ಕಾಲೇಜುಗಳಲ್ಲಿ ಎಚ್‌ಐವಿ ಪರೀಕ್ಷೆ, ಅರಿವು ಕಾರ್ಯಕ್ರಮ

KannadaprabhaNewsNetwork |  
Published : Jul 28, 2026, 02:00 AM IST
ಎಚ್‌ಐವಿ | Kannada Prabha

ಸಾರಾಂಶ

ಎಚ್ಐವಿ ಸೋಂಕು ಹರಡುವಿಕೆ ನಿಯಂತ್ರಿಸುವ ಸಲುವಾಗಿ ರಾಜ್ಯಾದ್ಯಂತ ಇರುವ ಕಾಲೇಜುಗಳಲ್ಲಿ ಎಚ್ಐವಿ ಪರೀಕ್ಷೆ ಹಾಗೂ ಸೋಂಕಿನ ಕುರಿತು ಅರಿವು ಮೂಡಿಸಲು ಆರೋಗ್ಯ ಶಿಬಿರ ಆಯೋಜಿಸಲು ಕಾಲೇಜು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ, ಬೆಂಗಳೂರು

ಎಚ್ಐವಿ ಸೋಂಕು ಹರಡುವಿಕೆ ನಿಯಂತ್ರಿಸುವ ಸಲುವಾಗಿ ರಾಜ್ಯಾದ್ಯಂತ ಇರುವ ಕಾಲೇಜುಗಳಲ್ಲಿ ಎಚ್ಐವಿ ಪರೀಕ್ಷೆ ಹಾಗೂ ಸೋಂಕಿನ ಕುರಿತು ಅರಿವು ಮೂಡಿಸಲು ಆರೋಗ್ಯ ಶಿಬಿರ ಆಯೋಜಿಸಲು ಕಾಲೇಜು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಜತೆಗೆ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಸಹ ತನ್ನ ಅಡಿ ಬರುವ ಎಲ್ಲಾ ಕಾಲೇಜುಗಳಲ್ಲಿ ಎಚ್ಐವಿ ಪರೀಕ್ಷೆ ಹಾಗೂ ಅರಿವು ಮೂಡಿಸಲು ಸಂಯೋಜಿತ ಆರೋಗ್ಯ ಶಿಬಿರ ನಡೆಸಲು ಸುತ್ತೋಲೆ ಮೂಲಕ ಸೂಚನೆ ನೀಡಿದೆ.

ಕೇಂದ್ರ ಸರ್ಕಾರವು ದೇಶಾದ್ಯಂತ ಎಚ್‌ಐವಿ ಸೋಂಕಿನ ಹರಡುವಿಕೆ ನಿಯಂತ್ರಿಸುವ ಉದ್ದೇಶದಿಂದ ಮೊಬಿಲೈಸೇಷನ್‌ ಫಾರ್‌ ಏಡ್ಸ್‌ ಸುರಕ್ಷಾ (ಎಂಎಎಸ್) ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಈ ಕಾರ್ಯಕ್ರಮವನ್ನು ಎಲ್ಲಾ ಕಾಲೇಜುಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಕರ್ನಾಟಕ ಏಡ್ಸ್‌ ಪ್ರಿವೆನ್ಷನ್‌ ಸೊಸೈಟಿಯು ಜೂ.1ರಂದು ಕಾಲೇಜು ಶಿಕ್ಷಣ ಇಲಾಖೆ ಹಾಗೂ ವಿಟಿಯುಗೆ ಪತ್ರ ಬರೆದಿತ್ತು.

ಇದರ ಅನ್ವಯ ಕಾಲೇಜು ಶಿಕ್ಷಣ ಇಲಾಖೆ ಹಾಗೂ ವಿಟಿಯು ಜಿಲ್ಲಾ ಏಡ್ಸ್‌ ನಿಯಂತ್ರಣ ಅಧಿಕಾರಿ ಸಹಯೋಗದಲ್ಲಿ ಆರೋಗ್ಯ ಶಿಬಿರ ಹಮ್ಮಿಕೊಳ್ಳಲು ಸುತ್ತೋಲೆಯಲ್ಲಿ ತಿಳಿಸಿದೆ.

ಸುತ್ತೋಲೆಯಲ್ಲಿ ಏನಿದೆ?:

ಎಂಎಎಸ್‌ ಕಾರ್ಯಕ್ರಮದ ಪ್ರಕಾರ ಎಚ್‌ಐವಿ ಸೋಂಕು ಇರುವ ವ್ಯಕ್ತಿಗಳಲ್ಲಿ ಕನಿಷ್ಠ ಶೇ.95ರಷ್ಟು ಜನರು ತಮ್ಮ ಸೋಂಕಿನ ಸ್ಥಿತಿಯನ್ನು ತಿಳಿದುಕೊಳ್ಳಬೇಕು. 2ನೇಯದಾಗಿ ಸೋಂಕು ದೃಢಪಟ್ಟವರಲ್ಲಿ ಕನಿಷ್ಠ ಶೇ.95ರಷ್ಟು ಜನರು ನಿರಂತರ ಎಆರ್‌ಟಿ ಚಿಕಿತ್ಸೆ ಪಯಬೇಕು. 3ನೇಯದಾಗಿ ಎಆರ್‌ಟಿ ಚಿಕಿತ್ಸೆಯಲ್ಲಿ ಇರುವ ಶೇ.99 ಜನರಲ್ಲಿ ವೈರಲ್‌ ಲೋಡ್‌ ನಿಯಂತ್ರಣ ಸಾಧಿಸಬೇಕು. 4ನೇಯದಾಗಿ ಎಚ್ಐವಿ, ಸಿಫಿಲಿಸ್‌ ಹಾಗೂ ಹೆಪಟೈಟಿಸ್‌ ಬಿ ಸೋಂಕುಗಳು ತಾಯಿಯಿಂದ ಮಗುವಿಗೆ ಹರಡುವಿಕೆಯನ್ನು ಶೂನ್ಯಗೊಳಿಸಬೇಕು. ಹೀಗಾಗಿ ಸರ್ಕಾರಿ, ಅನುದಾನಿತ ಕಾಲೇಜು, ಎಲ್ಲಾ ತಾಂತ್ರಿಕ ಕಾಲೇಜುಗಳಲ್ಲಿ ಇಂಟಿಗ್ರೇಟೆಡ್‌ ಹೆಲ್ತ್‌ ಕ್ಯಾಂಪ್‌ ನಡೆಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಆಯಾ ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿಗಳ ಸಹಯೋಗದಲ್ಲಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡು ವರದಿ ನೀಡಬೇಕು ಸ್ಪಷ್ಟಪಡಿಸಲಾಗಿದೆ.

