ರಾಂ ಅಜೆಕಾರು
ಕನ್ನಡಪ್ರಭ ವಾರ್ತೆ ಕಾರ್ಕಳಕಾರ್ಕಳ-ಹೆಬ್ರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಮಳೆಯಿಂದಾಗಿ ಕೆಲವೆಡೆ ಸಂಚಾರಕ್ಕೆ ತೊಡಕಾಗಿದೆ. ಬೈಕ್ ಸವಾರರು ಕೆಸರಿನಲ್ಲಿ ಜಾರಿ ಬಿದ್ದ ಘಟನೆಗಳು ಸಂಭವಿಸಿದೆ.ಮಲ್ಪೆ- ಮೊಣಕಾಲ್ಮೂರು ಸಂಚರಿಸುವ ರಾಷ್ಟ್ರೀಯ ಹೆದ್ದಾರಿ 169ಎ ಕಾಮಗಾರಿ ನಡೆಯುತ್ತಿದ್ದು, ಕೆಲವೆಡೆಗಳಲ್ಲಿ ಚರಂಡಿ ನಿರ್ಮಾಣವಾಗದೆ ಮಳೆ ನೀರು ರಸ್ತೆಯಲ್ಲಿ ಹರಿದು ಹೋಗುತ್ತಿದೆ. ಉಡುಪಿ ತಾಲೂಕಿನ ಪೆರ್ಡೂರು ಸಮೀಪದ ಪುತ್ತಿಗೆ ಬಳಿ ಚರಂಡಿ ಇಲ್ಲದೆ ಕೆಸರು ತುಂಬಿದ್ದು, ವಾಹನ ಸವಾರರು ಸಂಚರಿಸಲು ಪ್ರಯಾಸ ಪಡುತ್ತಿದ್ದಾರೆ. ಹೆಬ್ರಿ ತಾಲೂಕಿನ ಪಾಡಿಗಾರ, ಶಿವಪುರ ಬಳಿ ರಸ್ತೆಗೆ ಮಣ್ಣು ಹಾಕಲಾಗಿದ್ದು, ಮಣ್ಣು ಕೊಚ್ಚಿಕೊಂಡು ಹೋಗಿದೆ.
* ಎಚ್ಚರಿಕೆ ಫಲಕಗಳಿಲ್ಲ:ಅಪಾಯಕಾರಿ ಪ್ರದೇಶಗಳಾದ ಹೆಬ್ರಿಯ ಕನ್ಯಾನ, ಶಿವಪುರ, ಪೆರ್ಡೂರು ಸಮೀಪದ ಪುತ್ತಿಗೆ ಹಾಗೂ ಉಡುಪಿ ಪರೀಕ ಸಮೀಪದ ಮದಗ ಬಳಿ ಯಾವುದೇ ಎಚ್ಚರಿಕೆ ಫಲಕಗಳಿಲ್ಲ. ಚರಂಡಿ ನಿರ್ಮಾಣ ಕೂಡ ಮಾಡಿಲ್ಲ. ರಸ್ತೆಯ ಮಧ್ಯದಲ್ಲಿ ಮಳೆ ನೀರು ಹರಿಯುವ ಕಾರಣ ಸಂಚಾರಕ್ಕೆ ಕಷ್ಟವಾಗಿದೆ.
* ತಡೆಗೋಡೆ ಕುಸಿತ:ಕಾರ್ಕಳದಿಂದ ಮಾಳದ ವರೆಗೆ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಆದರೆ ಮಿಯ್ಯಾರು ಕಾಜರಬೈಲು ಗದ್ದೆಯ ಬಳಿ ಅಳವಡಿಸಲಾಗಿದ್ದ ಕಾಂಕ್ರೀಟೀಕೃತ ತಡೆಗೋಡೆ ಮಳೆಯ ರಭಸಕ್ಕೆ ಕುಸಿದಿದೆ. ಮತ್ತೆ ಅದನ್ನು ಸರಿಪಡಿಸುವ ಕಾಮಗಾರಿ ನಡೆಯುತ್ತಿದೆ. ಕಾರ್ಕಳ ಬೈಪಾಸ್‌ನಿಂದ ಸಾಣೂರು ಮಾರ್ಗವಾಗಿ ಮೂಡುಬಿದಿರೆ - ಮಂಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಸಾಣೂರು ಬಳಿ ಇನ್ನೂ ಚರಂಡಿ ನಿರ್ಮಾಣವಾಗಿಲ್ಲ.
