ಹಿಪ್ಪರಗಿ ಕಾರು ಸ್ಫೋಟ: ನಾಲ್ವರ ಬಂಧನ

KannadaprabhaNewsNetwork |  
Published : Aug 15, 2026, 04:00 AM IST
(ಪೋಟೋ-14ಬಿಕೆಟಿ3,(1) ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿಯಲ್ಲಿ ನಡೆದ ಕಾರು ಸ್ಫೋಟದ ಚಿತ್ರ) | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಾಗಲಕೋಟೆ ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿಯಲ್ಲಿ ನಡೆದ ಕಾರು ಸ್ಫೋಟ ಪ್ರಕರಣದ ತನಿಖೆಯಲ್ಲಿ ಬಾಗಲಕೋಟೆ ಜಿಲ್ಲಾ ಪೊಲೀಸರು ಮಹತ್ವದ ಪ್ರಗತಿ ಸಾಧಿಸಿದ್ದಾರೆ. ಭೂಮಿ ಹಾಗೂ ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಹನಮಂತ ಅಥಣಿ ಅವರನ್ನು ಹತ್ಯೆ ಮಾಡುವ ಉದ್ದೇಶದಿಂದ ಪೂರ್ವಯೋಜಿತವಾಗಿ ಕಾರನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆಸಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿಯಲ್ಲಿ ನಡೆದ ಕಾರು ಸ್ಫೋಟ ಪ್ರಕರಣದ ತನಿಖೆಯಲ್ಲಿ ಬಾಗಲಕೋಟೆ ಜಿಲ್ಲಾ ಪೊಲೀಸರು ಮಹತ್ವದ ಪ್ರಗತಿ ಸಾಧಿಸಿದ್ದಾರೆ. ಭೂಮಿ ಹಾಗೂ ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಹನಮಂತ ಅಥಣಿ ಅವರನ್ನು ಹತ್ಯೆ ಮಾಡುವ ಉದ್ದೇಶದಿಂದ ಪೂರ್ವಯೋಜಿತವಾಗಿ ಕಾರನ್ನು ಗುರಿಯಾಗಿಸಿಕೊಂಡು ಸ್ಫೋಟ ನಡೆಸಲಾಗಿತ್ತು ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಜತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಕೂಡ ಪೊಲೀಸರು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಪ್ರಮುಖ ಆರೋಪಿ ಬಬಲೇಶ್ವರ ಬಳಿಯ ಬಿದರಿ ಗ್ರಾಮದ ಶಿವಾನಂದ ಪರಸಪ್ಪ ಜಲ್ಲಿ (29). ಆತನೊಂದಿಗೆ ಹಿಪ್ಪರಗಿಗೆ ತೆರಳಿ ಕೃತ್ಯಕ್ಕೆ ಸಹಕರಿಸಿದ ಆರೋಪದ ಮೇಲೆ ರೇವಣಪ್ಪ ನಿಂಗಪ್ಪ ಜಲ್ಲಿ (24) ಬಂಧಿತನಾಗಿದ್ದಾನೆ. ಮೊಬೈಲ್ ಫೋನ್ ವ್ಯವಸ್ಥೆ ಹಾಗೂ ಬೆದರಿಕೆ ಸಂವಹನಕ್ಕೆ ಸಹಕರಿಸಿದ ಆರೋಪದ ಮೇಲೆ ಮಹಾದೇವ ಬೀರಪ್ಪ ಸಂಗಾಪುರ (21) ಮತ್ತು ಮಲ್ಲಿಕಾರ್ಜುನ ಮುರಗೆಪ್ಪ ಭದ್ರಾಪನವರ (23) ಬಂಧಿತರಾಗಿದ್ದಾರೆ.

ಸ್ಫೋಟದಲ್ಲಿ ಹನಮಂತ ಅವರು ಪ್ರಾಣಾಪಾಯದಿಂದ ಪಾರಾದ ಬಳಿಕ, ಅವರನ್ನು ಹಾಗೂ ಅವರ ಸಹೋದರ ಬಸವರಾಜ್ ಅವರಿಗೆ ಬೆದರಿಕೆ ಸಂದೇಶಗಳನ್ನು ಕಳುಹಿಸಿ ಹಣ ಮತ್ತು ಭೂಮಿ ವಿಚಾರದ ಬೇಡಿಕೆಗಳನ್ನು ಕೈಬಿಡುವಂತೆ ಒತ್ತಡ ಹೇರಲು ಆರೋಪಿಗಳು ಪ್ರಯತ್ನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಶಿವಾನಂದನ ಸಂಬಂಧಿ ಗಜಾನನ ಸಂಗಾಪುರ ಸ್ಫೋಟಕ ವಸ್ತುಗಳನ್ನು ವ್ಯವಸ್ಥೆ ಮಾಡಲು ಸಹಕರಿಸಿದ್ದಾನೆ ಎನ್ನಲಾಗಿದ್ದು, ಆತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಭೂಮಿ-ಹಣಕಾಸು ವಿವಾದ:

