- ’ಹಿಂದುತ್ವ’ ಪುಸ್ತಕ ಬಿಡುಗಡೆ, ಆರ್‌ಎಸ್‌ಎಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮ
ಪ್ರಪಂಚದಲ್ಲಿ ಹಿಂದುತ್ವ ಬದುಕಿನ ಒಂದು ಪದ್ಧತಿಯ ರೂಪದಲ್ಲಿ ಪ್ರಾಚೀನ ಸಂಸ್ಕೃತಿ, ಧರ್ಮ ಮತ್ತು ನಾಗರಿಕತೆಯ ಭಾಗವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಾ ಸಂಘದ ದಕ್ಷಿಣ ಕರ್ನಾಟಕ ಪ್ರಾಂತ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಹೇಳಿದರು.ನಗರದ ಮಧುವನ ಬಡಾವಣೆ ಆರ್‌ಎಸ್‌ಎಸ್ ಸಮರ್ಪಣಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ’ಹಿಂದುತ್ವ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಹಿಂದೂ ಸಂಸ್ಕೃತಿ, ಧರ್ಮ ಆಚರಿಸುವ ಪರಂಪರೆ ನಮ್ಮಲ್ಲಿ ರೂಪುಗೊಂಡಿದೆ. ಸಣ್ಣ ಸಣ್ಣ ಆಚಾರ, ಸಂಸ್ಕಾರಗಳನ್ನು ನೀಡಿದೆ. ಪರ ಸ್ತ್ರೀಯರನ್ನು ತಾಯಿಯಂತೆ, ಇತರರ ವಸ್ತುವನ್ನು ಮಣ್ಣಿನಂತೆ, ಎಲ್ಲಾ ಜೀವ ಸಂಕುಲವನ್ನು ತನ್ನಂತೆಯೇ ನೋಡಬೇಕು. ಈ ಆಚರಣೆಗಳಿಂದ ಜೀವನ ವಿಕಾಸ ಮಾಡಿಕೊಳ್ಳಬೇಕು ಎಂದರು.
ಹಿಂದುತ್ವದ ಪೂಜೆ, ಪುನಸ್ಕಾರಗಳು, ಪದ್ಧತಿಗಳು, ಆಹಾರ ಮತ್ತು ರೀವಾಜುಗಳನ್ನು ಬಂಧಿಸಿಡುವ ಕೆಲವು ಪ್ರಯತ್ನ ನಡೆದಿವೆ. ಹಿಂದುತ್ವ ಇಷ್ಟಕ್ಕೆ ಸೀಮಿತವಾಗಿಲ್ಲ. ರಿಲೀಜನ್ ಎಂದರೆ ಧರ್ಮವಲ್ಲ. ಧರ್ಮ ಅತ್ಯಂತ ವಿಶಾಲ ಅರ್ಥವುಳ್ಳದ್ದು. ನಮ್ಮ ದೇಶದಲ್ಲಿ ಹಿಂದೂ ರಿಲೀಜನ್ ಎಂಬ ಸಂಗತಿಯಿಲ್ಲ, ಅನೇಕ ರಿಲೀಜನ್‌ಗಳಿವೆ, ಅವೆಲ್ಲವೂ ಹಿಂದು ಸ್ವಭಾದ ರೀಲೀಜನ್‌ಗಳೇ ಎಂದು ತಿಳಿಸಿದರು.