ಹುಬ್ಬಳ್ಳಿ:
ಭಾರತೀಯ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ ಮತ್ತು ಪೋಷಣೆಗೆ ಜೈನ ಧಾರ್ಮಿಕ ಕೇಂದ್ರಗಳು ಮಹತ್ವದ ಕೊಡುಗೆ ನೀಡಿವೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.ತಾಲೂಕಿನ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಸೋಮವಾರ ಭಗವಾನ್ ಪಾರ್ಶ್ವನಾಥರ ನಿರ್ವಾಣ ಕಲ್ಯಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಚಾರ್ಯ ಗುಣಧರ ನಂದಿ ಮಹಾರಾಜರು ತೀರ್ಥಕ್ಷೇತ್ರದಲ್ಲಿ ಸ್ಮರಣೀಯ ಸಮಾರಂಭ ಏರ್ಪಡಿಸಿ ಈ ಪ್ರದೇಶದ ಜನರನ್ನು ಧರ್ಮದ ಮಾರ್ಗದಲ್ಲಿ ಕೊಂಡೊಯ್ದು, ಅವರು ಶಾಂತಿ, ಸಮಾಧಾನದಿಂದ ಬದುಕು ನಡೆಸಲು ಪ್ರೇರಣೆ ನೀಡುತ್ತಿದ್ದಾರೆ ಎಂದರು.ನವಗ್ರಹ ಕ್ಷೇತ್ರಕ್ಕೆ ಯಾರಾದರೂ ಭೇಟಿ ನೀಡಿದರೆ ಅವರಿಗೆ ಧರ್ಮದ ಚಿಂತನೆಯತ್ತ ಮನಸ್ಸು ತಿರುಗುತ್ತದೆ. ಇಲ್ಲಿಯ ವಾತಾವರಣದಿಂದ ಶಾಂತಿ, ಸಮಾಧಾನಗಳು ನೆಲೆಸುತ್ತವೆ. ತಾವು ಈ ಕ್ಷೇತ್ರಕ್ಕೆ ಹಲವು ಬಾರಿ ಬಂದಿರುವುದಾಗಿ ನುಡಿದ ಶೆಟ್ಟರ್, ಆಚಾರ್ಯರು ಇಲ್ಲಿಗೆ ಪಾದಾರ್ಪಣೆ ಮಾಡಿದ ದಿನದಿಂದ ಕ್ಷೇತ್ರವು ಪ್ರಗತಿಯತ್ತ ಸಾಗಿ ಈಗ ಅದ್ಭುತ ಧಾರ್ಮಿಕ ಪ್ರವಾಸಿ ಕೇಂದ್ರವಾಗಿ ಪರಿವರ್ತಿತವಾಗಿದೆ ಎಂದು ಶ್ಲಾಘಿಸಿದರು.
ಸಾನ್ನಿಧ್ಯ ವಹಿಸಿದ್ದ ಕಾಗಿನೆಲೆ ಕನಕಗುರು ಪೀಠದ ನಿರಂಜನಾನಂದ ಪುರಿ ಶ್ರೀಗಳು ಮಾತನಾಡಿ, ಭಕ್ತಿ ಇಲ್ಲದೇ ಮುಕ್ತಿ ಇಲ್ಲ. ಅಂತಹ ಭಕ್ತಿಯನ್ನು ಮೈಗೂಡಿಸಿಕೊಳ್ಳುವ ಕಾರ್ಯಕ್ರಮ ಹಮ್ಮಿಕೊಂಡಿರುವ ನವಗ್ರಹ ತೀರ್ಥಕ್ಷೇತ್ರದ ಆಚಾರ್ಯ ಗುಣಧರನಂದಿ ಮಹಾರಾಜರ ಕಾರ್ಯವು ಶ್ಲಾಘನೀಯ. ವರೂರು ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯಕ್ರಮವು ದಕ್ಷಿಣ ಭಾರತದ ಕುಂಭಮೇಳವನ್ನು ನೆನಪಿಸುತ್ತಿದೆ ಎಂದರು.ಕರ್ನಾಟಕ ಜೈನ ಅಸೋಸಿಯೇಷನ್ ಅಧ್ಯಕ್ಷ ಜಿತೇಂದ್ರ ಕುಮಾರ, ಉಪಾಧ್ಯಕ್ಷ ಶೀತಲ ಪಾಟೀಲ, ಕಾರ್ಯದರ್ಶಿ ಆಶಾಪ್ರಭು ಮೊದಲಾದವರನ್ನು ಸನ್ಮಾನಿಸಲಾಯಿತು. ಗುರುದೇವ ಆಚಾರ್ಯ ಕುಂತುಸಾಗರ ಮಹಾರಾಜರು, ಆಚಾರ್ಯ ಗುಣಧರ ನಂದಿ ಮಹಾರಾಜರು, ವಜ್ರಕುಮಾರ, ವಿಮಲ ತಾಳಿಕೋಟಿ, ಎ.ಸಿ. ಪಾಟೀಲ ಸೇರಿದಂತೆ ಹಲವರಿದ್ದರು.ಭಗವಾನ್ ಪಾರ್ಶ್ವನಾಥರ ಮೋಕ್ಷ ಕಲ್ಯಾಣ
