ಸೋಮರಡ್ಡಿ ಅಳವಂಡಿ ಕೊಪ್ಪಳ
ಹೌದು, ದೇಶ, ವಿದೇಶ ಪ್ರವಾಸಿಗರನ್ನು ಕೈಬಿಸಿ ಕರೆಯುವ ಐತಿಹಾಸಿಕ, ಪೌರಾಣಿಕ ಸ್ಮಾರಕಗಳನ್ನು ರಕ್ಷಣೆ ಮಾಡುವುದು ಸೇರಿದಂತೆ ಬರುವ ಪ್ರವಾಸಿಗರಿಗೆ ಕೊಪ್ಪಳ ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರಿಸು ಮುರಸನ್ನುಂಟು ಮಾಡುತ್ತಿದೆ.
ದೇಶದ ಮೂಲೆ ಮೂಲೆಯಿಂದ ಹನುಮಂತನ ಭಕ್ತರು ಹಾಗೂ ವಿದೇಶಿಗಳಿಂದಲೂ ಅಂಜನಾದ್ರಿ ಬೆಟ್ಟಕ್ಕೆ ಪ್ರತಿ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು, ಭಕ್ತರು ಆಗಮಿಸುತ್ತಾರೆ. ದುರಂತ ಎಂದರೆ ಇಲ್ಲಿ ಕನಿಷ್ಠ ಸೌಲಭ್ಯವೂ ಇಲ್ಲದಂತಾಗಿದೆ.ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬಜೆಟ್ ನಲ್ಲಿ ಘೋಷಣೆಯಾಗುವ ಅನುದಾನ ನಂತರ ಕಾರ್ಯರೂಪಕ್ಕೆ ಬರುವುದೇ ಅಪರೂಪ ಎನ್ನುವಂತಾಗಿದೆ.ಈಗಾಗಲೇ ಘೋಷಣೆಯಾಗಿರುವ ₹200 ಕೋಟಿ ಪೈಕಿ ಕೇವಲ ₹21 ಕೋಟಿ ವೆಚ್ಚದ ಕಾಮಗಾರಿ ಕುಂಟುತ್ತಾ, ತೇವಳುತ್ತಾ ಸಾಗುತ್ತಿದೆ. ಬರುವ ಪ್ರವಾಸಿಗರು ಶೌಚಕ್ಕೆ ಹೋಗಲು ಸೂಕ್ತ ವ್ಯವಸ್ಥೆ ಇಲ್ಲಿಲ್ಲ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಇಲ್ಲ.
ಅಂಜನಾದ್ರಿಗೆ ರೋಪ್ ವೇ ನಿರ್ಮಾಣ ಮಾಡಬೇಕು ಎನ್ನುವ ಬಹು ವರ್ಷಗಳ ಬೇಡಿಕೆ ಕಾಗದದಲ್ಲಿಯೇ ಕೊಳೆಯುತ್ತಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡುವುದಕ್ಕಾಗಿ ಅಗತ್ಯ ವಸತಿ ವ್ಯವಸ್ಥೆ, ಶಾಪಿಂಗ್ ಕಾಂಪ್ಲೆಕ್ಸ್ ಸೇರಿದಂತೆ ಮೊದಲ ಅಗತ್ಯ ಪೂರೈಕೆ ಮಾಡಬೇಕಾಗಿದೆ. ಪಕ್ಕದಲ್ಲಿಯೇ ಇರುವ ಹಂಪಿಗೆ ಬರುವ ಪ್ರವಾಸಿಗರನ್ನು ಸಹ ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಸೆಳೆಯುವುದಕ್ಕಾಗಿ ಸೂಕ್ತ ಪ್ರಚಾರ ಮತ್ತು ಮೂಲಸೌಕರ್ಯ ಒದಗಿಸಬೇಕಾಗಿದೆ.
ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ರಾಜ್ಯ ಏಳು ಅದ್ಭುತಗಳನ್ನು ಆಯ್ಕೆ ಮಾಡಿದ್ದು, ಅದರಲ್ಲಿ ಹಿರೇಬೆಣಕಲ್ ಸಹ ಒಂದು. ಹೀಗೆ, ಏಳು ಅದ್ಭುತಗಳಲ್ಲೊಂದಾಗಿರುವ ಹಿರೇಬೆಣಕಲ್ ಮೊರೇರ ತಟ್ಟೆಗಳ ಸ್ಥಳಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಳವಾಗುತ್ತಲೇ ಇದ್ದು, ಅಭಿವೃದ್ಧಿಯ ಅಗತ್ಯವಿದೆ.
ದೇವಾಲಯಗಳ ಚಕ್ರವರ್ತಿ ಇಟಗಿ ಮಹಾದೇವ ದೇವಾಲಯ, ಕನಕಗಿರಿಯ ಶ್ರೀಕನಕಾಚಲಪತಿ ದೇವಸ್ಥಾನ, ಕೊಪ್ಪಳದ ಅಶೋಕ ಶಿಲಾಶಾಸನ, ಮಳೇಮಲ್ಲೇಶ್ವರ ದೇವಸ್ಥಾನ, ಕುಷ್ಟಗಿ ತಾಲೂಕಿನ ಕೋಟಿಲಿಂಗಗಳ ಪುರ ದೇವಸ್ಥಾನ, ಸೋಮೇಶ್ವರ ದೇವಸ್ಥಾನ ಹೀಗೆ ಐತಿಹಾಸಿಕ ಪ್ರವಾಸಿ ತಾಣಗಳ ಸಂಖ್ಯೆ ಅಪಾರವಾಗಿದ್ದು, ಅವುಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಅಗತ್ಯವಿದೆ.