ಐತಿಹಾಸಿಕ ಕೋಟೆ ಆಂಜನೇಯಸ್ವಾಮಿ ಕಾರ್ತಿಕ ದೀಪೋತ್ಸವ

KannadaprabhaNewsNetwork |  
Published : Nov 12, 2026, 01:15 AM IST
೫೨೬ ವರ್ಷಗಳ ಇತಿಹಾಸದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ | Kannada Prabha

ಸಾರಾಂಶ

ಕಾರ್ತಿಕ ಮಾಸದ ಪ್ರಯುಕ್ತ ದೇವಸ್ಥಾನದ ಗರ್ಭಗುಡಿ ಹಾಗೂ ಸನ್ನಿಧಾನದಲ್ಲಿ ಸಂಪೂರ್ಣ ಘೃತ (ತುಪ್ಪದ ದೀಪ) ದೀಪಗಳ ಬೆಳಕಿನಲ್ಲಿ ಶ್ರೀ ಆಂಜನೇಯಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಿರುವುದು ಈ ಬಾರಿಯ ವಿಶೇಷ ಆಕರ್ಷಣೆಯಾಗಿದೆ. ಪ್ರತಿ ಶನಿವಾರ ಬೆಳಗ್ಗೆ ಮತ್ತು ಸಂಜೆ ಮಹಾಪೂಜೆ ಸಂದರ್ಭದಲ್ಲಿ ಭಕ್ತರು ತುಪ್ಪದ ದೀಪದ ಬೆಳಕಿನಲ್ಲಿ ಸ್ವಾಮಿ ದರ್ಶನ ಪಡೆಯಬಹುದಾಗಿದೆ.

ಕನ್ನಡಪ್ರಭವಾರ್ತೆ ತಿಪಟೂರು

ನಗರದ ೫೨೬ ವರ್ಷ ಇತಿಹಾಸ ಹೊಂದಿರುವ ಪುರಾತನ ಧಾರ್ಮಿಕ ಕ್ಷೇತ್ರವಾದ ಶ್ರೀ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ನವೆಂಬರ್ ೧೪ರಿಂದ ಡಿಸೆಂಬರ್ ೫ರವರೆಗೆ ಪ್ರತಿ ಶನಿವಾರ ವಿಶೇಷ ದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯನ ಆಸ್ಥಾನ ಗುರುಗಳಾಗಿದ್ದ ಶ್ರೀ ವ್ಯಾಸರಾಜ ಗುರು ಸಾರ್ವಭೌಮರಿಂದ ಪ್ರತಿಷ್ಠಾಪಿತವಾಗಿದೆ ಎಂದು ಹೇಳಲಾಗುವ ಈ ಪುಣ್ಯಕ್ಷೇತ್ರದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ನ್ಯಾಸ ಮಂಡಳಿ ಟ್ರಸ್ಟ್ ತಿಳಿಸಿದೆ.

ಪ್ರತಿ ಶನಿವಾರ ಬೆಳಗ್ಗೆ ೧೦ರಿಂದ ೧೧ರವರೆಗೆ ಮಹಾಪೂಜೆ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ ೭.೩೦ರಿಂದ ೮.೩೦ರವರೆಗೆ ದೀಪೋತ್ಸವ, ಅಷ್ಟಾವಧಾನ ಹಾಗೂ ಮಹಾಮಂಗಳಾರತಿ ನೆರವೇರಲಿದ್ದು, ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಗುವುದು.