ಸನ್ಯಾಸ ದೀಕ್ಷೆ ನಂತರ ಧರ್ಮ ಪ್ರಚಾರದಲ್ಲಿ ತೊಡಗಿದ ಭಗವಾನ್ ಪಾರ್ಶ್ವನಾಥರ ಮೋಕ್ಷ ಕಲ್ಯಾಣ ಕಾರ್ಯಕ್ರಮವು ವೇದಿಕೆ ಮೇಲೆ ಆಗಮ ಶಾಸ್ತ್ರೋಕ್ತ ಮಂತ್ರ ಸಹಿತ ಧಾರ್ಮಿಕ ವಿಧಿ-ವಿಧಾನಗಳಿಂದ ನೆರವೇರಿತು. ಪಾರ್ಶ್ವನಾಥರು ಸಮ್ಮೇರ ಶಿಖರ ಏರುವುದು, ಅಲ್ಲಿ ಯೋಗಮಾರ್ಗದ ಮೂಲಕ ಪ್ರಾಣವಾಯು ನಿರೋಧ ಮಾಡುವುದು, ನಿರ್ವಾಣದ ನಂತರ ಕೆಳಗೆ ಬಿದ್ದ ಅವರ ಉಗುರು ಮತ್ತು ಕೂದಲುಗಳನ್ನು ಸೌಧರ್ಮ ಇಂದ್ರ ಸಂಗ್ರಹಿಸುವುದು, ನಿರ್ವಾಣ ಹೊಂದಿದ ನೆಲದ ಧೂಳನ್ನು ಹಣೆಗೆ ಹಚ್ಚಿಕೊಳ್ಳುವುದು, ಈ ಸ್ಥಳ ಸಿದ್ಧಸ್ಥಾನ ಎಂದು ಪ್ರಸಿದ್ಧಿ ಪಡೆಯುವುದು ಮೊದಲಾದ ದೃಶ್ಯಾವಳಿಗಳು ವೇದಿಕೆ ಮೇಲೆ ಅಭಿನಯಿಸಲ್ಪಟ್ಟವು.ಪಂಚಲೋಹ ಪ್ರತಿಮೆಗೆ ಉಪಸ್ಥಿತರಿದ್ದ ಆಚಾರ್ಯರು ಪುಷ್ಪಾಂಜಲಿ ಅರ್ಪಿಸಿದರು. ಆಚಾರ್ಯ ಮಧುರಶಾಸ್ತ್ರಿ, ಪ್ರತಿಷ್ಠಾಚಾರ್ಯ, ಶ್ರೀಮಂತ ಪಂಡಿತ, ಅಜಿತ ಪಂಡಿತ ಮೊದಲಾದವರು ನಿರ್ವಾಣ ಕಲ್ಯಾಣ ಕಾರ್ಯಕ್ರಮ ನಡೆಸಿಕೊಟ್ಟರು. ರಾಜಸ್ಥಾನ ಔರಾದಿಂದ ಆಗಮಿಸಿದ ಸೌರಭಸೇನ ಪಟ್ಟಾಚಾರ್ಯರು, ಧರ್ಮಸೇನ ಭಟ್ಟಾರಕ ಸ್ವಾಮೀಜಿ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಶ್ರಮಣರು ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದರು.
ಮನಸೆಳೆದ ಸಂಗೀತ ಕಾರ್ಯಕ್ರಮ:ಸೋಮವಾರ ಸಂಜೆ ನಿರೂಪಕಿ ಅನುಶ್ರೀ ಮತ್ತು ಸಂಗೀತ ನಿರ್ದೇಶಕ ಅರ್ಜುನ ಜನ್ಯ ಅವರ ಸಂಗೀತ ಕಾರ್ಯಕ್ರಮ ನೋಡಲು ಸಭಾ ಮಂಟಪದಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ಇದಕ್ಕೂ ಪೂರ್ವದಲ್ಲಿ ಪ್ರಸಿದ್ಧ ಗಾಯಕ ಸುರೇಶ ವಾಡಕರ ಅವರ ಗೀತ ಸಂಗೀತ ಕಾರ್ಯಕ್ರಮವು ಸೋಮವಾರದ ಪ್ರಮುಖ ಆಕರ್ಷಣೆಯಾಗಿತ್ತು. ಪತ್ನಿ ಪದ್ಮಶ್ರೀ ಮತ್ತು ಸಂಗಡಿಗ ವಾದ್ಯಗಾರರ ಜತೆ ಅವರು ಹಲವು ಸುಮಧರ ಗೀತೆಗಳನ್ನು ಹಾಡಿ ನೆರೆದ ಜನರನ್ನು ರಂಜಿಸಿದರು.