ಸಿಬಿಎಸ್‌ಇ ಮೂಲಕ ಹಿಂದಿ ಹೇರಿಕೆ: ತಜ್ಞರ ಕಿಡಿ

KannadaprabhaNewsNetwork |  
Published : May 19, 2026, 02:00 AM IST
ಶಾಲೆ | Kannada Prabha

ಸಾರಾಂಶ

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಶಾಲೆಗಳಲ್ಲಿ 2026-27ನೇ ಸಾಲಿನಿಂದ ತ್ರಿಭಾಷಾ ಸೂತ್ರ ಜಾರಿ ಮಾಡುತ್ತಿರುವುದು ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ಹೊಸ ಅವತಾರಕ್ಕೆ ಸಾಕ್ಷಿಯಾಗಿದೆ. ಇದರಿಂದ ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳು ಆಯಾ ರಾಜ್ಯಗಳಲ್ಲಿ ಪರೀಕ್ಷೆಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ತೃತೀಯ ಭಾಷೆಗೆ ತಳ್ಳಲ್ಪಡುತ್ತದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಶಾಲೆಗಳಲ್ಲಿ 2026-27ನೇ ಸಾಲಿನಿಂದ ತ್ರಿಭಾಷಾ ಸೂತ್ರ ಜಾರಿ ಮಾಡುತ್ತಿರುವುದು ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ ಹೊಸ ಅವತಾರಕ್ಕೆ ಸಾಕ್ಷಿಯಾಗಿದೆ. ಇದರಿಂದ ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳು ಆಯಾ ರಾಜ್ಯಗಳಲ್ಲಿ ಪರೀಕ್ಷೆಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲದ ತೃತೀಯ ಭಾಷೆಗೆ ತಳ್ಳಲ್ಪಡುತ್ತದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಈ ತ್ರಿಭಾಷಾ ಸೂತ್ರದಿಂದ ಕರ್ನಾಟಕದ ಸಿಬಿಎಸ್‌ಇ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕೆಂಬ ಈಗಿರುವ ನಿಯಮಕ್ಕೆ ಪೆಟ್ಟು ಬೀಳಲಿದೆ. ದೇಶಾದ್ಯಂತ ಹಿಂದಿ ಹೊರತುಪಡಿಸಿ ಉಳಿದೆಲ್ಲಾ ಪ್ರಾದೇಶಿಕ ಭಾಷೆಗಳು ಆಯಾ ರಾಜ್ಯಗಳಲ್ಲೇ ನಿರ್ಲಕ್ಷ್ಯಕ್ಕೆ ಸಿಲುಕಲಿವೆ. ಹಾಗಾಗಿ ಕೂಡಲೇ ಕೇಂದ್ರ ಸರ್ಕಾರ ತ್ರಿಭಾಷಾ ಸೂತ್ರ ರದ್ದುಪಡಿಸಬೇಕೆಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.

ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಅವರು ಹೇಳಿರುವ ಪ್ರಕಾರ, ತ್ರಿಭಾಷಾ ಸೂತ್ರದಡಿ ಸಿಬಿಎಸ್‌ಇ ಶಾಲೆಗಳಲ್ಲಿ ಆರ್‌1, ಆರ್‌2 ಮತ್ತು ಆರ್‌3 ಎಂಬ ಮೂರು ಭಾಷೆಗಳನ್ನು ಕಡ್ಡಾಯವಾಗಿ ಕಲಿಬೇಕೆಂದು ಹೇಳಲಾಗಿದೆ. ಆದರೆ, ಆರ್‌ 3 ಭಾಷೆ ಪಟ್ಟಿಯಲ್ಲಿ ಕನ್ನಡ, ತೆಲುಗು, ತಮಿಳು, ಮರಾಠಿ, ಸಿಂದಿ, ಅಸ್ಸಾಮಿ, ಬಂಗಾಳಿ ಸೇರಿ ಹಿಂದಿ ಹೊರತುಪಡಿಸಿ ದೇಶದ ಇನ್ನಿತರೆ 19 ಭಾರತೀಯ ಭಾಷೆಗಳ ಪಟ್ಟಿ ಒದಗಿಸಲಾಗಿದೆ.