ಪೊಲೀಸರು ತನಿಖೆ ನಡೆಸಿದ ಪ್ರಕಾರ, ಶಿವಾನಂದ ಮತ್ತು ಹನಮಂತ ಅಥಣಿ ನಡುವೆ ಭೂಮಿ ಹಾಗೂ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ವಿವಾದವಿತ್ತು. ಶಿವಾನಂದನ ಪಿತೃಸಹೋದರ ಹನಮಂತ ಅವರಿಂದ ಸಾಲ ಪಡೆದಿದ್ದು, ಅದರ ಹಿನ್ನೆಲೆಯಲ್ಲಿ ಸುಮಾರು ನಾಲ್ಕು ಎಕರೆ ಜಮೀನು ಹನಮಂತ ಅವರಿಗೆ ಮಾರಾಟವಾಗಿತ್ತು. ಬಳಿಕ ಜಮೀನನ್ನು ಮರಳಿ ಪಡೆಯುವುದಾಗಿ ಶಿವಾನಂದ ಭರವಸೆ ನೀಡಿದ್ದರೂ ಹಣ ಹೊಂದಿಸಲು ಸಾಧ್ಯವಾಗಿರಲಿಲ್ಲ. ಹಣ ಮರುಪಾವತಿಸುವಂತೆ ಹನಮಂತ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ, ಜಮೀನು ಹಾಗೂ ಮನೆ ಕಳೆದುಕೊಳ್ಳುವ ಭೀತಿಯಿಂದ ಶಿವಾನಂದ ಕೊಲೆ ಸಂಚು ರೂಪಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಕಾರಿನ ಬಳಿ ಸ್ಫೋಟಕ:

ಘಟನೆ ನಡೆದ ರಾತ್ರಿ ಶಿವಾನಂದ ಮತ್ತು ರೇವಣಪ್ಪ ಹಿಪ್ಪರಗಿಗೆ ತೆರಳಿ ಹನಮಂತ ಅವರ ಚಲನವಲನ ಗಮನಿಸಿದ್ದರು. ಜನರ ಓಡಾಟ ಕಡಿಮೆಯಾದ ಬಳಿಕ ಅವರ ವಾಹನದ ಸಮೀಪ ಸ್ಫೋಟಕ ಸಾಧನ ಇಟ್ಟಿದ್ದರು ಎನ್ನಲಾಗಿದೆ. ರಾತ್ರಿ ಸುಮಾರು 10.45ಕ್ಕೆ ಸ್ಫೋಟ ಸಂಭವಿಸಿದ್ದು, ಕಾರಿಗೆ ಭಾರಿ ಹಾನಿಯಾಗಿದೆ. ಆದರೆ ಸ್ಫೋಟದ ವೇಳೆ ಹನಮಂತ ಕಾರಿನೊಳಗೆ ಇರದ ಕಾರಣ ಅದೃಷ್ಟವಶಾತ್‌ ಅವರು ಬದುಕುಳಿದಿದ್ದಾರೆ.

ಹನಮಂತ ಬದುಕುಳಿದಿರುವುದು ತಿಳಿದ ಬಳಿಕ ಆರೋಪಿಗಳು ಗುರುತು ಮರೆಮಾಚಲು ಪರ್ಯಾಯ ಮೊಬೈಲ್ ಹಾಗೂ ಸಿಮ್ ವ್ಯವಸ್ಥೆ ಮಾಡಿಕೊಂಡು ಆಗಸ್ಟ್ 6ರಂದು ಎಸ್ಎಮ್ಎಸ್ ಮತ್ತು ಮೂಲಕ ಹನಮಂತ ಹಾಗೂ ಬಸವರಾಜ್ ಅವರಿಗೆ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ, ಮೊಬೈಲ್ ತಾಂತ್ರಿಕ ಮಾಹಿತಿ, ಸ್ಫೋಟಕ ವಸ್ತುಗಳ ಖರೀದಿ ಮತ್ತು ಪೂರೈಕೆಯ ಜಾಡು ಹಾಗೂ ಇತರೆ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ.

ಅಥಣಿ ಮತ್ತು ವಿಜಯಪುರದಲ್ಲಿರುವ ಸ್ಫೋಟಕ ವಸ್ತುಗಳ ಖರೀದಿಗೆ ಸಂಬಂಧಿಸಿದ ತಲಾ ಒಂದು ಅಂಗಡಿಯ ಮಾಲೀಕರು ಮತ್ತು ವ್ಯವಸ್ಥಾಪಕರನ್ನೂ ವಿಚಾರಣೆಗಾಗಿ ವಶಕ್ಕೆ ಪಡೆದು ತನಿಖೆ ಮುಂದುವರಿಸಲಾಗಿದೆ. ಎಸ್ಪಿ ಸಿದ್ಧಾರ್ಥ್‌ ಗೋಯಲ್ ಅವರ ನೇತೃತ್ವದಲ್ಲಿ ಎಎಸ್ಪಿ ಜಗದೀಶ್ ಹಾಗೂ ಜಮಖಂಡಿ ಡಿವೈಎಸ್ಪಿ ಜಮೀರ್ ಅವರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆದಿದೆ. ಸಿಪಿಐ ಎಂ.ಡಿ.ಮಡ್ಡಿ ಸೇರಿದಂತೆ ಪಿಎಸ್ಐಗಳು ಹಾಗೂ ತಾಂತ್ರಿಕ ಮತ್ತು ತನಿಖಾ ತಂಡದ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ಡಿಸಿ ಭೇಟಿ
ಗ್ರಂಥಾಲಯಗಳು ಜ್ಞಾನ ವೃದ್ಧಿ ಕೇಂದ್ರಗಳು