ಕನ್ನಡಪ್ರಭ ವಾರ್ತೆ ಬೆಳಗಾವಿ
ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರನ್ನು ವಿಜಯಪುರ, ಬಾಗಲಕೋಟೆ ಜಿಲ್ಲೆಗೆ ಪ್ರವೇಶ ನಿರ್ಬಂಧ ಖಂಡಿಸಿ ವಿವಿಧ ಮಠಾಧೀಶರು, ಬಿಜೆಪಿ ನಾಯಕರು, ಹಿಂದು ಸಂಘಟನೆಗಳ ಮುಖಂಡರ ಸಭೆಯು ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಜರುಗಿತು.ಕನ್ಹೇರಿ ಮಠದ ಶ್ರೀಗಳಿಗೆ ವಿಜಯಪುರ, ಬಾಗಲಕೋಟೆ ಜಿಲ್ಲೆಗೆ ಪ್ರವೇಶ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ಕ್ರಮವನ್ನು ಸಭೆ ತೀವ್ರವಾಗಿ ಖಂಡಿಸಿತು. ಕನ್ಹೇರಿ ಶ್ರೀಗಳ ಜೊತೆಗೆ ಇಡೀ ಹಿಂದು ಸಮಾಜದ ಬೆಂಬಲವಿದ್ದು, ಬಬಲೇಶ್ವರ ಕ್ಷೇತ್ರದಿಂದಲೇ ಹಿಂದು ಸಮಾವೇಶ ಮಾಡುವ ಮೂಲಕ ಹೋರಾಟ ಆರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಎಂ.ಬಿ.ಜಿರಲಿ, ಕನ್ಹೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರಿಗೆ ವಿಜಯಪುರ, ಬಾಗಲಕೋಟೆ ಜಿಲ್ಲೆಗೆ ಪ್ರವೇಶ ನಿರ್ಬಂಧಿಸಿರುವ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಲಾಯಿತು. ಎಲ್ಲ ಹಿಂದು ನಾಯಕರು ಸೇರಿ ಚರ್ಚೆ ಮಾಡಿದ್ದೇವೆ. ಕನ್ಹೇರಿ ಮಠದ ಶ್ರೀಗಳ ಸನ್ನಿಧಿಯಲ್ಲಿ ಚರ್ಚೆ ಮಾಡಿದ್ದೇವೆ. ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿ ನೀತಿಯನ್ನು ಖಂಡಿಸುತ್ತೇವೆ. ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ತಹಶೀಲ್ದಾರ ಮೂಲಕ ಸರ್ಕಾರ ಮನವಿ ಸಲ್ಲಿಸಲಾಗುವುದು ಎಂದರು.ಶ್ರೀಗಳ ನಿರ್ಬಂಧ ಆದೇಶ ವಾಪಸ್ ಪಡೆಯದಿದ್ದರೆ ಬೀದಿಗೆ ಇಳಿದು ಹೋರಾಟ ಮಾಡಲಾಗುವುದು. ಶ್ರೀಗಳು ಹಿಂದು ಸಮಾಜದ ಸಂಸ್ಕೃತಿಯನ್ನು ಪ್ರೀತಿಸುವವರು. ರೈತರಾಗಿ ಅನೇಕ ಯೋಜನೆ, ಗೋ ರಕ್ಷಣೆ, ಸಾವಯವ ಕೃಷಿ ಮಾಡಿದ್ದಾರೆ. ಕನ್ಹೇರಿ ಶ್ರೀಗಳು ನಮ್ಮೆಲ್ಲರಿಗೆ ಆದರ್ಶರಾಗಿದ್ದಾರೆ. ಇಡೀ ರಾಷ್ಟ್ರದ ಸಮಸ್ತ ಹಿಂದು ಮುನ್ನಡೆಸುವ ಶಕ್ತಿ ಶ್ರೀಗಳಿಗೆ ಇದೆ. ವೀರಶೈವ ಲಿಂಗಾಯತ ಸಮಾಜಕ್ಕೆ ಶ್ರೀಗಳು ಬೆನ್ನೆಲುಬು ಆಗಿದ್ದಾರೆ. ಸರ್ಕಾರ ದೊಡ್ಡ ತಪ್ಪು ಹೆಜ್ಜೆಯನ್ನು ಇಟ್ಟಿದೆ. ಜಾತಿ ಗಣತಿಯ ಮೂಲಕ ಹಿಂದು ಸಮಾಜವನ್ನು ಒಡೆಯುವ ಯತ್ನ ಮಾಡಿದೆ ಎಂದು ಆರೋಪಿಸಿದರು.ಬಿಜೆಪಿ ಸುದ್ದಿಗೋಷ್ಠಿಗೆ ಯತ್ನಾಳ ಹಾಜರ್...!
ಬಿಜೆಪಿ ನಾಯಕರು ಕರೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಉಚ್ಛಾಟಿತ ನಾಯಕ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಜರಾಗಿ ಗಮನ ಸೆಳೆದರು. ಬಿಜೆಪಿ ನಾಯಕರ ಸಮ್ಮುಖದಲ್ಲೇ ಬಿಜೆಪಿ ರಾಜ್ಯಾಧಕ್ಷ್ಯ ಬಿ.ವೈ. ವಿಜಯೇಂದ್ರ ವಿರುದ್ಧ ಕಿಡಿಕಾರಿದರು. ಮತ್ತೆ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದರೆ ನಾನು ಪ್ರತ್ಯೇಕವಾಗಿ ಜೆಸಿಬಿ ಪಕ್ಷವನ್ನು ಕಟ್ಟುತ್ತೇನೆ ಎಂದು ಘೋಷಿಸಿದರು. ಆದರೆ, ಈ ಬಗ್ಗೆ ಬಿಜೆಪಿ ನಾಯಕರ್ಯಾರು ಚಕಾರ ಎತ್ತಲಿಲ್ಲ. ಸುದ್ದಿಗೋಷ್ಠಿಯಲ್ಲಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಸಂಸದ ರಮೇಶ ಕತ್ತಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಿಜೆಪಿ ನಾಯಕ ಎಂ.ಬಿ.ಜಿರಲಿ ಮತ್ತಿತರರು ಉಪಸ್ಥಿತರಿದ್ದರು.