ಕಾರ್ತಿಕ ಮಾಸದ ಪ್ರಯುಕ್ತ ದೇವಸ್ಥಾನದ ಗರ್ಭಗುಡಿ ಹಾಗೂ ಸನ್ನಿಧಾನದಲ್ಲಿ ಸಂಪೂರ್ಣ ಘೃತ (ತುಪ್ಪದ ದೀಪ) ದೀಪಗಳ ಬೆಳಕಿನಲ್ಲಿ ಶ್ರೀ ಆಂಜನೇಯಸ್ವಾಮಿಯ ದರ್ಶನಕ್ಕೆ ಅವಕಾಶ ಕಲ್ಪಿಸಿರುವುದು ಈ ಬಾರಿಯ ವಿಶೇಷ ಆಕರ್ಷಣೆಯಾಗಿದೆ. ಪ್ರತಿ ಶನಿವಾರ ಬೆಳಗ್ಗೆ ಮತ್ತು ಸಂಜೆ ಮಹಾಪೂಜೆ ಸಂದರ್ಭದಲ್ಲಿ ಭಕ್ತರು ತುಪ್ಪದ ದೀಪದ ಬೆಳಕಿನಲ್ಲಿ ಸ್ವಾಮಿ ದರ್ಶನ ಪಡೆಯಬಹುದಾಗಿದೆ.

ಕಾರ್ತಿಕ ದೀಪಾರಾಧನೆ ಸೇವೆಯಲ್ಲಿ ಭಾಗವಹಿಸಲು ಇಚ್ಛಿಸುವ ಭಕ್ತರು ಹಣತೆ, ಬತ್ತಿ, ಎಣ್ಣೆ ಹಾಗೂ ತುಪ್ಪವನ್ನು ದೇವಸ್ಥಾನಕ್ಕೆ ಸಮರ್ಪಿಸಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಟ್ರಸ್ಟ್ ಮನವಿ ಮಾಡಿದೆ.

ದೇವಸ್ಥಾನದ ಶಿಲಾಮಯ ರಾಜಗೋಪುರ ನಿರ್ಮಾಣ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ಮುಂದಿನ ಹಂತದಲ್ಲಿ ಶಿಲಾಮಯ ಪ್ರಾಕಾರದ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ದೇವಸ್ಥಾನದ ಸಮಗ್ರ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಕಾರ್ಯಗಳನ್ನು ಶೀಘ್ರ ಪೂರ್ಣಗೊಳಿಸುವ ಉದ್ದೇಶದಿಂದ ಭಕ್ತಾದಿಗಳ ಸಹಕಾರ ಕೋರಲಾಗಿದೆ.

ಕಲ್ಪತರು ನಾಡಿನ ಭಕ್ತರು ಸೇರಿದಂತೆ ಎಲ್ಲರೂ ತನು, ಮನ, ಧನದ ಮೂಲಕ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕೆಂದು ನ್ಯಾಸ ಮಂಡಳಿ ಟ್ರಸ್ಟ್ ಮನವಿ ಮಾಡಿದೆ.

ದೇವಸ್ಥಾನದ ಅಭಿವೃದ್ಧಿ ಮತ್ತು ಜೀರ್ಣೋದ್ಧಾರ ನಿಧಿಗೆ ದೇಣಿಗೆ ನೀಡಲು ದೇವಸ್ಥಾನದಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದೆ. ಅಲ್ಲದೆ, ಯೂನಿಯನ್ ಬ್ಯಾಂಕ್ ತಿಪಟೂರು ಶಾಖೆಯಲ್ಲಿರುವ ದೇವಸ್ಥಾನದ ಅಧಿಕೃತ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಬಹುದಾಗಿದೆ. ಕ್ಯೂಆರ್ ಕೋಡ್ ಮೂಲಕವೂ ದೇಣಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ೯೯೪೫೯೩೩೩೪೬, ೯೯೪೫೯೩೩೩೨೯, ೮೯೭೧೪೩೯೭೩೯ ಸಂಪರ್ಕಿಸಬಹುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಡಿನಾಡಿನಲ್ಲಿ ಕನ್ನಡದ ಕಂಪು ಹರಡಲು ‘ಜೊಲ್ಲೆ ಧ್ವನಿ’ ಎಫ್‌ಎಂ
ಅಧಿವೇಶನಕ್ಕೆ 7 ಸಾವಿರ ಪೊಲೀಸರ ನಿಯೋಜನೆ