ಹಿಂದೂ ಧಾರ್ಮಿಕ ಶಿಕ್ಷಣ ಯೋಜನೆ: ಕೆದಂಬಾಡಿ ಗ್ರಾಮದಲ್ಲಿ ಪ್ರಥಮ ಪ್ರಯೋಗ

KannadaprabhaNewsNetwork | Published : Jan 21, 2025 12:33 AM

ಸಾರಾಂಶ

ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆಯುವ ಹಿಂದೂ ಧಾರ್ಮಿಕ ಶಿಕ್ಷಣಕ್ಕೆ ಶೃಂಗೇರಿ ಮಠದಿಂದಲೇ ಪಠ್ಯ ಪುಸ್ತಕ ಮತ್ತು ಶಿಕ್ಷಕ ತರಬೇತಿ ಕಾರ್ಯ ನಡೆಯಲಿದೆ. ಇದನ್ನು ಅನುಷ್ಠಾನಗೊಳಿಸಲು ಪುತ್ತೂರು ತಾಲೂಕು ಮಟ್ಟದ ಮೇಲುಸ್ತುವಾರಿ ಸಮಿತಿ ರಚನೆಯಾಗುತ್ತಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ತಾಲೂಕಿನಲ್ಲಿ ೩ ಹಂತದಲ್ಲಿ ಶಾಲಾ ಮಕ್ಕಳಿಗೆ ನೀಡಲು ಉದ್ದೇಶಿಸಿರುವ ಹಿಂದೂ ಧಾರ್ಮಿಕ ಶಿಕ್ಷಣ ಯೋಜನೆಯಲ್ಲಿ ಮೊದಲ ಹಂತವಾಗಿ ಕೆದಂಬಾಡಿ ಗ್ರಾಮದಲ್ಲಿ ಮೊದಲ ಗ್ರಾಮ ಸಮಿತಿ ರಚನೆಗೊಂಡಿದೆ. ಈ ಮೂಲಕ ಇಲ್ಲಿ ಪ್ರಥಮ ಪ್ರಯೋಗಕ್ಕೆ ಚಾಲನೆ ನೀಡಲಾಗಿದೆ.

ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಮತ್ತು ಶ್ರೀ ವಿಧುಶೇಖರ ಸ್ವಾಮೀಜಿ ಮಾರ್ಗದರ್ಶನದಲ್ಲಿ ನಡೆಯುವ ಹಿಂದೂ ಧಾರ್ಮಿಕ ಶಿಕ್ಷಣಕ್ಕೆ ಶೃಂಗೇರಿ ಮಠದಿಂದಲೇ ಪಠ್ಯ ಪುಸ್ತಕ ಮತ್ತು ಶಿಕ್ಷಕ ತರಬೇತಿ ಕಾರ್ಯ ನಡೆಯಲಿದೆ. ಇದನ್ನು ಅನುಷ್ಠಾನಗೊಳಿಸಲು ಪುತ್ತೂರು ತಾಲೂಕು ಮಟ್ಟದ ಮೇಲುಸ್ತುವಾರಿ ಸಮಿತಿ ರಚನೆಯಾಗುತ್ತಿದೆ.

ಕೆದಂಬಾಡಿ ಗ್ರಾಮದಲ್ಲಿ ತಾಲೂಕಿನ ಮೊದಲ ಗ್ರಾಮ ಸಮಿತಿಯನ್ನು ಭಾನುವಾರ ತಿಂಗಳಾಡಿ ಶ್ರೀ ದೇವತಾ ಭಜನಾ ಮಂದಿರದಲ್ಲಿ ನಡೆದ ಸಭೆಯಲ್ಲಿ ರಚಿಸಿ ಹಿಂದೂ ಧಾರ್ಮಿಕ ಶಿಕ್ಷಣವನ್ನು ಗ್ರಾಮದ ಮಕ್ಕಳಿಗೆ ನೀಡಲು ನಿರ್ಧರಿಸಲಾಯಿತು. ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ, ಹಿಂದೂ ಧರ್ಮದಲ್ಲಿ ಉದಾತ್ತ ಸಂಸ್ಕೃತಿ, ಆಚಾರ ವಿಚಾರ, ನಂಬಿಕೆ, ಪದ್ಧತಿ, ಧಾರ್ಮಿಕ ಅಂಶಗಳಿದ್ದರೂ, ಇವುಗಳನ್ನು ನಮ್ಮ ಮಕ್ಕಳಿಗೆ ವ್ಯವಸ್ಥಿತವಾಗಿ ಕಲಿಸುವ ಮಾಧ್ಯಮವಿಲ್ಲದ ಕಾರಣ ಹಿಂದೂ ಮಕ್ಕಳು ಆಧುನಿಕತೆಯ ಸೆಳೆತಕ್ಕೆ ಸಿಕ್ಕಿ ಧರ್ಮದಿಂದ ದೂರವಾಗುತ್ತಿದ್ದಾರೆ. ಇದರ ಪ್ರಯೋಜನ ಇತರರು ಪಡೆಯುವಂತಾಗಿದೆ. ಇದನ್ನು ತಪ್ಪಿಸಿ ಹಿಂದೂ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡುವುದೇ ಧಾರ್ಮಿಕ ಶಿಕ್ಷಣದ ಗುರಿ ಎಂದರು.

