ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಹೆದ್ದಾರಿ ಅಗಲೀಕರಣದ ಕಾಮಗಾರಿ ಕಾರಣ ಹಾಗೂ ಚರಂಡಿ ನಿರ್ಮಾಣದ ಕಾರಣಕ್ಕೆ ರಸ್ತೆಯ ಅರ್ಧಾಂಶ ಭಾಗ ಸಂಚಾರ ನಿಷೇಧ ಹಿನ್ನೆಲೆಯಲ್ಲಿ ಉಪ್ಪಿನಂಗಡಿ ಪೇಟೆಯಲ್ಲಿ ಮತ್ತೆ ಟ್ರಾಫಿಕ್ ಜಾಮ್ ಉಂಟಾಗಿ ೨ ಘಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡ ಘಟನೆ ಗುರುವಾರ ನಡೆದಿದೆ.ಗುರುವಾರ ರಾಷ್ಟ್ರಿಯ ಹೆದ್ದಾರಿ ೭೫ರಿಂದ ಹಿಡಿದು ಪುತ್ತೂರು, ಮಂಗಳೂರು, ಬೆಳ್ತಂಗಡಿ ಕಡೆಗಳಿಗೆ ಹಾಗೂ ಸ್ಥಳೀಯ ಪೋಲಿಸ್ ಠಾಣೆ ಮುಂದೆಯು ವಾಹನದ ದಟ್ಟಣೆಯಿಂದ ರಸ್ತೆಯ ಉದ್ದಗಲಕ್ಕೂ ವಾಹನಗಳು ದಾರಿ ತೋಚದೇ ಉದ್ದಕ್ಕೂ ಕಾಯುವಂತಾಗಿತ್ತು. ಸ್ಥಳೀಯ ಉದ್ಯಮಿಗಳ ವ್ಯವಹಾರ ಕೇಂದ್ರವಾದ ಬ್ಯಾಂಕ್ ರಸ್ತೆ ಹಳೆ ಬಸ್ ನಿಲ್ದಾಣ ಮುಂತಾದ ಕಡೆ ಪಾದಚಾರಿಗಳು ಕೂಡಾ ರಸ್ತೆ ದಾಟುವಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಗಿ ಉದ್ಯಮಿಗಳು ವಾಣಿಜ್ಯ ಮತ್ತು ಕೈಗಾರಿಕಾ ಸಂಘಕ್ಕೆ ದೂರುಗಳ ಸರಮಾಲೆ ಕೇಳಿ ಬಂತು.
ಸ್ಥಳೀಯ ಪೊಲೀಸರು ಸಂಚಾರ ನಿಯಂತ್ರಣಕ್ಕೆ ನಿಯೋಜಿತರಾಗಿದ್ದರೂ, ಇಕ್ಕಟ್ಟಾದ ರಸ್ತೆಯಲ್ಲಿ ವಾಹನಗಳು ಸುಲಲಿತವಾಗಿ ಸಂಚರಿಸಲಾಗದೆ ಉಂಟಾದ ಸಮಸ್ಯೆ ನಿವಾರಿಸಲು ಬಹಳಷ್ಟು ವಿಳಂಬವಾಯಿತು.ತರಾತುರಿಯ ಕಾಮಗಾರಿ:
ಸಮಸ್ಯೆ ಬಿಗಡಾಯಿಸುತ್ತಿದ್ದಂತೆಯೇ ಕಾಂಕ್ರೀಟ್ ಮೋರಿ ಅಳವಡಿಕೆಗಾಗಿ ರಸ್ತೆ ಅಗೆದ ಬಳಿಕ ಮಣ್ಣು ಹಾಕದೆ ಇರುವುದರಿಂದ ಲಭ್ಯ ರಸ್ತೆಯ ಭಾಗದಲ್ಲಿ ಏಕ ಕಾಲದಲ್ಲಿ ಎರಡು ಘನ ವಾಹನಗಳು ಸಂಚರಿಸಲು ಅಸಾಧ್ಯವಾದ ಕಾರಣವನ್ನು ಅರಿತು ಹೆದ್ದಾರಿ ಅಗಲೀಕರಣ ಕಾಮಗಾರಿ ನಿರತರನ್ನು ಒತ್ತಾಯಿಸಿ ಕಡಿಯಲಾದ ರಸ್ತೆಗೆ ಮಣ್ಣು ಹಾಕಿಸುವ ಕಾರ್ಯವನ್ನು ಭರದಲ್ಲಿ ನಡೆಸಲಾಯಿತು. ಡಿವೈಎಸ್ಪಿ ವಿರುದ್ದ ಗರಂ: ಟ್ರಾಫಿಕ್ ಜಾಮ್ ಆಗಿ ಪೇಟೆಯ ಎಲ್ಲಾ ರಸ್ತೆಗಳಲ್ಲಿ ವಾಹನಗಳು ಸಂಚರಿಸಲಾಗದೆ ಅತಂತ್ರ ಸ್ಥಿತಿ ನಿರ್ಮಾಣವಾದಾಗ ಖುದ್ದು ವಾಹನ ಸಂಚಾರವನ್ನು ಸರಿದಾರಿಗೆ ತರಲು ರಸ್ತೆಗಿಳಿದ ಉಪ್ಪಿನಂಗಡಿ ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟಾ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಲು ಯತ್ನಿಸಿ ವಿಫಲರಾದರು.ಪುತ್ತೂರು ಡಿವೈಎಸ್ಪಿ ಅವರಿಗೆ ಫೋನಾಯಿಸಿ ಸಮಸ್ಯೆಯ ಗಂಭೀರತೆಯನ್ನು ಮನವರಿಕೆ ಮಾಡಲು ಮುಂದಾದರು. ಈ ವೇಳೆ ಪ್ರಶಾಂತ್ ಡಿಕೋಸ್ಟಾ ಅವರಿಗೆ ಪ್ರತಿಕ್ರಿಯಿಸಿದ ಡಿವೈಎಸ್ಪಿ, ಸಮರ್ಪಕವಾಗಿ ಉತ್ತರಿಸಿಲ್ಲ ಎಂದು ಪ್ರಶಾಂತ್ ಡಿಕೋಸ್ಟಾ ಮಾಧ್ಯಮ ಪ್ರತಿನಿಧಿಗಳಲ್ಲಿ ದೂರಿದ್ದಾರೆ.
ಈ ಬೆಳವಣಿಗೆಯನ್ನು ಖಂಡಿಸಿರುವ ಛೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯೂನಿಕ್ , ಸಾರ್ವಜನಿಕರ ಹಿತಾಸಕ್ತಿಯನ್ನು ಮುಂದಿರಿಸಿ ಸಂಘದ ಅಧ್ಯಕ್ಷರು ಪೊಲಿಸ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಕನಿಷ್ಠ ಸೌಜನ್ಯದಿಂದ ವರ್ತಿಸಬೇಕು. ಸಾರ್ವಜನಿಕರ ಹಿತಕ್ಕಾಗಿ ಸಂಪರ್ಕಿಸಿದ್ದಾಗ ಕೆಟ್ಟದಾಗಿ ವರ್ತಿಸಿದರೆ ಸಹಿಸಲು ಅಸಾಧ್ಯ. ಪ್ರಕರಣವನ್ನು ಸರ್ಕಾರದ ಗಮನಕ್ಕೆ ತರಲಾಗುವುದೆಂದು ತಿಳಿಸಿದ್ದಾರೆ.