ಹಿಂದುತ್ವ ಎಂಬ ಪದವನ್ನು ಇಂಗ್ಲೀಷ್‌ಗೆ ಭಾಷಾಂತರಿಸಿದರೆ ಅದು ಹಿಂದುತನ ಎಂದಾಗುತ್ತದೆ. ಇಸಂ ರೂಢಿಗತ ಅರ್ಥವು ಸೀಮಿತ ಪರಿಕಲ್ಪನೆಯನ್ನು ಹೊಂದಿದೆ. ಆ ಕಲ್ಪನೆಯೊಂದಿಗೆ ನೀವು ನಿಮ್ಮನ್ನು ಹೊಂದಿಸಿಕೊಳ್ಳಬೇಕು. ಹಿಂದುತ್ವದ ಜೊತೆ ಇರುವವರು, ತಮ್ಮ ಸಾಮರ್ಥ್ಯ ಕ್ಕೆ ಹಿಂದುತ್ವ ಒಪ್ಪುವವರು ವಿಕಾಸಗೊಳಿಸಲಿದೆ ಎಂದರು.ಹಿಂದುತ್ವ ಎನ್ನುವುದನ್ನು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಬಹಳ ಉತ್ತಮ ಶಬ್ದಗಳಲ್ಲಿ ತಿಳಿಸಿದ್ದಾರೆ. ಏಕರೂಪದ ಸ್ಥಾಯಿ ಯಾದ ಬದಲಾಯಿಸಲಾಗದ ಹಿಂದು ಧರ್ಮ ಎಂಬುದು ಯಾವುದೂ ಇಲ್ಲ. ಅವರ ಕಾಲದಲ್ಲಿ ಹಿಂದೂಯಿಸಂ ಎಂಬ ಪದ ವನ್ನೇ ಬಳಸಲಾಗುತ್ತಿತ್ತು. ಆದರೆ ವಾಸ್ತವದಲ್ಲಿ ಅವರು ಹೇಳಲು ಪ್ರಯತ್ನಿಸಿರುವುದು ಹಿಂದುತನ ಎನ್ನುವುದು ಹೊರತು, ಇಸಂ ಅಲ್ಲ ಎಂದು ಹೇಳಿದರು.ಪ್ರಸ್ತುತ ವಿಶ್ವದಲ್ಲಿ ಸಾಮಾಜಿಕ, ಆರ್ಥಿಕ, ಮಾನಸಿಕ ಸಮಸ್ಯೆಗಳ ರೂಪದಲ್ಲಿ ಕಾಡುತ್ತಿರುವ ಅನೇಕ ಅಸ್ಥಿತ್ವದ ಬಿಕ್ಕಟ್ಟು ಗಳಿವೆ. ಅವುಗಳಿಗೆ ಪರಿಹಾರ ನೀಡಲು ಸಾಧ್ಯವಿರುವುದು ಹಿಂದುತ್ವಕ್ಕೆ ಮಾತ್ರ. ವರ್ತಮಾನ ಸಂದರ್ಭದಲ್ಲಿ ಹಿಂದುತ್ವದ ದರ್ಶನ, ಸಿದ್ಧಾಂತ, ಪರಂಪರೆ, ಆಚಾರ ವಿಚಾರಗಳನ್ನು ಅರ್ಥಮಾಡಿಕೊಂಡು ಪದ ಬಳಕೆಯೊಂದಿಗೆ ಪ್ರಸ್ತುತಪಡಿಸುವುದು ಎಲ್ಲರಿಗೂ ಸವಾಲಿನ ಕೆಲಸವಾಗಿದೆ ಎಂದರು.ಹಿಂದುತ್ವದ ಮೇಲೆ ಕಾಲ್ಪನಿಕ ಆರೋಪ ಹೊರಿಸುವ ಬದಲು ನಿಜವಾದ ಹಿಂದುತ್ವ ಪಾಲಿಸಬೇಕು. ಹಿಂದುತ್ವದ ಹೆಸರು ತೆಗೆದುಕೊಳ್ಳದಿದ್ದರೂ ಪರವಾಗಿಲ್ಲ. ನಡವಳಿಕೆ ಪುರಸ್ಕರಿಸಬೇಕು. ಜಗತ್ತಿಗೆ ಧರ್ಮ, ಸಮತೋಲನ ಮತ್ತು ಧೈರ್ಯವನ್ನು ನೀಡುವ, ಎಲ್ಲಾ ವಿರೋಧಗಳನ್ನು ಸರಿದೂಗಿಸಿಕೊಂಡು ಪ್ರಗತಿಗೆ ಸಹಾಯ ಮಾಡುವ ಹೊಸ ಜಗತ್ತನ್ನು ರಚಿಸಬೇಕಾದರೆ ಹಿಂದುತ್ವ ಧರ್ಮದಲ್ಲಿ ಸಾಗಬೇಕಿದೆ ಎಂದರು.