ಹೊಸೂರಿನ ಹಿಂದು ರುದ್ರಭೂಮಿ ವಕ್ಫ್ ಕಪಿಮುಷ್ಠಿಗೆ

KannadaprabhaNewsNetwork | Published : Nov 6, 2024 11:56 PM

ಸಾರಾಂಶ

ತೇರದಾಳ ಸೇರಿದಂತೆ ಕೆಲ ರೈತರ ಜಮೀನಿನ ಪಹಣಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಹೆಸರು ಎಂದು ನಮೂದಾಗಿರುವ ವಿಷಯ ತಾಲೂಕಿನಾದ್ಯಂತ ಪ್ರತಿಧ್ವನಿಸಿದೆ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ತೇರದಾಳ ಸೇರಿದಂತೆ ಕೆಲ ರೈತರ ಜಮೀನಿನ ಪಹಣಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಹೆಸರು ಎಂದು ನಮೂದಾಗಿರುವ ವಿಷಯ ತಾಲೂಕಿನಾದ್ಯಂತ ಪ್ರತಿಧ್ವನಿಸಿದೆ. ಹೊಸೂರಿನ ಮಸಣವಾಟ (ಸ್ಮಶಾನ)ದ ಪಹಣಿಯಲ್ಲಿ ಖಬರಸ್ಥಾನ ಸುನ್ನಿ ವಕ್ಫ್ ಆಸ್ತಿ ಹೆಸರು ದಾಖಲಾಗಿದೆ. ನಗರದ ಸರ್ವೆ ನಂ.೬೪ ರಲ್ಲಿರುವ ೧.೩೯ ಗುಂಟೆ ಜಾಗದ ಪಹಣಿಯು ೨೦೨೦ರ ಅ.೧೩ರಿಂದ ಖಬರಸ್ಥಾನ ಸುನ್ನಿ ವಕ್ಫ್ ಹೆಸರಿನಲ್ಲಿ ನಮೂದಾಗಿದೆ.

ಈ ಮೊದಲು ಸಣ್ಣವ್ವ ಕೋಲಾರ ಎಂಬಾಕೆ ಸರ್ಕಾರಕ್ಕೆ ನೀಡಿದರನ್ವಯ ೧.೩೯ ಎಕರೆಯಷ್ಟು ಪ್ರದೇಶದಲ್ಲಿ ೧ ಎಕರೆ ಮಸಣವಾಟ(ಸ್ಮಶಾನ)ವಾಗಿ ಹಲವಾರು ವರ್ಷಗಳಿಂದ ರುದ್ರಭೂಮಿಯಾಗಿ ಈಗಲೂ ನಿರ್ವಹಣೆಯಾಗುತ್ತಿದೆ. ಉಳಿದ ೩೯ ಗುಂಟೆಯಷ್ಟು ಜಾಗೆಯು ಖಬರಸ್ಥಾನ ನಿರ್ವಹಿಸುತ್ತಿದೆ. ಇದೀಗ ಎಲ್ಲ ೧.೩೯ ಎಕರೆಯಷ್ಟು ಜಾಗೆ ಖಬರಸ್ಥಾನ ಸುನ್ನಿ ವಕ್ಫ್ ಎಂದಾಗಿರುವ ದಾಖಲೆ ಜನರನ್ನು ಆಶ್ಚರ್ಯಗೊಳಿಸಿದೆ.

ಸ್ಮಶಾನದ ಮೇಲೂ ವಕ್ಫ್‌ ಕಣ್ಣು:

ವಕ್ಫ್ ಕಪಿಮುಷ್ಠಿ ರಬಕವಿ-ಬನಹಟ್ಟಿಗೂ ವಕ್ಕರಿಸಿದೆ. ಹೊಸೂರಿನ ಹಿಂದೂಗಳ ಸ್ಮಶಾನದ ಮೇಲೂ ಅದರ ಕಣ್ಣು ಬಿದ್ದಿದೆ. ದಾನ ನೀಡಿದ ರೈತ ಮಹಿಳೆ ಸಣ್ಣವ್ವಳ ಹೆಸರಲ್ಲಿ ಜಮಖಂಡಿ ಎಸ್‌ಬಿಐ ಕೃಷಿ ಶಾಖೆಯಲ್ಲಿ ₹೩ಲಕ್ಷ ಸಾಲವೂ ಇದ್ದು, ಇದೀಗ ವಕ್ಫ್ ಹೆಸರಿಗೆ ವರ್ಗಾವಣೆಯಾಗಿದೆ. ತಮ್ಮ ಶಾಖೆಯಲ್ಲಿ ಸಾಲದ ಯಾವುದೇ ದಾಖಲೆ ಇಲ್ಲವೆಂದು ಬ್ಯಾಂಕ್ ಸ್ಪಷ್ಟನೆ ನೀಡಿದೆ. ಸ್ಮಶಾನಕ್ಕೆಂದು ಭೂಮಿ ದಾನ ಮಾಡಿದ್ದ ಸಣ್ಣವ್ವಳ ಜಮೀನು ಡಿ ಉತಾರೆಯ ಇತಿಹಾಸ ಗಮನಿಸಿದಾಗ ಯಾವುದೇ ಸಾಲದ ಋಣಭಾರವಿಲ್ಲದ ಮಾಹಿತಿ ದೊರೆತಿದೆ ಎಂದು ಶಿವಾನಂದ ಬುದ್ನಿ ತಿಳಿಸಿದ್ದಾರೆ.

ನಾವಲಗಿ ಗ್ರಾಮದ 8 ಎಕರೆ ಹಿಂದೂ ರುದ್ರಭೂಮಿಯೂ ವಕ್ಫ್‌ ಆಸ್ತಿಯೆಂದು ಹಕ್ಕು ಬದಲಾವಣೆಗೊಂಡಿರುವ ಬಗ್ಗೆ ತಾಪಂ ಮಾಜಿ ಸದಸ್ಯ ಗುರು ಮರಡಿಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರ ತಕ್ಷಣ ಮೊದಲಿನಂತೆ ಹಕ್ಕು ಬದಲಿಸಿ ನ್ಯಾಯ ಒದಗಿಸಲು ಆಗ್ರಹಿಸಿದ್ದಾರೆ. ಖಾಸಗಿ ಒಡೆತನದಲ್ಲಿರುವ ಭೂಮಿಗೆ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಅದು ನಮ್ಮ ವಶದಲ್ಲಿತ್ತು ಎಂದು ತಗಾದೆ ತೆಗೆಯುತ್ತಿದ್ದಾರೆಂದು ಆರೋಪಿಸಿರುವ ಬಿಜೆಪಿಯ ತೇರದಾಳ ಶಾಸಕ ಸಿದ್ದು ಸವದಿ ರೈತರು ಕೂಡಲೇ ಎಚ್ಚೆತ್ತುಕೊಂಡು ತಾಲೂಕು ಕಚೇರಿಗೆ ತೆರಳಿ ತಮ್ಮ ಭೂ ದಾಖಲೆ ಪರಿಶೀಲಿಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

Share this article