ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಷರತ್ತುಗಳನ್ನು ಈ ಬಾರಿ ಎಐಸಿಸಿ ವಿಧಿಸಿರುವುದು 50 ವರ್ಷ ಮೇಲ್ಪಟ್ಟಿರುವ ಆಕಾಂಕ್ಷಿಗಳಲ್ಲಿ ನಿರಾಸೆಯನ್ನುಂಟು ಮಾಡಿದೆ. ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಅಭಿಪ್ರಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಎಐಸಿಸಿಯಿಂದ ನೇಮಕಗೊಂಡಿರುವ ತೆಲಂಗಾಣ ಮೂಲದ ವೀಕ್ಷಕ ಡಾ.ಬೆಲ್ಲಯ್ಯ ನಾಯಕ ಅವರು ನಗರಕ್ಕೆ ಆಗಮಿಸಿದ್ದಾರೆ.
ಶನಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ, 135 ವರ್ಷದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷವನ್ನು ಬೇರುಮಟ್ಟದಿಂದ ಗಟ್ಟಿಗೊಳಿಸಬೇಕಾಗಿದೆ. ಅದಕ್ಕಾಗಿಯೇ ಈ ಬಾರಿ ಜಿಲ್ಲಾಧ್ಯಕ್ಷರುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಗಣನೀಯ ಬದಲಾವಣೆ ತರಲಾಗಿದೆ ಎಂದರು.ಎಲ್ಲ ಸಮುದಾಯಗಳನ್ನು ಒಳಗೊಳ್ಳುವ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಇಲ್ಲಿ ಜಿಲ್ಲಾಧ್ಯಕ್ಷರ ಹುದ್ದೆ ಇಂಥ ಸಮುದಾಯಕ್ಕೆಂದು ಮೀಸಲಿರುವುದಿಲ್ಲ. ಹೀಗಾಗಿ ಎಲ್ಲರನ್ನು ಪರಿಗಣಿಸಲಾಗುತ್ತದೆ. 3 ದಿನಗಳ ಕಾಲ ಪ್ರತಿ ಕಾರ್ಯಕರ್ತರಿಂದಲೂ ಅಭಿಪ್ರಾಯ ಆಲಿಸಲಾಗುತ್ತದೆ. ನಂತರ ಆ ಹೆಸರುಗಳನ್ನು ಶಿಫಾರಸ್ಸು ಮಾಡಲಾಗುತ್ತದೆ. ಮುಂದಿನ 1 ತಿಂಗಳೊಳಗಾಗಿ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದರು. ಇದೇ ರೀತಿ ಜಿಲ್ಲಾ ಪದಾಧಿಕಾರಿಗಳ ಹುದ್ದೆಗೂ ವಯಸ್ಸಿನ ಮಿತಿ ನಿಗದಿಪಡಿಸಲಾಗಿದೆ ಎಂದರು.ಅಹ್ಮದಾಬಾದ್ನಲ್ಲಿ ಈಚೆಗೆ ಜರುಗಿದ ಪಕ್ಷದ ರಾಷ್ಟ್ರೀಯ ಅಧಿವೇಶನದಲ್ಲಿ ಪಕ್ಷದ ಒಟ್ಟಾರೆ ಚಿತ್ರಣದಲ್ಲಿ ಆಗಬೇಕಿರುವ ಬದಲಾವಣೆ ಬಗ್ಗೆ ಚರ್ಚಿಸಲಾಗಿದೆ. ಈ ಕುರಿತು ಸಂಘ ಸಂಸ್ಥೆಗಳು, ಪತ್ರಕರ್ತರು, ಬುದ್ಧಿಜೀವಿಗಳಿಂದ ಹಿಡಿದು ಎಲ್ಲರಿಂದಲೂ ಅಭಿಪ್ರಾಯ ಆಲಿಸಲಾಗುತ್ತದೆ. ಜಿಲ್ಲಾಧ್ಯಕ್ಷರ ಆಯ್ಕೆ ವಿಷಯದಲ್ಲೂ ಪಕ್ಷ ತಾನೇ ತೀರ್ಮಾನ ಘೋಷಿಸುವುದಕ್ಕಿಂತಲೂ ಪಕ್ಷದ ಭವಿಷ್ಯದ ದೃಷ್ಟಿಯಿಂದ ಎಲ್ಲರಿಂದ ಅಭಿಪ್ರಾಯವನ್ನು ಆಲಿಸಲಾಗುತ್ತದೆ. ನಂತರ ಸಂಘಟನೆಗೆ ಸೂಕ್ತ ಎನಿಸುವ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ ಎಂದರು.ಕೆಪಿಸಿಸಿ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಕೆಪಿಸಿಸಿ ವೀಕ್ಷಕ ಸೋಮಣ್ಣ ಬೇವಿನಮರದ, ಕೆಪಿಸಿಸಿ ಉಪಾಧ್ಯಕ್ಷ ಎಂ.ಬಿ.ಸೌದಾಗರ, ಬುಡಾ ಅಧ್ಯಕ್ಷ ರಜಾಕ ಬೇನೂರ, ಮುಖಂಡರಾದ ಸಿದ್ದು ಕೊಣ್ಣೂರ, ಮಲ್ಲಿಕಾರ್ಜುನ ಚರಂತಿಮಠ, ನಾಗರಾಜ ಹದ್ಲಿ, ಚಂದ್ರಶೇಖರ ರಾಠೋಡ, ರಮೇಶ ಬದ್ನೂರ, ರಾಜು ಮನ್ನಿಕೇರಿ, ಶ್ರೀನಿವಾಸ ಬಳ್ಳಾರಿ, ಎನ್.ಬಿ.ಗಸ್ತಿ, ಎಸ್.ಎನ್.ರಾಂಪೂರ, ಪ್ರಭುಗೌಡ ಹಳ್ಳೂರ, ನಗರ ಬ್ಲಾಕ್ ಅಧ್ಯಕ್ಷ ಅಕ್ಬರ್ ಮುಲ್ಲಾ ಮತ್ತಿತರರು ಇದ್ದರು.
-ಡಾ.ಬೆಲ್ಲಯ್ಯ ನಾಯಕ, ವೀಕ್ಷಕ, ತೆಲಂಗಾಣ