- ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ವಿನಯಕುಮಾರ ಹೇಳಿಕೆ । ದಾವಣಗೆರೆ ದುಗ್ಗಮ್ಮನಿಗೆ ಪೂಜೆ, ದರ್ಗಾಗೆ ಚಾದರ ಹೊದಿಸಿ ಪ್ರಾರ್ಥನೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಏ.17ರ ಬೆಳಗ್ಗೆ 10 ಗಂಟೆಗೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತೇನೆ. ಅನಂತರ ದರ್ಗಾಗೆ ತೆರಳಿ ಚಾದರ ಸಲ್ಲಿಸಿದ ನಂತರ, ಹಳೇ ಪಿ.ಬಿ.ರಸ್ತೆಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಬಹಿರಂಗ ಸಭೆ ನಡೆಸಲಿದ್ದೇವೆ ಎಂದರು.
ಬಹಿರಂಗ ಸಭೆ ನಂತರ ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆಯಲ್ಲಿ ತೆರಳಿ, ನಾಮಪತ್ರ ಸಲ್ಲಿಸಲಾಗುವುದು. ಏ.18ಕ್ಕೆ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಮೆರವಣಿಗೆ ತೆರಳಿ ನಾಮಪತ್ರ ಸಲ್ಲಿಸಲು ತೀರ್ಮಾನಿಸಲಾಗಿತ್ತು. ಆದರೆ, ಏ.18ಕ್ಕೆ ಕಾಂಗ್ರೆಸ್ ರ್ಯಾಲಿ ಇದೆ. ಹಾಗಾಗಿ, ಮೆರವಣಿಗೆಯಲ್ಲಿ ಗೊಂದಲ ಆಗಬಾರದೆಂಬ ಕಾರಣಕ್ಕೆ ಏ.17ರಂದೇ ಬೃಹತ್ ರ್ಯಾಲಿಯಲ್ಲಿ ತೆರಳಿ, ನಾಮಪತ್ರ ಸಲ್ಲಿಸುವೆ ಎಂದು ಸ್ಪಷ್ಟಪಡಿಸಿದರು.ಶ್ರೀ ಬೀರಲಿಂಗೇಶ್ವರ ಮೈದಾನದಿಂದ ಬೆಳಗ್ಗೆ 10ರಿಂದ ಹೊರಡುವ ಮೆರವಣಿಗೆ ಮಧ್ಯಾಹ್ನ 3 ಗಂಟೆಯೊಳಗೆ ಡಿಸಿ ಕಚೇರಿ ತಲುಪಲಿದೆ. ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ಅವರಿಗೆ ಮತ್ತೊಂದು ಸೆಟ್ ನಾಮಪತ್ರ ಸಲ್ಲಿಸುತ್ತೇವೆ. ಮಾರ್ಗ ಮಧ್ಯೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ, ದೇವರಾಜ ಅರಸು ಪುತ್ಥಳಿ ಸೇರಿದಂತೆ ಮಹನೀಯರ ಪುತ್ಥಳಿಗಳಿಗೆ ಮಾಲಾರ್ಪಣೆ ಮೂಲಕ ಅಪಾರ ಸಂಖ್ಯೆಯಲ್ಲಿ ಮುಖಂಡರು, ಕಾರ್ಯಕರ್ತರ ಸಮೇತ ಡಿಸಿ ಕಚೇರಿ ತಲುಪಲಾಗುವುದು. ಬಳಿಕ ಉಮೇದುವಾರಿಕೆ ಅರ್ಪಿಸುತ್ತೇವೆ ಎಂದು ತಿಳಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದ ಸಮಸ್ತ ಮತಬಾಂಧವರು, ಹಿತೈಷಿಗಳು, ಬೆಂಬಲಿಗರು, ಸರ್ವ ಜಾತಿ, ಸಮುದಾಯಗಳ ಬಾಂಧವರು ಮೆರವಣಿಗೆಯಲ್ಲಿ ಭಾಗವಹಿಸಬೇಕು. ಈ ಮೂಲಕ ತಮ್ಮನ್ನು ದಾವಣಗೆರೆ ಕ್ಷೇತ್ರದ ಚುನಾವಣೆಯಲ್ಲಿ ಮತ ನೀಡಿ, ಗೆಲ್ಲಿಸಬೇಕು. ನನ್ನ ಮೇಲೆ ಎಷ್ಟೇ ಒತ್ತಡ, ಪ್ರಭಾವ ಬೀರಿದರೂ ನಾನು ಮಾತ್ರ ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ ಎಂದು ಹೇಳಿದರು.
- - -
- - - -16ಕೆಡಿವಿಜಿ1: