ಶಾಬನೂರು ಕ್ರಾಸ್‌ನಲ್ಲಿ ಹೈಟೆಕ್‌ ಡಿಜಿಟಲ್ ಚೆಕ್ ಪೋಸ್ಟ್

KannadaprabhaNewsNetwork |  
Published : Nov 24, 2026, 02:00 AM IST
ಬೇಡ್ತಿ-ವರದಾ ನದಿ ಜೋಡಣೆ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವಂತೆ ಆಗ್ರಹಿಸಿ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಅಪರಾಧ, ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುವ, ಜನರ ಮುಖಚರ್ಯೆ ಗುರುತಿಸುವ, ವಾಹನಗಳ ಅಸಲಿ-ನಕಲಿ ನಂಬರ್ ಪ್ಲೇಟ್ ಪತ್ತೆ ಮಾಡುವ ಅತ್ಯಾಧುನಿಕ ಕ್ಯಾಮೆರಾ ಒಳಗೊಂಡ ಡಿಜಿಟಲ್ ಚೆಕ್‌ ಪೋಸ್ಟ್‌ ಅನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್‌.ಟಿ.ಶೇಖರ್ ಸೋಮವಾರ ಉದ್ಘಾಟಿಸಿದ್ದಾರೆ.

- ಬೆಂಗಳೂರು ಹೊರತುಪಡಿಸಿದರೆ ರಾಜ್ಯದ ದಾವಣಗೆರೆಯಲ್ಲಿ ಮಾತ್ರ ಈ ವ್ಯವಸ್ಥೆ: ಎಸ್ಪಿ ಡಾ.ಎಚ್.ಟಿ.ಶೇಖರ್- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಅಪರಾಧ, ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುವ, ಜನರ ಮುಖಚರ್ಯೆ ಗುರುತಿಸುವ, ವಾಹನಗಳ ಅಸಲಿ-ನಕಲಿ ನಂಬರ್ ಪ್ಲೇಟ್ ಪತ್ತೆ ಮಾಡುವ ಅತ್ಯಾಧುನಿಕ ಕ್ಯಾಮೆರಾ ಒಳಗೊಂಡ ಡಿಜಿಟಲ್ ಚೆಕ್‌ ಪೋಸ್ಟ್‌ ಅನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್‌.ಟಿ.ಶೇಖರ್ ಸೋಮವಾರ ಉದ್ಘಾಟಿಸಿದರು.

ನಗರದ ಶಾಬನೂರು ಗ್ರಾಮದ ಕೆಳ ಸೇತುವೆ ಬಳಿ ನಿರ್ಮಿಸಿರುವ ಜಿಲ್ಲೆಯ ಮೊದಲ ಡಿಜಿಟಲ್ ಚೆಕ್ ಪೋಸ್ಟ್ ಉದ್ಘಾಟಿಸಿದ ಎಸ್ಪಿ ಡಾ.ಶೇಖರ್, ಅಪರಾಧ ನಿಯಂತ್ರಣಕ್ಕೆ ಡಿಜಿಟಲ್ ಕಣ್ಗಾವಲಿಡಲು ಈ ಚೆಕ್ ಪೋಸ್ಟ್ ಸ್ಥಾಪಿಸಿದ್ದು, ಬಾಡಾ ಕ್ರಾಸ್‌ ಹಾಗೂ ಶಿರಮಗೊಂಡನಹಳ್ಳಿ ಕ್ರಾಸ್ ಬಳಿಯೂ ಡಿಜೆಟಲ್ ಚೆಕ್ ಪೋಸ್ಟ್ ಸ್ಥಾಪಿಸಲಾಗುವುದು ಎಂದರು.

