ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಪರಿಸರ ಅಧ್ಯಾಯನ ವಿಭಾಗ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಜಲದಿನ- 2025ರ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.ಕಾಲೇಜಿನ ಮಕ್ಕಳಿಗೆ ಪ್ರತಿಜ್ಞಾ ವಿಧಿಯ ಪತ್ರಗಳನ್ನು ವಿತರಿಸಿ, ಅವರ ವಿವರಗಳನ್ನು ಅರ್ಜಿಯ ನಮೂನೆಯಲ್ಲಿ ಭರ್ತಿ ಮಾಡಿ ಸಹಿ ಪಡೆಯುವ ಮೂಲಕ ನೀರಿನ ಬಳಕೆಯ ಮಹತ್ವವನ್ನು ತಿಳಿಸಲಾಯಿತು.
ಪ್ರತಿಜ್ಞಾ ವಿಧಿಯನ್ನು ಬೋಧಿಸುವ ಮುನ್ನ ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ಸುತ್ತಲಿನ ಪರಿಸರವನ್ನು ಸಮರ್ಪಕವಾಗಿ ಪೋಷಿಸಲು, ನಾಗರೀಕ ಸಮಾಜ ವಿಫಲವಾಗಿದ್ದು, ಅನೇಕ ಪ್ರಕೃತಿ ವಿಕೋಪದಿಂದಾಗಿ ಇಂದು ಮಾನವಕುಲ ನಲುಗಿಹೋಗಿದೆ. ಮುಂದೊಂದು ದಿನ ಕುಡಿಯುವ ನೀರಿಗಾಗಿ ತತ್ತರಿಸುವಂತ ಸಂದರ್ಭ ರ್ಮಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಾದ ನಾವು ಪರಿಸರ ಪೋಷಿಸಿ, ಬೆಳಸುವುದರ ಮೂಲಕ ಸುಸ್ಥಿರ ಅಭಿವೃದ್ಧಿಯತ್ತ ಮುಖ ಮಾಡಬೇಕಿದೆ. ಹಾಗಾಗಿ ನಾವು ನೀರಿನ ಮಿತವಾದ ಬಳಕೆ, ಕೆರೆಗಳ ಶುದ್ಧೀಕರಣ, ಜಲಮೂಲಗಳ ರಕ್ಷಣೆ, ನೀರಿನ ಹಿಂಗುವಿಕೆ ಮತ್ತು ಮಳೆ ನೀರಿನ್ನು ಸಹ ಸಮರ್ಪಕವಾಗಿ ಬಳಸಿಕೊಳ್ಳುವ ಜೊತೆಗೆ ನೀರನ್ನು ಬಹಳ ಜತನವಾಗಿ ಉಪಯೋಗಿಸಿಕೊಂಡು ಎಲ್ಲಾ ಜೀವಸಂಕುಲಗಳ ಉಳಿವಿಗೆ ಶ್ರಮಿಸಬೇಕಿದೆ ಎಂದು ಹೇಳಿದರು.
ನೀರು ಅತ್ಯಂತ ಅಮೂಲ್ಯವಾಗಿದ್ದು ಅದು ಜೀವ ಜಲವಷ್ಟೇ ಅಲ್ಲದೆ ಎಲ್ಲಾ ಜೀವರಾಶಿಗಳ ಜೀವಾಳವಾಗಿದೆ. ಹಾಗಾಗಿ ಅದರ ಪುನರ್ಬಳಕೆ ಮತ್ತು ಮಿತವಾದ ಬಳಕೆಗಳು ಮುಂದಿನ ದಿನಗಳಲ್ಲಿ ಸುಸ್ಥಿರ ಪರಿಸರಕ್ಕೆ ನೆರವಾಗುವ ಮೂಲಕ ಮಾನವಕುಲದ ಏಳಿಗೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸುತ್ತಾ, ಜಲ ಸಂರಕ್ಷಣೆ ಅಭಿಯಾನದಲ್ಲಿ ನಾವೆಲ್ಲರೂ ಬದ್ಧತೆಯಿಂದ, ಜವಾಬ್ದಾರಿಯಿಂದ ಭಾಗವಹಿಸಿ ಜನ ಸಮುದಾಯಕ್ಕೆ ಇದರ ಬಗ್ಗೆ ಅರಿವು ಮೂಡಿಸುವಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಪಾತ್ರ ದೊಡ್ಡದು ಎಂದು ಅಭಿಪ್ರಾಯಪಟ್ಟರು.ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ, ಶೈಕ್ಷಣಿಕ ಡೀನ್ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಚ್. ಶ್ರೀಧರ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಜಿ. ದೊಡ್ಡರಸಯ್ಯ, ಡಾ.ಸಿ.ಎಸ್. ಸಿದ್ದರಾಜು, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಂ.ಎನ್. ವೆಂಕಟಲಕ್ಷ್ಮಿ, ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಕೆ. ಸೋಮಶೇಖರ, ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪಿ.ಜಿ. ಪುಷ್ಪಾರಾಣಿ, ಆರ್. ಸಿದ್ದಪ್ಪ, ಎ.ಆರ್. ನಂದೀಶ ಇದ್ದರು.