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಪ್ರತೀ ಗ್ರಾಮದಲ್ಲಿ ಅಗತ್ಯ ಶಿಕ್ಷಕರನ್ನು ನೇಮಿಸಿ, ವಾರದಲ್ಲಿ ಕನಿಷ್ಠ ಒಂದು ತರಗತಿ ನೀಡಬೇಕು. ಗ್ರಾಮಸ್ಥರ ದೇಣಿಗೆಯಿಂದಲೇ ಶಿಕ್ಷಕರಿಗೆ ಗೌರವಧನ ನೀಡಬಹುದಾಗಿದೆ. ಭವಿಷ್ಯದ ಹಿಂದೂ ಸಮಾಜವನ್ನು ಸುಸಂಸ್ಕೃತಗೊಳಿಸುವ ಯೋಜನೆ ಇದು ಎಂದರು.

ದೇವತಾ ಭಜನಾ ಮಂದಿರದ ಅಧ್ಯಕ್ಷ ಜಯರಾಮ ರೈ ಮಿತ್ರಂಪಾಡಿ ಅಧ್ಯಕ್ಷತೆ ವಹಿಸಿದ್ದರು.

ಹಿಂದೂ ಧಾರ್ಮಿಕ ಶಿಕ್ಷಣ ಯೋಜನೆ ಕೆದಂಬಾಡಿ ಗ್ರಾಮ ಸಮಿತಿ ಅಧ್ಯಕ್ಷರಾಗಿ ತಾರಾ ಬಳ್ಳಾಲ್ ಬೀಡು, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕುಮಾರ್, ಜತೆ ಕಾರ್ಯದರ್ಶಿಯಾಗಿ ಸುಜಾತಾ ಮುಳಿಗದ್ದೆ, ಸಂಘಟನಾ ಕಾರ್ಯದರ್ಶಿಯಾಗಿ ಪ್ರವೀಣ್ ಶೆಟ್ಟಿ ಮಠ ಮತ್ತು ಸೂರ್ಯಪ್ರಸನ್ನ ರೈ, ಕೋಶಾಧಿಕಾರಿಯಾಗಿ ವರುಣ್, ಸಂಚಾಲಕರಾಗಿ ಸೀತಾರಾಮ ರೈ ಕೆದಂಬಾಡಿಗುತ್ತು, ಸಹ ಸಂಚಾಲಕರಾಗಿ ಮೋಹನ್ ಶೆಟ್ಟಿ ಮಜಲಮೂಲೆ, ಗಂಗಾಧರ ಮುಳಿಗದ್ದೆ, ಗೌರವಾಧ್ಯಕ್ಷರಾಗಿ ಉಂಡೆಮನೆ ಶ್ರೀಕೃಷ್ಣ ಭಟ್ ಆಯ್ಕೆಯಾದರು.

ಈ ವರ್ಷದ ಯುಗಾದಿಯಿಂದಲೇ ತಾಲೂಕಿನ ಎಲ್ಲ ಗ್ರಾಮಗಳ ಶ್ರದ್ಧಾ ಕೇಂದ್ರವನ್ನು ಕೇಂದ್ರವಾಗಿಟ್ಟುಕೊಂಡು ಏಕ ಕಾಲದಲ್ಲಿ ಹಿಂದೂ ಧಾರ್ಮಿಕ ಶಿಕ್ಷಣ ಆರಂಭಿಸಲಾಗುತ್ತದೆ. ೧ರಿಂದ ೪ನೇ ತರಗತಿ, ೫ರಿಂದ ೮ನೇ ತರಗತಿ ಮತ್ತು ೯ರಿಂದ ದ್ವಿತೀಯ ಪಿಯುಸಿ- ಹೀಗೆ ೩ ಹಂತದಲ್ಲಿ ಧಾರ್ಮಿಕ ಶಿಕ್ಷಣ ನಡೆಯಲಿದ್ದು, ಇದಕ್ಕಾಗಿ ೩ ಹಂತದ ಪಠ್ಯ ಪುಸ್ತಕ ಶೃಂಗೇರಿ ಮಠದಿಂದ ಸಿಗಲಿದೆ. ಗ್ರಾಮ ಮಟ್ಟದಲ್ಲಿ ನೇಮಕಗೊಳ್ಳುವ ಶಿಕ್ಷಕರಿಗೆ ಶೃಂಗೇರಿಯಿಂದಲೇ ತರಬೇತಿ ನೀಡಲಾಗುತ್ತದೆ. ತಾಲೂಕಿನ ಗ್ರಾಮಗಳಲ್ಲಿ ಗ್ರಾಮ ಸಮಿತಿ ರಚನೆಯಾಗುತ್ತಿದ್ದು, ಜ.೨೬ರಂದು ತಾಲೂಕು ಮೇಲುಸ್ತುವಾರಿ ಸಮಿತಿ ಸಭೆ ಪುತ್ತೂರಿನಲ್ಲಿ ನಡೆಯಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

Share this article