ಕಾರವಾರ: ಇಂದು ರಾಜ್ಯ ಬಜೆಟ್, ಜಿಲ್ಲೆಯ ಜನತೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಉನ್ನತ ಮಟ್ಟದ ಆರೋಗ್ಯ ಸೇವೆ, ಶಿಕ್ಷಣ, ಸಂಪರ್ಕ, ಮೂಲಭೂತ ಸೌಲಭ್ಯ, ರೈತರು, ತೋಟಗಾರಿಕೆ, ಮೀನುಗಾರಿಕೆಗೆ ವಿಶೇಷ ಯೋಜನೆ ಸೇರಿದಂತೆ ಹತ್ತು ಹಲವು ಕನಸುಗಳನ್ನು ಜಿಲ್ಲೆಯ ಜನತೆ ಕಾಣುತ್ತಿದ್ದಾರೆ.
ಪ್ರವಾಸೋದ್ಯಮಕ್ಕೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಪುಲ ಅವಕಾಶಗಳಿವೆ. ನೈಸರ್ಗಿಕ, ಧಾರ್ಮಿಕ, ಪೌರಾಣಿಕ, ಐತಿಹಾಸಿಕ ತಾಣಗಳಿಗೆ ಕೊರತೆ ಇಲ್ಲ. ಆದರೆ ಎಲ್ಲೆಡೆ ಮೂಲಭೂತ ಸೌಲಭ್ಯದ ಕೊರತೆ ಇದೆ. ಪ್ರಮುಖ ಜಲಪಾತಗಳಿಗೆ ತೆರಳಲು ರಸ್ತೆಯೇ ಸಮರ್ಪಕವಾಗಿಲ್ಲ. ಜಲಪಾತಗಳ ಎದುರೇ ನಿಂತಿದ್ದರೂ ಕುಡಿಯಲು ನೀರು ಸಿಗದು. ಹೀಗಾಗಿ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಯೋಜನೆಯನ್ನು ಪ್ರಕಟಿಸಬೇಕು ಎನ್ನುವುದು ಬಹುತೇಕ ಜನರ ಅಭಿಪ್ರಾಯ.
ಅಡಕೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ. ಆದರೆ ಅಡಕೆ ಬೆಳೆಗಾರರಿಗೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಇದರಿಂದ ರಿಯಾಯತಿ ದರದಲ್ಲಿ ಉಪಕರಣಗಳನ್ನು ನೀಡುವ ಬಗ್ಗೆ ಘೋಷಣೆ ಆಗಬೇಕು.ಕರಾವಳಿಯುದ್ದಕ್ಕೂ ಬಹುತೇಕ ಜನರು ಮೀನುಗಾರಿಕೆಯನ್ನು ಅವಲಂಬಿಸಿದ್ದಾರೆ. ಮೀನುಗಾರರು ವಾಸ್ತವ್ಯ ಮಾಡಿರುವ ಸಾವಿರಾರು ಮನೆಗಳ ಜಾಗಕ್ಕೆ ಪಟ್ಟಾ ಇಲ್ಲ. ಇದರಿಂದ ಸರ್ಕಾರದ ವಸತಿ ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ಇವರಿಗೆ ಪಟ್ಟಾ ನೀಡುವ ಬಗ್ಗೆ ಬಜೆಟ್‌ನಲ್ಲಿ ಘೋಷಣೆಯಾಗಬೇಕು.
ಕರಾವಳಿಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವುದು ಮಾಮೂಲಿ. ಕಡಲತೀರದ ಅಂಚಿನ ಗ್ರಾಮಗಳ ಬಾವಿಯಲ್ಲಿ ಉಪ್ಪು ನೀರು ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿ ಪೈಪ್‌ಲೈನ್ ಮೂಲಕ ನೀರು ಪೂರೈಕ ಮಾಡಬೇಕೆಂಬ ಆಗ್ರಹ ಬಹುಕಾಲದಿಂದ ಇದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ಇಲ್ಲ. ಜತೆ ವಿ.ವಿ. ಸ್ಥಾಪನೆಯ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ಉತ್ತರ ಕನ್ನಡ ಜಿಲ್ಲೆ ಬಹುಪಾಲು ಅರಣ್ಯದಿಂದ ಆವೃತವಾಗಿದೆ. ಭೌಗೋಳಿಕವಾಗಿ ಅರೆಬಯಲು ಸೀಮೆ, ಮಲೆನಾಡು ಹಾಗೂ ಕರಾವಳಿಯನ್ನು ಹೊಂದಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ನೀಡಬೇಕೆಂಬ ಆಗ್ರಹವೂ ಕೇಳಿಬರುತ್ತಿದೆ.ಜಿಲ್ಲೆಯ ಸಮಗ್ರ ಅಭಿವೃದ್ಧಿ ಆಗಬೇಕು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಉನ್ನತ ಶಿಕ್ಷಣ, ರೈತರು, ತೋಟಗಾರಿಕೆಗೆ ಅನುಕೂಲ ಕಲ್ಪಿಸಲು ಯೋಜನೆ ಘೋಷಿಸಬೇಕು ಎನ್ನುವುದು ನಮ್ಮೆಲ್ಲರ ಆಗ್ರಹವಾಗಿದೆ ಎಂದು ಗ್ರಾಪಂ ಸದಸ್ಯ ರಾಜೀವ ಭಟ್ ಹೇಳುತ್ತಾರೆ.