ಕೊಪ್ಪಳ: ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳಗೆ ಸಚಿವ ಸ್ಥಾನ ದೊರೆಯದ ಹಿನ್ನೆಲೆ ಅಸಮಾಧಾನಗೊಂಡ ಕೊಪ್ಪಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಗೊಂಡಬಾಳ ಹಾಗೂ ಕೊಪ್ಪಳ ಬ್ಲಾಕ್ ಕಾಂಗ್ರೆಸ್ ಸಮಿತಿಯ ಏಳು ಪದಾಧಿಕಾರಿಗಳು ತಮ್ಮ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜೀನಾಮೆ ಸಲ್ಲಿಸಿರುವ ಕೃಷ್ಣಾರಡ್ಡಿ ಗಲಬಿ ಅವರು, ಶಾಸಕ ರಾಘವೇಂದ್ರ ಹಿಟ್ನಾಳ್ ಆಪ್ತ ಬೆಂಬಲಿಗರಾಗಿದ್ದು, ರಾಬಕೊವಿ ಒಕ್ಕೂಟದ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿನ್ನೆಯಷ್ಟೇ ಕೊಪ್ಪಳದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಬೆಂಬಲಿಗರು ಪ್ರತಿಭಟನೆ ಸಹ ನಡೆಸಿದ್ದರು. ಅದರ ಬೆನ್ನಲ್ಲೇ ಬ್ಲಾಕ್ ಕಾಂಗ್ರೆಸ್‌ನ ಏಳು ಮಂದಿ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆ ಸಲ್ಲಿಸಿರುವುದು ಜಿಲ್ಲಾ ಕಾಂಗ್ರೆಸ್ ರಾಜಕೀಯದಲ್ಲಿ ಹೊಸ ಬೆಳವಣಿಗೆಗೆ ಕಾರಣವಾಗಿದೆ.
ಮೊದಲೇ ಘೋಷಿಸಿದ್ದ ಕೃಷ್ಣರೆಡ್ಡಿ ಗಲಬಿ: ಶಾಸಕ ಕೆ ರಾಘವೇಂದ್ರ ಹಿಟ್ನಾಳಗೆ ಸಚಿವ ಸ್ಥಾನ ನೀಡದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೃಷ್ಣಾರೆಡ್ಡಿ ಗಲಬಿ ಜೂ.15ರ ಪೂರ್ವದಲ್ಲಿಯೇ ಘೋಷಿಸಿದ್ದರು. ಸದ್ಯ ಆ ಮಾತಿನಂತೆ ಶಾಸಕ ಹಿಟ್ನಾಳಗೆ ಸಚಿವ ಸ್ಥಾನ ದೊರೆಯದ ಹಿನ್ನೆಲೆ ತಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜತೆಗೆ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಚಾಂದಪಾಷ ಕಿಲ್ಲೇದಾರ, ಗವಿಸಿದ್ದನಗೌಡ ವಿ ಪಾಟೀಲ್, ರವಿಯಯ್ಯ ಕೊಪ್ಪಳ, ಪ್ರದಾನ ಕಾರ್ಯದರ್ಶಿ ಶಂಕರ ಅಗಳಕೇರಾ, ಕಾರ್ಯದರ್ಶಿ ಹನುಮಂತ ಮತ್ತೂರು, ಖಜಾಂಚಿ ಧರ್ಮರಾಜ ಹಿಟ್ನಾಳ ಸಹ ರಾಜೀನಾಮೆ ನೀಡಿದ್ದಾರೆ.ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಇಲ್ಲಿಯವರೆಗೂ ಸಚಿವ ಸ್ಥಾನ ದೊರೆಯದೇ ಇರುವುದು ದುರಂತವೇ ಸರಿ. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಶಾಸಕರಾಗಿ ಆಯ್ಕೆಯಾಗಿ ಕೊಪ್ಪಳದ ರಾಜಕೀಯ ಇತಿಹಾಸದಲ್ಲಿ ದಾಖಲೆ ಬರೆದ ಹಾಗೂ ಹೈದ್ರಾಬಾದ್ ಕರ್ನಾಟಕ ವ್ಯಾಪ್ತಿಯ ಎಲ್ಲ 41 ಕ್ಷೇತ್ರಗಳಲ್ಲಿ ಏಕೈಕ ಕುರುಬ ಸಮಾಜದ ಶಾಸಕರಾಗಿ ಹೊರಹೊಮ್ಮಿರುವ ಶಾಸಕ ರಾಘವೇಂದ್ರ ಹಿಟ್ನಾಳಗೆ ಸಚಿವ ಸ್ಥಾನ ನೀಡದಿರುವುದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿಗೆ ಬೇಸರದ ಸಂಗತಿಯಾಗಿದೆ ಎಂದು ರಾಜೀನಾಮೆ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಅವರು, ಹಿಟ್ನಾಳ್ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆಯುವ ನಿರೀಕ್ಷೆ ಇತ್ತು. ಆದರೆ ಅವಕಾಶ ನೀಡದಿರುವುದು ಕಾರ್ಯಕರ್ತರು ಹಾಗೂ ಮುಖಂಡರಿಗೆ ಬೇಸರ ತಂದಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು, ಅಂಗೀಕರಿಸುವಂತೆ ಕೋರಿದ್ದಾರೆ.