ದಾವಣಗೆರೆಯಲ್ಲಿ ಅಪರಾಧ ಕೃತ್ಯಗಳ ನಿಯಂತ್ರಣ, ಅಪರಾಧಿಗಳ ಪತ್ತೆ, ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಪೊಲೀಸ್‌ ಇಲಾಖೆ ಶಾಬನೂರು ಕೆಳಸೇತುವೆ ಬಳಿ ಜಿಲ್ಲೆಯ ಮೊದಲ ಡಿಜಿಟಲ್‌ ಚೆಕ್‌ಪೋಸ್ಟ್‌ ಸ್ಥಾಪಿಸಿದೆ. ಕ್ರೆಡಿಟ್‌ ಆಕ್ಸಿಸ್‌ ಗ್ರಾಮೀಣ ಲಿಮಿಟೆಡ್‌ ಹಾಗೂ ಇಂಡಸ್‌ ವೆಜ್‌ಪ್ರೊ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಗಳ ಸಾಮಾಜಿಕ ಸಾಂಸ್ಥಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯಡಿ ಅತ್ಯಾಧುನಿಕ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಕೇಂದ್ರದಲ್ಲಿ ಸಂಚರಿಸುವ ಸುಮಾರು ಶೇ.60 ವಾಹನ ಶಾಬನೂರು ಕೆಳಸೇತುವೆ ಮಾರ್ಗವಾಗಿ ಸಾಗುತ್ತವೆ. ಈ ಹಿಂದೆ ಇಲ್ಲಿ ಪೊಲೀಸ್‌ ಸಿಬ್ಬಂದಿ ಬ್ಯಾರಿಕೇಡ್‌ ಅಳವಡಿಸಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಚುನಾವಣೆ, ಬಿಗಿ ಭದ್ರತೆ ವೇಳೆ ವಿಶೇಷ ನಿಗಾ ಇಡಲಾಗುತ್ತಿತ್ತು. ಈಗ ನೂತನ ಡಿಜಿಟಲ್‌ ಚೆಕ್‌ಪೋಸ್ಟ್‌ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದ್ದು, ನಗರ ಪ್ರವೇಶಿಸುವ ಮತ್ತು ಹೊರಹೋಗುವ ವಾಹನಗಳು ಹಾಗೂ ಜನರ ಚಲನವಲನಗಳ ಮೇಲೆ ನಿರಂತರ ನಿಗಾ ಇಡಲು ಇದು ಸಹಕಾರಿಯಾಗಿದೆ ಎಂದು ಹೇಳಿದರು.

ತಂತ್ರಜ್ಞಾನ ನೆರವಿನಿಂದ ನಿರ್ಮಿಸಿರುವ ರಾಜ್ಯದ 2ನೇ ಡಿಜಿಟಲ್‌ ಚೆಕ್‌ಪೋಸ್ಟ್‌ ಇದು. ಬೆಂಗಳೂರು ಹೊರತುಪಡಿಸಿದರೆ ರಾಜ್ಯದ ಬೇರಾವ ನಗರದಲ್ಲೂ ಇಂತಹ ವ್ಯವಸ್ಥೆ ಇಲ್ಲ. ಇಲ್ಲಿ ಮುಖಚರ್ಯೆ ಗುರುತಿಸುವ, ವಾಹನಗಳ ನಂಬರ್‌ ಪ್ಲೇಟ್‌ ಪತ್ತೆ ಹಚ್ಚುವ ಪ್ರತ್ಯೇಕ ಸಿ.ಸಿ. ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಅವು ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸಲಿವೆ. ವಾಹನಗಳು ಚೆಕ್‌ಪೋಸ್ಟ್‌ ಮೂಲಕ ಹಾದು ಹೋದ ತಕ್ಷಣವೇ ಕ್ಯಾಮೆರಾಗಳು ಮಾಹಿತಿಯನ್ನು ಸಂಗ್ರಹಿಸಿ ಚೆಕ್‌ಪೋಸ್ಟ್‌ ಕಂಪ್ಯೂಟರ್‌ ಹಾಗೂ ಕಮಾಂಡ್‌ ಕಂಟ್ರೋಲ್‌ ಸೆಂಟರ್‌ಗೆ ರವಾನಿಸುತ್ತವೆ ಎಂದು ಮಾಹಿತಿ ನೀಡಿದರು.

