ಕುಷ್ಟಗಿ: ತಾಲೂಕಿನ ಗುಮಗೇರಾ ಗ್ರಾಮದ ಜಮೀನಿನಲ್ಲಿ ಹೈಟೆನ್ಷನ್ ವಿದ್ಯುತ್ ಪ್ರಸರಣ ಮಾರ್ಗದ ಕಾಮಗಾರಿ ವೇಳೆ ಪರಿಹಾರ ಮತ್ತು ಅನುಮತಿ ವಿವಾದ ಹಿಂಸಾತ್ಮಕ ಘರ್ಷಣೆಗೆ ತಿರುಗಿದ ಹಿನ್ನೆಲೆಯಲ್ಲಿ ಕಂಪನಿ ಸಿಬ್ಬಂದಿ ಮತ್ತು ರೈತರ ನಡುವೆ ಪರಸ್ಪರ ವಾಗ್ವಾದ, ಘರ್ಷಣೆ ಮತ್ತು ಮಾರಾಮಾರಿ ನಡೆದಿದ್ದು, ಮೂವರು ರೈತರು ಕೆಲ ಕಂಪನಿ ಸಿಬ್ಬಂದಿಗಳು ಗಾಯಗೊಂಡ ಘಟನೆ ಬುಧವಾರ ನಡೆದಿದೆ.
ಈ ವೇಳೆ ರೈತರು ಮತ್ತು ಕಂಪನಿ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆದು ಕೆಲವೇ ಕ್ಷಣಗಳಲ್ಲಿ ವಿಕೋಪಕ್ಕೆ ತಿರುಗಿ ಪರಸ್ಪರ ಹಲ್ಲೆಗೆ ಕಾರಣವಾಯಿತು ಎಂದು ತಿಳಿದು ಬಂದಿದೆ.
ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಕುಷ್ಟಗಿ ಪೊಲೀಸ ಠಾಣೆಯ ಪಿಎಸೈ ಹನುಮಂತಪ್ಪ ತಳವಾರ ಹಾಗೂ ಪೊಲೀಸ್ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದು ಪರಿಶೀಲನೆ ನಡೆಸಿದರು.ಘಟನೆಯಲ್ಲಿ ಗಾಯಗೊಂಡವರನ್ನು ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ರೈತರ ಮೇಲೆ ಹಲ್ಲೆ ಖಂಡನೀಯ: ಗುಮಗೇರಾ ಗ್ರಾಮದಲ್ಲಿ ನಡೆದಿರುವ ರೈತರ ಮೇಲಿನ ಹಲ್ಲೆ ಖಂಡನೀಯ, ತಪ್ಪಿತಸ್ಥ ಕಂಪನಿ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರೈತಪರ ಸಂಘಟನೆ ಮುಖಂಡರಾದ ಮಲ್ಲಿಕಾರ್ಜುನ ದೋಟಿಹಾಳ, ಹನುಮೇಶ ಶಾಖಾಪೂರ, ಶರಣಪ್ಪ ಮೇಗೂರು, ಹೊನ್ನಪ್ಪ ತಳವಾರ ಹಾಗೂ ಶರೀಫಸಾಬ ಕುಷ್ಟಗಿ ಆಗ್ರಹಿಸಿದರು.
ನಮ್ಮ ಜಮೀನಿನಲ್ಲಿ ಅನುಮತಿ ಪಡೆಯದೇ ಪರಿಹಾರ ನೀಡದೆ ವಿದ್ಯುತ್ ಲೈನ್ ಕಾಮಗಾರಿ ನಡೆಸಲು ಮುಂದಾದರು. ನಾವು ತಕರಾರು ಮಾಡಿದಾಗ ಮಾತಿಗೆ ಮಾತು ಬೆಳೆದು ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎಂದು ಗಾಯಾಳು ರೈತರಾದ ರಾಮಣ್ಣ ಭಜಂತ್ರಿ, ಹನಮೇಶ ಭಜಂತ್ರಿ, ಹನಮಂತಪ್ಪ ಭಜಂತ್ರಿ ತಿಳಿಸಿದ್ದಾರೆ.