ಹಲಗೂರು: ಕಾವೇರಿ ನದಿಗೆ ಹೆಚ್ಚಿನ ನೀರನ್ನು ಬಿಟ್ಟಿರುವುದರಿಂದ ಪ್ರಸಿದ್ಧ ಪ್ರವಾಸಿ ತಾಣ ಮುತ್ತತ್ತಿಗೆ ಬರುವ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಿ ತಾಲೂಕು ದಂಡಾಧಿಕಾರಿ ಎಸ್.ವಿ.ಲೋಕೇಶ್ ಆದೇಶ ಮಾಡಿದ್ದಾರೆ.
ಕೃಷ್ಣರಾಜಸಾಗರದಿಂದ 80 ಸಾವಿರಕ್ಕೂ ಹೆಚ್ಚಿನ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಮುಂದೆ ಸಂಭವಿಸಬಹುದಾದ ಅಹಿತಕರ ಘಟನೆಗಳನ್ನು ತಡೆಯಲು ವನ್ಯಜೀವಿ ಸಂರಕ್ಷಣೆ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡುವಂತೆ ಹಲಗೂರು ಪಿಎಸ್ಐ ಲೋಕೇಶ್ ಅವರು ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಜು.28 ರಂದು ಸೋಮವಾರ ಸಂಜೆ 6 ಗಂಟೆಯಿಂದ ಮುಂದಿನ ಆದೇಶದವರೆಗೆ ಪ್ರವಾಸಿ ತಾಣ ಮುತ್ತತ್ತಿ ಪ್ರದೇಶಕ್ಕೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ತಹಸೀಲ್ದಾರ್ ಎಸ್.ವಿ.ಲೋಕೇಶ್ ಆದೇಶ ಮಾಡಿದ್ದಾರೆ.