ಕಾಲೇಜುಗಳಲ್ಲಿ ಕ್ಯೂಆರ್‌ ಕೋಡ್:

ಇದಕ್ಕಾಗಿಯೇ http://www.breakfreeindia.org ವೆಬ್‌ಸೈಟ್‌ನಲ್ಲಿ ಎಚ್‌ಐವಿ ಸೆಲ್ಫ್‌ ರಿಸ್ಕ್‌ ಅಸೆಸ್ಮೆಂಟ್‌ ಟೂಲ್‌ ಸಿದ್ಧಪಡಿಸಲಾಗಿದೆ. ಹೀಗಾಗಿ ವೆಬ್‌ಸೈಟ್‌ಗೆ ಭೇಟಿ ನೀಡುವ ಕ್ಯೂಆರ್‌ ಕೋಡನ್ನು ಎಲ್ಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಏಡ್ಸ್‌: ದೇಶದಲ್ಲೇ ರಾಜ್ಯಕ್ಕೆ 3ನೇ ಸ್ಥಾನ:

ರಾಜ್ಯವು ಎಚ್ಐವಿ ಸೋಂಕಿತರ ಸಂಖ್ಯೆಯಲ್ಲಿ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸುಮಾರು 2.60 ಲಕ್ಷ ಎಚ್ಐವಿ ಸೋಂಕಿತರಿದ್ದಾರೆ. 2.05 ಲಕ್ಷ ಮಂದಿ ಎಆರ್‌ಟಿ ಪಡೆಯುತ್ತಿದ್ದಾರೆ. ಉಳಿದಂತೆ ಸುಮಾರು 54 ಸಾವಿರ ಮಂದಿಗೆ ಎಚ್‌ಐವಿ ಪಾಸಿಟಿವ್‌ ಅರಿವಿಲ್ಲ ಅಥವಾ ಎಆರ್‌ಟಿ ಪಡೆಯುತ್ತಿಲ್ಲ. ವಿಶೇಷವಾಗಿ 18ರಿಂದ 35 ವರ್ಷದೊಳಗಿನ ಯುವ ಸಮೂಹದಲ್ಲಿ ಎಚ್‌ಐವಿ ವೇಗವಾಗಿ ಹರಡುತ್ತಿದೆ. ಹೀಗಾಗಿ ಆರೋಗ್ಯ ಶಿಬಿರವು ಏಡ್ಸ್‌ ಸೋಂಕು ನಿಯಂತ್ರಿಸಲು ನೆರವಾಗಲಿದೆ.

*ಎಚ್ಐವಿ ಹೆಲ್ಪ್‌ ಲೈನ್‌ - 1091

*ಎಚ್‌ಐವಿ ಕುರಿತ ಮಾಹಿತಿಗೆ: http://www.breakfreeindia.org ಗೆ ಭೇಟಿ ನೀಡಬಹುದು. ಕ್ಯೂಆರ್‌ ಕೋಡ್‌ ಬಳಸಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ಎಚ್‌ಐವಿ ಸೋಂಕಿನ ಸ್ಥಿತಿಯನ್ನು ತಿಳಿಯಬಹುದು. ಈ ವ್ಯವಸ್ಥೆಯು ಸ್ವಯಂ ಜಾಗೃತಿ ಹೆಚ್ಚಿಸುತ್ತದೆ. ಜತೆಗೆ ಗೌಪ್ಯತೆಯನ್ನು ಕಾಪಾಡುತ್ತದೆ. ವಿದ್ಯಾರ್ಥಿಗಳಲ್ಲಿ ಎಚ್‌ಐವಿ ಸೋಂಕಿನ ಬಗ್ಗೆ ಅರಿವು ಹೆಚ್ಚಿಸುವುದರಿಂದ ಸೋಂಕಿತ ವ್ಯಕ್ತಿಗಳನ್ನು ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆಯಬಹುದು. ಜತೆಗೆ ಅವರಿಂದ ಬೇರೆಯವರಿಗೆ ಹರಡದಂತೆ ತಡೆಯಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ 3 ಲಕ್ಷ ಹಾಗೂ ವಿಟಿಯು ಮತ್ತು ವಿಟಿಯು ಸಂಯೋಜಿತ ಕಾಲೇಜುಗಳಲ್ಲಿ 4 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇವರಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶದ ರಕ್ಷಣೆಗಾಗಿ ಪ್ರಾಣದ ಹಂಗು ತೊರೆಯುವ ಸೈನಿಕರ ಸೇವೆ ವರ್ಣಿಸಲಾಗದು
ಕಾಲ್ಕೆರೆ ಕಾರ್ಯಕ್ಷೇತ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