ನಂಬರ್‌ ಪ್ಲೇಟ್‌ ಬದಲಿಸಿ ಸಂಚರಿಸುವ ವಾಹನಗಳನ್ನೂ ಸುಲಭವಾಗಿ ಪತ್ತೆ ಹಚ್ಚಲು ಈ ಅತ್ಯಾಧುನಿಕ ಕ್ಯಾಮೆರಾಗಳಿಂದ ಸಾಧ್ಯವಾಗಲಿದೆ. ಅಪರಾಧ ಪ್ರಕರಣಗಳ ತನಿಖೆ, ಅಪರಾಧಿಗಳ ಚಲನ ವಲನಗಳ ಮೇಲೆ ನಿಗಾ ಹಾಗೂ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಈ ವ್ಯವಸ್ಥೆ ನೆರವಾಗಲಿದೆ. ಮಧ್ಯ ಕರ್ನಾಟಕದ ಪ್ರಮುಖ ನಗರವಾದ ದಾವಣಗೆರೆ ವೇಗವಾಗಿ ಬೆಳೆಯುತ್ತಿದ್ದು, ಆಧುನೀಕರಣದೊಂದಿಗೆ ಸುರಕ್ಷತೆ ಸವಾಲೂ ಹೆಚ್ಚುತ್ತಿವೆ. ಜನರು ನಿರ್ಭೀತಿಯಿಂದ ಬದುಕಲು ಸುರಕ್ಷತೆ ಅತ್ಯಂತ ಮುಖ್ಯ. ಈ ಹಿನ್ನೆಲೆ ಬಾಡಾ ಕ್ರಾಸ್‌, ಶಿರಮಗೊಂಡನಹಳ್ಳಿ ಕ್ರಾಸ್ ಸೇರಿದಂತೆ ನಗರದ ವಿವಿಧೆಡೆ ಹಂತ ಹಂತವಾಗಿ ಡಿಜಿಟಲ್‌ ಚೆಕ್‌ಪೋಸ್ಟ್‌ ಸ್ಥಾಪಿಸಲಿದ್ದೇವೆ ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ, ಡಿವೈಎಸ್ಪಿಗಳಾದ ಬಿ.ಶರಣಬಸವೇಶ್ವರ, ಎ.ಕೆ.ರುದ್ರೇಶ, ನಬಾರ್ಡ್‌ ಜಿಲ್ಲಾ ವ್ಯವಸ್ಥಾಪಕಿ ರಶ್ಮಿ ರೇಖಾ, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಪಿ.ಡಿ.ಹಿರೇಮಠ, ಪೊಲೀಸ್‌ ಇನ್‌ಸ್ಪೆಕ್ಟರ್‌ಗಳಾದ ಬಿ.ಮಂಜುನಾಥ, ಮಂಜುನಾಥ ಕುಪ್ಪೆಲೂರು, ಇಂಡಸ್‌ ವೆಜ್‌ಪ್ರೊ ಪ್ರೈವೇಟ್‌ ಲಿಮಿಟೆಡ್‌ ನಿರ್ದೇಶಕ ಮಹದೇವಯ್ಯ ಎಂ.ಎಸ್‌. ಉಪಸ್ಥಿತರಿದ್ದರು.

- - -

(ಬಾಕ್ಸ್‌)

* ಅಪರಾಧ ಹಿನ್ನೆಲೆ, ರೌಡಿಶೀಟರ್‌ಗಳ ಮೇಲೆ ಹದ್ದಿನಕಣ್ಣು

ಶಾಬನೂರು ಕ್ರಾಸ್‌ನ ಡಿಜಿಟಲ್‌ ಚೆಕ್‌ಪೋಸ್ಟ್‌ ಮೂಲಕ ಹಾದುಹೋಗುವ ಪ್ರತಿ ವ್ಯಕ್ತಿಯ ಮುಖಚರ್ಯೆ ಕ್ಯಾಮೆರಾಗಳು ಸೆರೆಹಿಡಿದು ಕಮಾಂಡ್‌ ಕಂಟ್ರೋಲ್‌ ಸೆಂಟರ್‌ಗೆ ರವಾನಿಸಲಿವೆ. ಅಪರಾಧ ಹಿನ್ನೆಲೆಯವರು, ರೌಡಿಶೀಟರ್‌ಗಳ ವಿವರಗಳನ್ನು ಈಗಾಗಲೇ ಡಿಜಿಟಲೀಕರಣಗೊಳಿಸಲಾಗಿದೆ. ಕ್ಯಾಮೆರಾದಲ್ಲಿ ಸೆರೆಯಾದ ಮುಖಚರ್ಯೆ ಅಪರಾಧಿ ಅಥವಾ ಆರೋಪಿ ದಾಖಲೆಯಲ್ಲಿರುವ ಮುಖಕ್ಕೆ ಶೇ.80 ಸಾಮ್ಯತೆ ಹೊಂದಿದ್ದರೂ ತಕ್ಷಣವೇ ಪೊಲೀಸರಿಗೆ ಎಚ್ಚರಿಕೆ ಸಂದೇಶ ರವಾನೆಯಾಗಲಿದೆ. ಒಂದು ಕ್ಯಾಮೆರಾ 10 ಪೊಲೀಸ್‌ ಸಿಬ್ಬಂದಿ ನಿರ್ವಹಿಸುವಷ್ಟು ಕಾರ್ಯ ಕ್ಷಮತೆ ಹೊಂದಿದೆ.

- ಡಾ. ಎಚ್.ಟಿ.ಶೇಖರ್, ಜಿಲ್ಲಾ ಎಸ್‌ಪಿ

- - -

-23ಕೆಡಿವಿಜಿ45:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾದಪ್ಪ ದರ್ಶನ ಪಡೆದ ಜಿ.ಟಿ.ದೇವೇಗೌಡ,
ಶರಣರ ಲೇವಡಿಗೈದವರಿಗೆ ಕಠಿಣ ಶಿಕ್ಷೆಯಾಗಲಿ: ಸಾಣೇಹಳ್ಳಿ ಶ್ರೀ