* ಕೃತಕ ನೆರೆ ನಿರ್ಮಾಣ:ಸಾಣೂರು ನದಿಗೆ ಹೊಸ ಸೇತುವೆ ಕಾಮಗಾರಿ ನಡೆಯುತ್ತಿದ್ದು, ನದಿಯಲ್ಲಿ ನೀರು ಹರಿಯದಂತೆ ಅಡ್ಡಲಾಗಿ ಮಣ್ಣು ಹಾಕಲಾಗಿದೆ. ಇದರಿಂದಾಗಿ ನದಿ ತಟದ ಭಾಗಗಳಲ್ಲಿ, ಗದ್ದೆ, ಮನೆಗಳಲ್ಲಿ ಕೃತಕ ನೆರೆ ಉಂಟಾಗಿದೆ. ಸಾಣೂರು ಪ್ರದೇಶದಲ್ಲಿ ರಸ್ತೆಗಾಗಿ ಗುಡ್ಡವನ್ನು ಅಗೆಯಲಾಗಿದೆ. ಆದರೆ ರಸ್ತೆ ಇಕ್ಕೆಲಗಳಲ್ಲಿ ಉಳಿದಿರುವ ಗುಡ್ಡಕ್ಕೆ ಗಡೆಗೋಡೆ ನಿರ್ಮಾಣವಾಗಿಲ್ಲ. ಮಳೆ ಸಂದರ್ಭ ಈ ಗುಡ್ಡ ಜರಿದು ಬೀಳುವ ಸಂಭವವಿದ್ದು, ವಾಹನ ಸವಾರರ ಜೀವಕ್ಕೆ ಅಪಾಯ ಉಂಟಾಗಲಿದೆ. ಆದ್ದರಿಂದ ಶೀಘ್ರವಾಗಿ ತಡೆಗೋಡೆ ನಿರ್ಮಾಣ ವಾಗಬೆಕಿದೆ.
.........ಸಾಣೂರು ನದಿಗೆ ಹೊಸ ಸೇತುವೆ ಕಾಮಗಾರಿ ನಡೆಯುತ್ತಿದ್ದು, ನದಿಯಲ್ಲಿ ನೀರು ಹರಿಯದಂತೆ ಅಡ್ಡಲಾಗಿ ಮಣ್ಣು ಹಾಕಲಾಗಿದೆ. ಇದರಿಂದಾಗಿ ನದಿ ತಟದ ಭಾಗಗಳಲ್ಲಿ, ಗದ್ದೆ ಮನೆಗಳಲ್ಲಿ ಕೃತಕ ನೆರೆ ಉಂಟಾಗಿದೆ. ಮಳೆಗಾಲದ ಸಂದರ್ಭದಲ್ಲಿ ಗುತ್ತಿಗೆ ಪಡೆದ ಕಂಪನಿಯು ತಡೆಗೋಡೆ ಹಾಗೂ ತಾತ್ಕಾಲಿಕ ಚರಂಡಿ ಮಾಡುವ ಬಗ್ಗೆ ಗಮನಹರಿಸುತ್ತಿಲ್ಲ.। ಸಾಣೂರು ನರಸಿಂಹ ಕಾಮತ್, ಅಧ್ಯಕ್ಷರು ಹೆದ್ದಾರಿ ಹೋರಾಟ ಸಮಿತಿ.
------------------ಹೆಬ್ರಿಯಿಂದ ಉಡುಪಿ ಸಾಗುವುದೇ ಕಷ್ಟ. ಅದಕ್ಕಾಗಿ ಪೇತ್ರಿ, ಬ್ರಹ್ಮಾವರ ಮೂಲಕ ಉಡುಪಿಗೆ ಸಾಗುತಿದ್ದೇವೆ. 35 ಕಿ.ಮೀ.ಗೆ 50 ಕಿ.ಮೀ. ಸುತ್ತು ಬಳಸಿ ಸಾಗುತಿದ್ದೇವೆ.
। ರಾಜೇಶ್, ಪ್ರಯಾಣಿಕರು ಹೆಬ್ರಿ