ಈ ಪಟ್ಟಿಯಲ್ಲಿ ಹಿಂದಿಯನ್ನು ಸೇರಿಸದೆ ಇರುವ ಬುದ್ಧಿವಂತಿಕೆ ಎಷ್ಟು ಚಾಣಕ್ಷತನದಿಂದ ಕೂಡಿದೆಯೆಂದರೆ, ಆರ್‌1 ಮತ್ತು ಆರ್2, ಅಂದರೆ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಮಾತ್ರ ಹಿಂದಿ ಕಲಿಸಬೇಕಾದ ದುರುದ್ದೇಶವಿದೆ. ಇದು ಹಿಂದಿ ಹೇರಿಕೆಯ ಹೊಸ ಅವತಾರ. ಇನ್ನು, ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಇಂಗ್ಲಿಷ್‌, ಹಿಂದಿ ಪರಿಗಣಿಸಿದರೆ ಪ್ರಾದೇಶಿಕ ಭಾಷೆಗಳನ್ನು ಆರ್‌3 ಯಾಗಿ ಮಾತ್ರ ಕಲಿಸಬೇಕು. ಅಂದರೆ, ಆರ್‌ 3 ಭಾಷೆಗಳಿಗೆ ಬೋರ್ಡ್‌ ಪರೀಕ್ಷೆ ಇರುವುದಿಲ್ಲ. ಅಂದರೆ ಕರ್ನಾಟಕದಲ್ಲಿ ಮಕ್ಕಳು ಕನ್ನಡವನ್ನು ಮೂರನೇ ಭಾಷೆಯಾಗಿ ಕಲಿಯಬೇಕು. ಕನ್ನಡಕ್ಕೂ ಬೋರ್ಡ್‌ ಪರೀಕ್ಷೆ ಇಲ್ಲದಂತಾಗುತ್ತದೆ. ಇದು ನಮ್ಮ ರಾಜ್ಯದ ಕನ್ನಡ ಕಲಿಕಾ ಅಧಿನಿಯಮ 2015ನ್ನು ಪೂರ್ಣವಾಗಿ ಹಳ್ಳ ಹಿಡಿಸುತ್ತದೆ ಎಂದಿದ್ದಾರೆ.

ರಾಜ್ಯ ಸರ್ಕಾರ ಏನು ಮಾಡಬೇಕು?:

ಕೇಂದ್ರದ ಹಿಂದಿ ಹೇರಿಕೆ ಹುನ್ನಾರ ತಡೆಯಲು ರಾಜ್ಯ ಸರ್ಕಾರ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಕೇಂದ್ರ ಸರ್ಕಾರದ ಮೇಲೆ ಕನ್ನಡ ಸೇರಿ ದೇಶೀಯ ಭಾಷೆಗಳನ್ನು ಪ್ರಥಮ ಭಾಷೆಯಾಗಿ ಕಲಿಸಲು ಅವಕಾಶ ನೀಡುವಂತೆ ಒತ್ತಡ ತರಬೇಕು. ಇಲಾಖೆಯ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಸಿಬಿಎಸ್‌ಇ ಶಾಲೆಗಳಿಗೆ ನಿರಾಕ್ಷೇಪಣೆ ಪತ್ರ(ಎನ್‌ಒಸಿ) ನೀಡಲು ಇರುವ ನಿಯಮಗಳನ್ನು ಇನ್ನಷ್ಟು ಕನ್ನಡ ಪರವಾಗಿ ರೂಪಿಸಿ ರಾಜ್ಯ ಸರ್ಕಾರ ಹತೋಟಿಗೆ ತರಬೇಕಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ. -ಕೋಟ್‌-

ತ್ರಿಭಾಷಾ ಸೂತ್ರ ಕನ್ನಡವೂ ಸೇರಿ ದೇಶದ ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಮಾರಕವಾಗಿದೆ. ಕೂಡಲೇ ಇದನ್ನು ಕೈಬಿಡಬೇಕು. ಹಿಂದಿ ಹೇರಿಕೆ ಹುನ್ನಾರ ಕೈಬಿಟ್ಟು ಹಲವು ಭಾಷಾ, ಸಾಂಸ್ಕೃತಿ ವೈವಿಧ್ಯತೆಯಿಂದ ಕೂಡಿರುವ ಭಾರತದಲ್ಲಿ ಎಲ್ಲಾ ಭಾಷೆಗಳ ಉಳಿವು, ಬೆಳವಣಿಗೆಗೆ ಪೂರಕವಾದ ನಿಯಮ ತರಬೇಕು.

- ಟಿ.ಎ.ನಾರಾಯಣಗೌಡ, ಕರವೇ ರಾಜ್ಯಾಧ್ಯಕ್ಷ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಷ್ಮೇಶ್ವರದಲ್ಲಿ ಮಳೆಗಾಳಿಗೆ ನೆಲಕ್ಕುರುಳಿದ ಮಾವಿನ ಫಸಲು
ಅಂತರ ರಾಜ್ಯ ಕಳ್ಳರ ಭೇಟೆ: ₹ 1.15 ಕೋಟಿ ಮೌಲ್ಯ ವಸ್ತು ವಶ