸಿರುವ ಸುಮಾರು 1,000ಕ್ಕೂ ಹೆಚ್ಚು ನಿವೇಶನಗಳನ್ನು ಲಾಟರಿ ಮೂಲಕ ಕೆಎಚ್‌ಬಿ ಹಂಚಿಕೆ ಮಾಡಿದೆ. ಅನೇಕರು ಈಗಾಗಲೇ ಬ್ಯಾಂಕ್ ಸಾಲ ಮಾಡಿ ಹಣ ಪಾವತಿಸಿದ್ದು, ಇಎಂಐ ಕೂಡ ಆರಂಭವಾಗಿದೆ. ಈ ನಡುವೆ ಬಂದಿರುವ ಹೈಕೋರ್ಟ್ ಆದೇಶದ ಕುರಿತು ಫಲಾನುಭವಿಗಳಿಗೆ ಆತಂಕ ಶುರುವಾಗಿದೆ. ಯೋಜನೆಗಾಗಿ 2,000 ಎಕರೆಗೂ ಹೆಚ್ಚು ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ.

‘ಕಳೆದ ತಿಂಗಳಷ್ಟೇ 30 ಲಕ್ಷ ಬ್ಯಾಂಕ್ ಸಾಲ ಮಾಡಿ ನಿವೇಶನ ಖರೀದಿಗೆ ಹಣ ಪಾವತಿಸಿದ್ದೇನೆ. ಈಗ ಹೈಕೋರ್ಟ್ ಆದೇಶದಿಂದ ಆತಂಕವಾಗಿದೆ. ಈ ಕುರಿತು ಕೆಎಚ್‌ಬಿಯಿಂದ ಸ್ಪಷ್ಟತೆ ಸಿಕ್ಕರೆ ಒಳ್ಳೆಯದು’ ಎಂದು ಕೆಎಚ್‌ಬಿ ನಿವೇಶನ ಫಲಾನುಭವಿಯೊಬ್ಬರು ತಿಳಿಸಿದರು.

ಇಡೀ ಯೋಜನೆಯ ಭೂ ಸ್ವಾಧೀನ ರದ್ದು: ವಕೀಲ ಉದಯ್ ಹೊಳ್ಳ

ಪರಿಸರ ಸೂಕ್ಷ್ಮ ವಲಯದಲ್ಲಿ ಸೂರ್ಯ ನಗರ ಲೇಔಟ್ ನಿರ್ಮಿಸಿರುವ ಕಾರಣ ಯೋಜನೆಗಾಗಿ ಆಗಿರುವ ಎಲ್ಲ ಜಮೀನು ಭೂಸ್ವಾಧೀನ ರದ್ದುಪಡಿಸಲಾಗಿದೆ ಎಂದು ರೈತರ ಪರ ವಕೀಲ ಉದಯ್ ಹೊಳ್ಳ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಬಳ್ಳಾರಿಯಲ್ಲಿ ಗಣಿಗಾರಿಕೆಯಿಂದ ಆಗಿರುವ ಪರಿಸರ ಮಾಲಿನ್ಯದ ಕುರಿತು ಪರಿಶೀಲನೆಗೆ ರಚಿಸಲಾಗಿದ್ದ ಸಿಇಸಿ ಸಮಿತಿಯೇ ಸೂರ್ಯ ನಗರ ಯೋಜನೆಗೆ ಆಗಿರುವ ಭೂಸ್ವಾಧೀನದ ಜಾಗವನ್ನು ಪರಿಶೀಲನೆ ನಡೆಸಿ ವರದಿ ನೀಡಿದೆ ಎಂದು ಅವರು ತಿಳಿಸಿದರು.

ಸುಪ್ರೀಂ ಮೊರೆ-ಕೆಎಚ್‌ಬಿ ಆಯುಕ್ತರು

68 ಎಕರೆ ಜಮೀನು ಭೂಸ್ವಾಧೀನ ಪ್ರಶ್ನಿಸಿ ಕೆಲವು ರೈತರು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವಾಗಿದೆ. ಆದರೆ, ವ್ಯಾಜ್ಯದಲ್ಲಿದ್ದ ಕಾರಣ ಆ 68 ಎಕರೆ ಜಮೀನಿನಲ್ಲಿ ಲೇಔಟ್ ಅಭಿವೃದ್ಧಿಪಡಿಸಿರಲಿಲ್ಲ. ಆದರೂ, ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಎಸ್‌ಎಲ್‌ಪಿ ಅರ್ಜಿ ಸಲ್ಲಿಸುತ್ತೇವೆ ಎಂದು ಕೆಎಚ್‌ಬಿ ಆಯುಕ್ತ ಕೆ.ಎ. ದಯಾನಂದ ‘ಕನ್ನಡಪ್ರಭ’ಕ್ಕೆ ತಿಳಿಸಿದರು. ಸೂರ್ಯ ನಗರ ಲೇಔಟ್‌ನಲ್ಲಿ ಈಗಾಗಲೇ ಹಂಚಿಕೆಯಾಗಿರುವ ನಿವೇಶನ ಮಾಲೀಕರಿಗೆ ಹೈಕೋರ್ಟ್ ಆದೇಶದಿಂದ ಯಾವುದೇ ಸಮಸ್ಯೆ ಇಲ್ಲ. ಪರಿಸರ ನಿಯಮಗಳು, ಆದೇಶಗಳ ಅನುಸಾರ, ಅಗತ್ಯ ಅನುಮತಿ ಪಡೆದು ಲೇಔಟ್ ನಿರ್ಮಿಸಲಾಗಿದೆ ಎಂದು ದಯಾನಂದ ಹೇಳಿದರು.

ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೂ ಕಾರ್ಮೋಡ

950 ಕೋಟಿ ರು. ವೆಚ್ಚದಲ್ಲಿ 80 ಸಾವಿರ ಸೀಟುಗಳ ಸಾಮರ್ಥ್ಯದ ಬೃಹತ್ ಕ್ರಿಕೆಟ್ ಕ್ರೀಡಾಂಗಣ ಹಾಗೂ ಇನ್ನಿತರ ಕ್ರೀಡೆಗಳ ಸಂಕೀರ್ಣ ನಿರ್ಮಿಸಬೇಕು ಎನ್ನುವ ರಾಜ್ಯ ಸರ್ಕಾರದ ಯೋಜನೆಗೆ ಹೈಕೋರ್ಟ್ ಆದೇಶದಿಂದ ಕಾರ್ಮೋಡ ಕವಿದಿದೆ. ಅಲ್ಲದೇ, ವಿವಿಧ ಮಾದರಿಯ ಅಪಾರ್ಟ್‌ಮೆಂಟ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಕ್ರೀಡಾಂಗಣ ನಿರ್ಮಾಣಕ್ಕೆ ಪರಿಸರ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಪಡೆಯಬೇಕಾಗುತ್ತದೆ. ನಿಯಮಾನುಸಾರ ಕ್ರೀಡಾಂಗಣ ನಿರ್ಮಾಣ ಯೋಜನೆಗೆ ಅನುಮತಿ ಕೋರಲಾಗುತ್ತದೆ ಎಂದು ಕೆಎಚ್‌ಬಿ ಆಯುಕ್ತ ಕೆ.ಎ.ದಯಾನಂದ ತಿಳಿಸಿದರು.

ವೈಜ್ಞಾನಿಕ ಅಧ್ಯಯನ ಮಾಡಿಲ್ಲ: ಹೈಕೋರ್ಟ್

ಮಾನವರ ಅಸ್ತಿತ್ವಕ್ಕೆ ಕೇವಲ ವಸತಿ ಒಂದೇ ಅಗತ್ಯವಲ್ಲ. ಪರಿಸರ, ವನ್ಯಜೀವಿ, ಅರಣ್ಯ, ಜಲಮೂಲಗಳು ಕೂಡ ಅಷ್ಟೇ ಮುಖ್ಯವಾಗಿವೆ. ಪ್ರಸ್ತಾವಿತ ಯೋಜನೆಯು 268.96 ಚದರ ಕಿ.ಮೀ. ವಿಸ್ತೀರ್ಣದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಪರಿಸರ ಸೂಕ್ಷ್ಮ ವಲಯದಲ್ಲಿ ಬರುವುದರಿಂದ, ಈ ಇಡೀ ಯೋಜನೆಯಲ್ಲೇ ಲೋಪದೋಷವಿದೆ. ಯೋಜನೆಯಿಂದ ಪರಿಸರ, ವಾತಾವರಣ ಮತ್ತು ವನ್ಯಜೀವಿ ವ್ಯವಸ್ಥೆಯ ಮೇಲೆ ಸರಿಪಡಿಸಲಾಗದ ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ. ಕೇಂದ್ರೀಯ ಉನ್ನತಾಧಿಕಾರಿವುಳ್ಳ ಸಮಿತಿಯೇ (ಸಿಇಸಿ) ಹೇಳಿರುವಂತೆ ಪರಿಸರ ಪರಿಣಾಮದ ಬಗ್ಗೆ ವೈಜ್ಞಾನಿಕ ಅಧ್ಯಯನ ಮತ್ತು ಸಾಮಾಜಿಕ-ಪರಿಸರ ಅಂಶಗಳಂತಹ ಪ್ರಮುಖ ವಿಷಯಗಳನ್ನು ಪರಿಗಣಿಸದೆ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗಿದೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಲಮಂಡಳಿ ಅಧ್ಯಕ್ಷರಿಗೆ ನೋಟಿಸ್‌ ನೀಡಲು ರೆಡ್ಡಿ ಸೂಚನೆ
ಮೆಜೆಸ್ಟಿಕ್‌ ಬಸ್‌ ನಿಲ್ದಾಣಗಳಿಗೆ ಸಾರಿಗೆಸಚಿವರ ಅನಿರೀಕ್ಷಿತ ಭೇಟಿ, ಪರಿಶೀಲನೆ