ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಸೂಚನೆ
ಬಾಳೆಹೊನ್ನೂರು ಪಟ್ಟಣದಲ್ಲಿ ಶೀಘ್ರದಲ್ಲೇ ಮಹಿಳೆಯರ ಗ್ರಾಮಸಭೆ ನಡೆಸಿ ಅವರ ಕುಂದುಕೊರತೆ ಆಲಿಸಿ ಮಹಿಳಾ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತ್ಯುತ್ಸವ ಉದ್ಘಾಟಿಸಿ, ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು. ಮಹಿಳೆಯರಿಗೆ ಸಮಾಜದಲ್ಲಿ ಸಮಾನ ಹಕ್ಕುಗಳು ಇದ್ದು, ಉದ್ಯೋಗ, ಶಿಕ್ಷಣ, ಅಧಿಕಾರ ಎಲ್ಲವೂ ಸಮಾನವಾಗಿ ದೊರಕಬೇಕಿದೆ. ಆದರೆ ಇಂದು ಮಾಹಿತಿಗಳ ಕೊರತೆಯಿಂದ ಮಹಿಳೆಯರಿಗೆ ಸರ್ಕಾರದ ಹಲವು ಸವಲತ್ತು ಸಮರ್ಪಕವಾಗಿ ತಲುಪುತ್ತಿಲ್ಲ. ಅಧಿಕಾರಿ ಗಳು ಕೂಡ ತಮಗೆ ಇರುವ ಕರ್ತವ್ಯ ಮರೆತಿದ್ದು, ಸರ್ಕಾರದಿಂದ ಯಾವ ಸವಲತ್ತು ದೊರೆಯುತ್ತವೇ ಎಂದು ತಿಳಿದಿಲ್ಲ.ಮಹಿಳೆಯರಿಗೆ ಸಮಸ್ಯೆಗಳಾದಲ್ಲಿ ಗ್ರಾಮಮಟ್ಟದಲ್ಲಿ ಸಮಸ್ಯೆ ಆಲಿಸಲು ಕಾವಲು ಸಮಿತಿಯನ್ನು ಪ್ರತೀ ಗ್ರಾಪಂಗಳಲ್ಲಿ ರಚನೆ ಮಾಡಬೇಕಿದೆ. ಆದರೆ ಹಲವು ಕಡೆಗಳಲ್ಲಿ ಅದು ಆಗಿಲ್ಲ. ಉದ್ಯೋಗ ಖಾತ್ರಿ ಯೋಜನೆಯಡಿ ೧೦೦ ದಿನದ ಉದ್ಯೋಗವನ್ನು ಕಾರ್ಡ್ ಹೊಂದಿರುವವರಿಗೆ ಕಡ್ಡಾಯವಾಗಿ ನೀಡಬೇಕಿದೆ. ಆದರೆ ಇದು ಆಗುತ್ತಿಲ್ಲ. ಸರ್ಕಾರದ ಹಲವು ವೇತನಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದರು.
ಇಂದು ಧರ್ಮ, ಧರ್ಮಗಳ ಮಧ್ಯೆ ಬೆಂಕಿ ಹಚ್ಚಿ ಓಟಿನ ರಾಜಕಾರಣವನ್ನು ಹಲವರು ಮಾಡುತ್ತಾರೆ. ಆದರೆ ಅಂಬೇಡ್ಕರ್ ಪ್ರತಿಯೊಬ್ಬರಿಗೂ ಸಂವಿಧಾನದ ಮೂಲಕ ಬದುಕುವ ಹಕ್ಕು ನೀಡಿದ್ದಾರೆ. ಅಂಬೇಡ್ಕರ್ ಅವರ ಪ್ರಕಾರ ಸಮಾಜ ಆಳಲು ರಾಜನ ಕುಟುಂಬದಿಂದ ರಾಜಕುಮಾರ ಬರಬಾರದು. ಮತಪೆಟ್ಟಿಗೆಗಳ ಮೂಲಕ ಪ್ರತಿಯೊಬ್ಬ ಪ್ರಜೆಯೂ ಸಮಾಜ ಆಳುವ ಕೆಲಸ ಮಾಡಬೇಕಿದೆ.
ಶಿಕ್ಷಣ, ಸಂಘಟನೆ, ಹೋರಾಟ ಇಂದು ಅಗತ್ಯವಾಗಿದ್ದು, ಶಿಕ್ಷಣವಿದ್ದರೆ ತಿಳುವಳಿಕೆ, ಸಂಘಟನೆಯಿದ್ದರೆ ಹೋರಾಟ ನಡೆಯಲಿದೆ ಎಂದರು.
ಭೀಮ್ ಆರ್ಮಿ ಅಧ್ಯಕ್ಷ ಎನ್.ಉಮೇಶ್, ತಹಸೀಲ್ದಾರ್ ತನುಜಾ ಸವದತ್ತಿ, ಪ್ರಮುಖರಾದ ಪವಿತ್ರ, ಗಿರೀಶ್, ಎಂ.ಎಸ್. ಅರುಣೇಶ್, ಹೊನ್ನೇಶ್, ಅಂಬುಜಾ, ಕೃಷ್ಣ, ರಾಘವೇಂದ್ರ, ಮಹಮ್ಮದ್ ಹನೀಫ್, ಇಬ್ರಾಹಿಂ ಶಾಫಿ, ಶ್ರೀಕಾಂತ್, ರಂಜಿತಾ ಶಿವಕುಮಾರ್, ಜಾನಕಿ ಸುರೇಶ್, ಲಲಿತಮ್ಮ ಮತ್ತಿತರರು ಹಾಜರಿದ್ದರು.
ಬಾಳೆಹೊನ್ನೂರಿನ ಕಲಾರಂಗ ಕ್ರೀಡಾಂಗಣದಲ್ಲಿ ಭೀಮ್ ಆರ್ಮಿ ಭಾರತ್ ಏಕತಾ ಮಿಷನ್ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿಯಲ್ಲಿ ಕಳೆದ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.